Advertisement

ಸ್ಮಶಾನ ಭೂಮಿ ಮಂಜೂರಾತಿಗೆ ಆಗ್ರಹ

12:51 PM Jul 31, 2019 | Naveen |

ಸುರಪುರ: ಸ್ಮಶಾನ ಭೂಮಿ ಮಂಜೂರಾತಿ ನೀಡಿ ಸರ್ವೇ ಮಾಡಿಸಿ ಪಹಣಿ ಪತ್ರಿಕೆಯಲ್ಲಿ ಸ್ಮಶಾನ ಭೂಮಿ ಎಂದು ನಮೂದು ಮಾಡಿಕೊಡುವಂತೆ ಒತ್ತಾಯಿಸಿ ತಾಲೂಕು ಸವಿತಾ ಸಮಾಜ ಬಾಂಧವರು ಮಂಗಳವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟಿಸಿದರು.

Advertisement

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಮಾಜದ ತಾಲೂಕು ಅಧ್ಯಕ್ಷ ಗೋಪಾಲ ಚಿನ್ನಾಕರ ಮಾತನಾಡಿ, ನಗರದ ಸರ್ವೇ ನಂ. 21ರಲ್ಲಿ ಸುಮಾರು ಎರಡು ಎಕರೆ ಅಷ್ಟು ಸಮಾಜದ ಸ್ಮಶಾನ ಭೂಮಿ ಇದೆ. ತಲೆ ತಲಾಂತರಗಳಿಂದ ಸಮಾಜದ ಯಾರೇ ತೀರಿಕೊಂಡರು ಇದೇ ನಿವೇಶನದಲ್ಲಿ ಶವ ಹೂಳುತ್ತಾ ಬರಲಾಗಿದೆ. ಆದರೆ ಇತ್ತೀಚೆಗೆ ಸ್ಮಶಾನ ಭೂಮಿ ಒತ್ತುವರಿ ಆಗುತ್ತಿದ್ದು, ಇದರಿಂದ ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ ಎಂದು ಆರೋಪಿಸಿದರು.

ಅತಿಕ್ರಮಣ ಆಗುತ್ತಿರುವ ಸ್ಮಶಾನ ಭೂಮಿಯನ್ನ ರಕ್ಷಿಸುವುದು ಅಧಿಕಾರಿಗಳ ಜವಾಬ್ದಾರಿ. ಆದರೆ ಅಧಿಕಾರಿಗಳು ಸರ್ವೇ ಮಾಡಿ ಪಹಣಿಯಲ್ಲಿ ನೋಂದಾಯಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಕ್ರಮ ಸರಿಯಲ್ಲ ಎಂದು ದೂರಿದ ಅವರು, ಈ ಬಗ್ಗೆ ನಿರ್ಲಕ್ಷ್ಯ ವಹಿಸಿ ದ್ವಂದ ನೀತಿ, ಮೀನ-ಮೇಷ ಎಣಿಸಿದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಅಧಿಕಾರಿಗಳೇ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ದೂರಿದರು.

ಈ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ ತಾಲೂಕು ಆಡಳಿತ ಮಾತ್ರ ಇದಕ್ಕೆ ಆಸಕ್ತಿ ತೋರುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಅನಿವಾರ್ಯವಾಗಿ ಪ್ರತಿಭಟನೆಗೆ ಇಳಿಯಬೇಕಾಗಿದೆ. ಈ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಸರ್ವೇ ಮಾಡಿಸಿ ಪಹಣಿ ಪತ್ರಿಕೆ ಮಾಡಿಕೊಡಬೇಕು. ನಿರ್ಲಕ್ಷ್ಯ ವಹಿಸಿದ್ದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ತಹಶೀಲ್ದಾರ್‌ ಸುರೇಶ ಅಂಕಲಗಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಮಾಜದ ಮುಖಂಡರಾದ ರಾಘವೇಂದ್ರ ಬಾದ್ಯಾಪೂರ, ಚಂದ್ರಾಮ ಮುಂದಿನಮನಿ, ಸೂರ್ಯಕಾಂತ ಚಿನ್ನಾಕಾರ, ವಿಶ್ವನಾಥ ನಸಲಾಯಿ, ಭೀಮಣ್ಣ ದೇವರಗೋನಾಲ, ಚಂದ್ರಶೇಖರ ಅನವಾರ, ಬಾಲರಾಜ ಚಿನ್ನಾಕಾರ, ಹಣಮಂತ ಅಜ್ಜಿಕೋಲಿ, ಮಾರುತಿ ನಗನೂರ, ರಮೇಶ ಗೌಡಗೇರಿ, ಮುತ್ತುರಾಜ ತಿಪ್ಪನಟಗಿ, ಪರಶುರಾಮ ಚಿನ್ನಾಕಾರ, ಪರಶುರಾಮ ಬಿಳ್ಹಾರ, ರವಿ ಗಂಗಾವತಿ, ಮರೆಪ್ಪ ಚಿನ್ನಾಕಾರ, ಬಾಲು ಗೌಡಗೇರಿ, ರಾಮಕೃಷ್ಣ ಬಿಳ್ಹಾರ, ಅಂಬ್ರೇಶ, ವಿಷ್ಣು ತಿಪನಟಗಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next