ಸುರಪುರ: ರೈತ ದೇಶದ ಬೆನ್ನೆಲುಬು ಎಂಬ ಹೇಳಿಕೆ ಕಾಗದದಲ್ಲಿ ಮಾತ್ರ ಉಳಿದಿದೆ. ವಾಸ್ತವದಲ್ಲಿ ರೈತರ ಶೋಷಣೆ ನಡೆಯುತ್ತಿದೆ. ಈ ಬಗ್ಗೆ ಯಾರೊಬ್ಬರಿಗೂ ಕಾಳಜಿ ಇಲ್ಲ. ನಮ್ಮ ರಕ್ಷಣೆ ನಾವು ಮಾಡಿಕೊಳ್ಳದೇ ಹೋದಲ್ಲಿ ಭವಿಷ್ಯದ ದಿನಗಳಲ್ಲಿ ರೈತರಿಗೆ ಉಳಿಗಾಲವಿಲ್ಲ. ಕಾರಣ ನಾವೆಲ್ಲ ಸಂಘಟಿತರಾಗಬೇಕು. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟದ ಅವಶ್ಯಕತೆ ಇದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಣ್ಣ ಹಾಲಭಾವಿ ಹೇಳಿದರು.
ತಾಲೂಕಿನ ಹೆಗ್ಗನದೊಡ್ಡಿ ಗ್ರಾಮದಲ್ಲಿ ಸಂಘದ ಗ್ರಾಮ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.
ರೈತರ ಪರವಾಗಿ ಮಾತನಾಡಿದರೆ ಸಾಲದು. ಅವರ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ಅಧಿಕಾರ ನಡೆಸುವುದು ಅವಶ್ಯಕತೆಯಾಗಿದೆ. ದುರ್ದೈವದ ಸಂಗತಿ ಏನೆಂದರೆ ಬೇನಾಮಿ ಆಸ್ತಿ ಮಾಡುವ ರಾಜಕಾರಣಿಗಳ ಬೆನ್ನಿಗೆ ನಿಂತು ಅವರ ಪರವಾಗಿ ಪ್ರತಿಭಟನೆ ಮಾಡುವ ಜನರು ದೇಶಕ್ಕೆ ಅನ್ನ ನೀಡುವ ರೈತರ ಪರ ಹೋರಟಕ್ಕೆ ಕೈ ಜೋಡಿಸದಿರುವುದು ವಿರ್ಪಯಾಸ. ಇಂತಹ ವಾಸ್ತವಿಕ ಸತ್ಯವನ್ನು ರೈತರು ಅರಿತು ಕೊಳ್ಳಬೇಕು. ನಮ್ಮ ಹಕ್ಕುಗಳ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ಹಣಮಂತ್ರಾಯ ಮಡಿವಾಳ ಮಾತನಾಡಿ, ಇತ್ತೀಚಿನ ಪ್ರವಾಹದಿಂದ ಕೋಟ್ಯಂತರ ರೂ. ಮೊತ್ತದ ಬೆಳೆ ಹಾನಿಯಾಗಿದೆ. ಇನ್ನು ಪರಿಹಾರ ಬರಬೇಕಿದೆ. ಮತ್ತೆ ನದಿಗೆ ನೀರು ಹರಿಸುತ್ತಿರುವುದರಿಂದ ಪುನಃ ಪ್ರವಾಹದ ಭೀತಿ ಎದುರಾಗಿದೆ. ಸರ್ಕಾರ ರೈತರ ನೆರವಿಗೆ ಬರಬೇಕು. ಈಗಾಗಲೇ ಬಿಡುಗಡೆ ಮಾಡಿರುವ ಪರಿಹಾರ ಯಾತಕ್ಕೂ ಸಾಲದು. ಕಾರಣ ಸರಕಾರ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಹೆಗ್ಗನದೊಡ್ಡಿ ಗ್ರಾಮ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಚಂದ್ರಕಾಂತ ನಾಗೂರ (ಅಧ್ಯಕ್ಷ), ಪಂಚಾಕ್ಷರಿ ಹಿರೇಮಠ (ಉಪಾಧ್ಯಕ್ಷ), ಸಿದ್ದಯ್ಯ ಗುತ್ತೇದಾರ (ಕಾರ್ಯದರ್ಶಿ), ನಿಂಗಣ್ಣ ಹುಣಸಿಹಾಳ (ಖಜಾಂಚಿ), ಪ್ರಭು ಗುಡಗುಂಟಿ (ಉಪ ಖಜಾಂಚಿ), ಚಂದ್ರಯ್ಯ ಗುತ್ತೇದಾರ (ಕಾರ್ಯಾಧ್ಯಕ್ಷ), ಬಸವಂತ್ರಾಯ ಜಮಖಂಡಿ (ಸಂಘಟನಾ ಸಂಚಾಲಕ), ಮೌನೇಶ ವಿಶ್ವಕರ್ಮ (ಸಂಘಟನಾ ಕಾರ್ಯದರ್ಶಿ), ಯಶವಂತ್ರಾಯ ಸರಗರ, ಸಿದ್ದಣ್ಣ ಕಕ್ಕೇರಿ, ಹಣಮಂತ್ರಾಯ ಹೊಸಮನಿ, ಬಸವರಾಜ ಅಂಗಡಿ, ದ್ಯಾವಪ್ಪ, ನಬಿಸಾಬ್ ಕೂಡ್ಲಗಿ (ಸದಸ್ಯರು).