ಸುರಪುರ: ಕೃಷ್ಣಾ ನದಿಗೆ ಪ್ರವಾಹ ಎದುರಾಗಿರುವುದರಿಂದ ತಾಲೂಕಾಡಳಿತ ಹೈ ಅಲರ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ನದಿ ಪಾತ್ರಗಳ ಗ್ರಾಮಗಳ ಜನರಿಗೆ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಂತ್ರಸ್ತರಿಗಾಗಿ ತಾಲೂಕಿನ ಮೂರು ಕಡೆ ಗಂಜಿ ಕೇಂದ್ರಗಳನ್ನು ಆರಂಭಿಸಿದೆ.
ನದಿ ತಟದ ಗ್ರಾಮಗಳಾದ ಮುಷ್ಠಳ್ಳಿ, ಸೂಗೂರ, ಹೆಮ್ಮಡಗಿ, ಅಡ್ಡೊಡಗಿ, ಕರ್ನಾಳ ಸೇರಿದಂತೆ ಇತರೆ ಗ್ರಾಮಗಳ ಸಂತ್ರಸ್ತರಿಗಾಗಿ ನಗರದ ಎಪಿಎಂಸಿ ಆವರಣದ ಕಾರ್ಮಿಕರ ಭವನದಲ್ಲಿ ಗಂಜಿ ಕೇಂದ್ರ ಪ್ರಾರಂಭಿಸಲಾಗಿದೆ. ಗಂಜಿ ಕೇಂದ್ರದಲ್ಲಿ ಊಟ, ವಸತಿ, ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಅಕ್ಕಿ, ಬೇಳೆ, ಎಣ್ಣೆ, ತರಕಾರಿ, ರವಾ ಸೇರಿದಂತೆ ಅಡುಗೆ ಸಾಮಗ್ರಿ ಶೇಖರಣೆ ಮಾಡಿಕೊಳ್ಳಲಾಗಿದೆ.
ಸಂತ್ರಸ್ತರ ವಸತಿಗಾಗಿ ಗಂಜಿ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಪಕ್ಕದ ರೈತ ಭವನದಲ್ಲಿ ಸಂತ್ರಸ್ತರಿಗಾಗಿ ಸ್ನಾನ, ಶೌಚದ ವ್ಯವಸ್ಥೆ ಕಲ್ಪಿಸಲಾಗಿದೆ. ಮಲಗಲು ಜಮ ಖಾನಾ, ಜಾದರ್‌ಗಳ ವ್ಯವಸ್ಥೆ ಮಾಡಿದ್ದು, ದನ-ಕರು, ಮೇಕೆಗಳ ವಸತಿಗಾಗಿ ಪ್ರತೇಕ ವ್ಯವಸ್ಥೆ ಮಾಡಿರುವುದು ಕಂಡು ಬಂದಿತು.
ಜಿಲ್ಲಾಧಿಕಾರಿ ಎಂ. ಕೂರ್ಮರಾವ್, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನಾವಣೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಕವಿತಾ ಮನಿಕೇರಿ ಸೋಮವಾರ ಸಂಜೆ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಿಬ್ಬಂದಿಗಳು ಕೇಂದ್ರದಲ್ಲಿಯೇ ವಸತಿ ಇದ್ದು, ಅಡುಗೆ ಸಿದ್ಧತೆಯಲ್ಲಿ ಇರುವಂತೆ ಕೇಂದ್ರದ ಉಸ್ತುವಾರಿ ಸಿಬ್ಬಂದಿಗಳಿಗೆ ತಾಕೀತು ಮಾಡಿದ್ದಾರೆ.
ಎರಡು ದಿನಗಳಿಂದ ಗಂಜಿಕೇಂದ್ರ ಆರಂಭವಾಗಿದ್ದರೂ ಯಾವುದೇ ಗ್ರಾಮಗಳ ಸಂತ್ರಸ್ತರು ಕೇಂದ್ರಕ್ಕೆ ಬಂದಿಲ್ಲ. ಸಂತ್ರಸ್ತರಿಗಾಗಿ ದಾರಿ ಕಾಯುತ್ತಿದ್ದೇವೆ. ಯಾರು ಬರಲಿ ಬಿಡಲಿ ಜಿಲ್ಲಾಧಿಕಾರಿ ನಿರ್ದೇಶನದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ಉಸ್ತುವಾರಿ ಗ್ರಾಮ ಲೆಕ್ಕಿಗ ಶಿವುಕುಮಾರ ತಿಳಿಸಿದರು. ಈ ಹಿನ್ನೆಲೆಯಲ್ಲಿ ನದಿ ಪಾತ್ರಗಳ ಗ್ರಾಮಗಳಲ್ಲಿ ಡಂಗೂರ ಹಾಕಿಸುವ ಮೂಲಕ ಜನರಲ್ಲಿ ಸುರಕ್ಷತೆಗಾಗಿ ಜಾಗೃತಿ ಮೂಡಿಸಲಾಗುತ್ತಿದೆ.
ನೆರೆ ಸಂತ್ರಸ್ತರಿಗಾಗಿಯೇ ಮೂರು ಕಡೆ ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನೆರೆ ಸಂತ್ರಸ್ತರು ನಿರ್ಲಕ್ಷ್ಯ ವಹಿಸದೆ ತಾಲೂಕಾಡಳಿತದಿಂದ ಆರಂಭಿಸಿರುವ ಗಂಜಿ ಕೇಂದ್ರಗಳ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಅಪಾಯ ನೋಡಿಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಅಪಾಯ ಎದುರಾದಲ್ಲಿ ತಕ್ಷಣ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಬೇಕು.
•
ಸುರೇಶ ಅಂಕಲಗಿ
ತಹಶೀಲ್ದಾರ್ ಸುರಪುರ