ಸುರಪುರ: ಕೇಂದ್ರದ ಮಾಜಿ ಸಚಿವ ಅರುಣ ಜೇಟ್ಲಿ ಅವರ ನಿಧನ ಪಕ್ಷಕ್ಕೆ ತುಂಬಲಾಗದ ನಷ್ಟ ತಂದಿದೆ. ರಾಷ್ಟ್ರ ರಾಜಕಾರಣದಲ್ಲಿ ಅಜಾತ ಶತ್ರುವಿನಂತಿದ್ದ ಜೇಟ್ಲಿಯವರು ಬಿಜೆಪಿ ಪಕ್ಷ ಬಲಪಡಿಸುವಲ್ಲಿ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಶ್ರೀನಿವಾಸ ನಾಯಕ ದರಬಾರಿ ಹೇಳಿದರು.
ನಗರದ ಬಿಜೆಪಿ ಕಚೇರಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರ ನಿವಾಸದಲ್ಲಿ ದಿವಂಗತ ಅರುಣ ಜೇಟ್ಲಿ ಅವರಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ರಾಷ್ಟ್ರ ರಾಜಕಾರಣದಲ್ಲಿ ಅರುಣ ಜೇಟ್ಲಿ ಅವರು ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ರಾಜ್ಯದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. ರಾಜ್ಯದಲಿಯೂ ಕೂಡ ಪಕ್ಷ ಸಂಘಟನೆಗೊಳಿಸುವಲ್ಲಿ ಅವರ ಪರಿಶ್ರಮ ಇತ್ತು. ಪಕ್ಷದಲ್ಲಿ ರಾಜ್ಯದ ಮುಖಂಡರೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಬಣ್ಣಿಸಿದರು.
ಶಾಸಕರ ಆಪ್ತ ಸಹಾಯಕ ವೀರೂಪಾಕ್ಷಿ ಕೋನಾಳ ಮಾತನಾಡಿ, ಅರುಣ ಜೇಟ್ಲಿ ರಾಷ್ಟ್ರ ಮತ್ತು ರಾಜ್ಯದ ದೀಮಂತ ನಾಯಕ. ಅವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿ, ಸುಪ್ರೀಂ ಕೋರ್ಟ್ ವಕೀಲರಾಗಿ, ಉತ್ತಮ ರಾಜಕಾರಣಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ರಾಜಕೀಯ ಜೀವನದಲ್ಲಿ ಅಳವಡಿಸಿಕೊಂಡಿದ್ದ ತತ್ವ, ಸಿದ್ಧಾಂತಗಳು ಇಂದಿನ ಯುವ ರಾಜಕಾರಣಿಗಳಿಗೆ ಮಾರ್ಗದರ್ಶನವಾಗಿವೆ ಎಂದು ಸ್ಮರಿಸಿದರು.
ಪ್ರಮುಖರಾದ ಬಲಭೀಮ ನಾಯಕ, ಶರಣು ನಾಯಕ ಬೈರಿಮಡ್ಡಿ, ನರಸಿಂಹ ಪಂಚಮಗಿರಿ, ಶಂಕರ ನಾಯಕ, ಭಿಮಣ್ಣ ಬೇವಿನಾಳ, ಪಾರಪ್ಪ ಗುತೇದಾರ, ಕೊತಲಪ್ಪ ಹಾವಿನ್, ಮಾನಪ್ಪ ಚಳ್ಳಿಗಿಡ, ಸಣ್ಣ ದೇಸಾಯಿ, ತಿಪ್ಪಣ್ಣ ದೇವರಗೋನಾಲ ಇತರರಿದ್ದರು.