Advertisement

ಶೈಕ್ಷಣಿಕ ಪ್ರಗತಿಯಲ್ಲಿ ಹೈದ್ರಾಬಾದ್‌ ಶಿಕ್ಷಣ ಸಂಸ್ಥೆ ಕೊಡುಗೆ ಅಪಾರ

03:53 PM Jun 29, 2019 | Team Udayavani |

ಸುರಪುರ: ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗದೆ ಇದ್ದರೆ ಶೈಕ್ಷಣಿಕವಾಗಿ ಈ ಭಾಗ ಇನ್ನಷ್ಟು ಹಿಂದೆ ಉಳಿಯುತ್ತಿತ್ತು. ಅನೇಕ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಲಕ್ಷಾಂತರ ಜನರಿಗೆ ಶಿಕ್ಷಣ ದೊರಕಿಸಿಕೊಟ್ಟಿರುವ ಸಂಸ್ಥೆ ಶೈಕ್ಷಣಿಕ ಪ್ರಗತಿಯಲ್ಲಿ ಅಪಾರ ಕೊಡುಗೆ ನೀಡಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

Advertisement

ಇಲ್ಲಿಯ ಶ್ರೀ ಪ್ರಭು ಕಲಾ, ವಿಜ್ಞಾನ ಮತ್ತು ಜೆಎಂ ಬೋಹರಾ ವಾಣಿಜ್ಯ ವಿಭಾಗದ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ದಿ. ಮಹಾದೇವಪ್ಪ ರಾಂಪುರೆ ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ. 1969ರಲ್ಲಿ ಸ್ಥಾಪನೆಗೊಂಡಿರುವ ಈ ಕಾಲೇಜು ನೂರಾರು ಬಡ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ನೆರವಾಗಿದೆ. ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಅನೇಕ ವಿಭಾಗಗಳನ್ನು ಆರಂಭಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಸ್ಮರಿಸಿದರು.

ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ, ಶೈಕ್ಷಣಿಕ ಪ್ರಗತಿ ನಮ್ಮ ಅಭಿವೃದ್ಧಿಯನ್ನು ಅವಲಂಬಿಸಿದೆ. ಶಿಕ್ಷಣ ಇರದೆ ಹೋದರೆ ನಾವು ಏನು ಸಾಧಿಸಲು ಸಾಧ್ಯವಿಲ್ಲ. ಇಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಅವಕಾಶ ನೀಡಿ ಪ್ರೋತ್ಸಾಯಿಸುವ ಕೆಲಸ ಸಂಸ್ಥೆ ಮಾಡಬೇಕಿರುವುದು ಅಗತ್ಯವಾಗಿದೆ ಎಂದರು.

ರಾಜ್ಯ ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವಂತ ಕ್ರೀಡಾಪಟುಗಳಿದ್ದಾರೆ. ಆದರೆ ಅವರಿಗೆ ಸುಸಜ್ಜಿತವಾದ ಕ್ರೀಡಾಂಗಣ ಕೊರತೆ ಇದೆ. ಕಾಲೇಜಿನ ಆವರಣ ವಿಶಾಲ ಮೈದಾನದಿಂದ ಕೂಡಿದೆ. ಸಂಸ್ಥೆಯವರು ನಿವೇಶನ ಒದಗಿಸಿಕೊಟ್ಟಲ್ಲಿ ಸರಕಾರದಿಂದ ಅನುದಾನ ಒದಗಿಸಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಾಜಿ ಸಚಿವ ರಾಜಾಮದನ ಗೋಪಾಲ ನಾಯಕ ಮಾತನಾಡಿ, ನಾನು ಈ ಕಾಲೇಜಿನ ಆರಂಭದ ಮೊದಲ ವಿದ್ಯಾರ್ಥಿ. ಕ್ರೀಡಾಂಗಣ ನಿರ್ಮಾಣ ಕುರಿತು ಸಂಸ್ಥೆಯವರಿಗೆ ನಾನು ಸಾಕಷ್ಟು ಬಾರಿ ಮನವಿ ಮಾಡಿದ್ದೆ, ಆದರೆ ಅದು ಈಗ ಈಡೇರುವ ಭರವಸೆ ಸಿಕ್ಕಿರುವುದು ಸಂತಸ ತಂದಿದೆ ಎಂದರು.

Advertisement

ಸಂಸ್ಥೆಯ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಮಾತನಾಡಿ, ಶಾಸಕ ರಾಜುಗೌಡ ತಿಳಿಸಿರುವಂತೆ ಆವರಣದಲ್ಲಿ ನಿವೇಶನ ಕೊಡಲು ಸಿದ್ಧನಿದ್ದೇನೆ. ಶನಿವಾರ ಸಂಸ್ಥೆ ಆಡಳಿತ ಮಂಡಳಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಈ ಕುರಿತು ಒಪ್ಪಿಗೆ ಪಡೆದು ನಿವೇಶನ ಒದಗಿಸಿಕೊಡುವುದಾಗಿ ತಿಳಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಡಾ| ಶಿವಾನಂದ ದೇವರಮನಿ, ಕಾರ್ಯದರ್ಶಿ ಡಾ| ನಾಗೇಂದ್ರ ಮಂಠಾಳೆ, ಜಂಟಿ ಕಾರ್ಯದರ್ಶಿ ಡಾ| ಗಂಗಾಧರ ಎಲಿ, ಕಾಲೇಜು ಅಭಿವೃದ್ಧಿ ಮಂಡಳಿ ಸಂಯೋಜಕ ಡಾ| ನಿತೀನ ಜವಳಿ, ಕಟ್ಟಡ ಸಮಿತಿ ಸಂಯೋಜಕ ವಿಜಯಕುಮಾರ ದೇಶ ಮುಖ, ಸತೀಶ್ಚಂದ್ರ ಹಡಗಲಿಮಠ, ಹೇಮಂತಕುಮಾರ, ಸಂಪತಕುಮಾರ ವೇದಿಕೆಯಲ್ಲಿದ್ದರು. ಪಿಯು ಕಾಲೇಜು ಪ್ರಾಂಶುಪಾಲ ವಾರೀಸ ಕುಂಡಾಲೆ ಪ್ರಾಸ್ತವಿಕ ಮತನಾಡಿದರು. ಬಸವರಾಜ ಬಂಟನೂರ ಪ್ರಾರ್ಥಿಸಿದರು. ಪದವಿ ಕಾಲೇಜಿನ ಪ್ರಾಚಾರ್ಯ ಎಸ್‌.ಎಸ್‌. ಹೊಸ್ಮನಿ ಸ್ವಾಗತಿಸಿದರು. ಉಪನ್ಯಾಸಕ ಮಂಜುನಾಥ ಚೆಟ್ಟಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next