Advertisement

ಗಬ್ಬೆದ್ದು ನಾರುತ್ತಿದೆ ರತ್ತಾಳ ಗ್ರಾಮ

04:56 PM Dec 02, 2019 | Naveen |

ಸಿದ್ದಯ್ಯ ಪಾಟೀಲ
ಸುರಪುರ:
ಗ್ರಾಮದ ದ್ವಾರದಲ್ಲಿಯೇ ಸ್ವಾಗತಿಸುವ ತಿಪ್ಪಿಗುಂಡಿಗಳು, ಶಾಲೆ ಪಕ್ಕ ಮತ್ತು ರಸ್ತೆ ಬದಿಯಲ್ಲಿಯೇ ಮಲ ಮೂತ್ರಗಳ ವಿಸರ್ಜನೆ, ಎಲ್ಲೆಂದರಲ್ಲಿ ರಾಶಿ ರಾಶಿ ಕಸ. ಚರಂಡಿಗಳಿಲ್ಲದೆ ರಸ್ತೆ ಮೇಲೆ ತ್ಯಾಜ್ಯ ನೀರು ಹರಿದು ಗಬ್ಬೆದ್ದು ನಾರುತ್ತಿದೆ. ಇದು ರತ್ತಾಳ ಗ್ರಾಮದಲ್ಲಿ ಕಂಡು ಬರುವ ದೃಶ್ಯಗಳು. ದೇವಿಕೇರಾ ಗ್ರಾಪಂ ವ್ಯಾಪ್ತಿಗೆ ಒಳಪಡುವ ಗ್ರಾಮದಲ್ಲಿ ಮೂರು ಸಾವಿರಕ್ಕೂ ಮೇಲ್ಪಟ್ಟು ಜನಸಂಖ್ಯೆ ಇದೆ. 6 ಜನ ಸದಸ್ಯರಿದ್ದಾರೆ. ಆದರೆ ನೈರ್ಮಲ್ಯ ಮರೀಚಿಕೆಯಾಗಿ ಗ್ರಾಮ ನಲುಗಿಹೋಗಿದೆ.

Advertisement

ಬಯಲು ಶೌಚವೇ ಗತಿ: ಬಯಲು ಶೌಚ ಮುಕ್ತಗೊಳಿಸಬೇಕು ಎಂಬ ದೃಢ ಸಂಕಲ್ಪದೊಂದಿಗೆ ಸರಕಾರ ಸ್ವತ್ಛ ಭಾರತ ಯೋಜನೆಯಡಿ ಮನೆಗೊಂದು ಶೌಚಾಲಯ ನಿರ್ಮಿಸುವ ಯೋಜನೆ ಅನುಷ್ಠಾನಕ್ಕೆ ತಂದಿದೆ. ಆದರೆ ಇಲ್ಲಿ ಬಯಲು ಬಹಿರ್ದೆಸೆ ಶೇ. 1ರಷ್ಟು ಕೂಡ ಮುಕ್ತವಾಗಿಲ್ಲ. ಮಹಿಳೆಯರಿಗೆ ಬಯಲು ಶೌಚವೇ ಗತಿಯಾಗಿದೆ. ಮಹಿಳೆಯರು ಮಾನ ರಕ್ಷಣೆಗಾಗಿ ರಸ್ತೆ ಬದಿ ಜಾಲಿ ಗಿಡಗಳನ್ನು ಆಶ್ರಯಿಸುವಂತಾಗಿದೆ.

ಶಾಲೆ ಪಕ್ಕವೇ ಶೌಚಾಲಯ: ಗ್ರಾಮದಲ್ಲಿ 8ನೇ ತರಗತಿ ವರೆಗೆ ಶಾಲೆ ಇದೆ. ಸುಮಾರು 300 ವಿದ್ಯಾರ್ಥಿಗಳಿದ್ದಾರೆ. ವಿಚಿತ್ರ ಎಂದರೆ ಶಾಲೆ ಪಕ್ಕದಲ್ಲಿಯೇ ಸಾಮೂಹಿಕ ಶೌಚಾಲಯ ಕಟ್ಟಡ ನಿರ್ಮಿಸಲಾಗಿದೆ. ಕೆಟ್ಟ ವಾಸನೆಯಿಂದ ವಿದ್ಯಾರ್ಥಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಇದರಿಂದ ಕೆಲ ಪಾಲಕರು ಬೇಸತ್ತು ತಮ್ಮ ಮಕ್ಕಳನ್ನು ಸಮೀಪದ ರಂಗಂಪೇಟೆ ಶಾಲೆಗೆ ದಾಖಲಿಸಿದ್ದಾರೆ.

ರಸ್ತೆ ಮೇಲೆ ಚರಂಡಿ ನೀರು: ಗ್ರಾಮದಲ್ಲಿ ಒಂದೆರಡು ಕಡೆ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ ಎಲ್ಲಿಯೂ ಚರಂಡಿ ನಿರ್ಮಿಸಿಲ್ಲ. ಹೀಗಾಗಿ ಪ್ರತಿ ಮನೆಯಿಂದ ಹರಿದು ಬರುವ ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುತ್ತಿದೆ. ಅಲ್ಲಲ್ಲಿ ರಸ್ತೆ ಕಿತ್ತು ಹೋಗಿದ್ದರಿಂದ ನೀರು ನಿಂತಲ್ಲೆ ನಿಂತು ಗಬ್ಬು ವಾಸನೆ ಬೀರುತ್ತಿದೆ. ರಸ್ತೆಗಳೆಲ್ಲೆ ಕೊಚ್ಚೆಯಾಗಿ ಮಕ್ಳಳ್ಳು ಮರಿ ವಯೋವೃದ್ದರು ರಾಡಿಯಲ್ಲಿಯೇ ತಿರುಗಾಡುವಮತಾಗಿದೆ.

ರೋಗ ಭೀತಿ: ತ್ಯಾಜ ನೀರು ಮುಂದೆ ಹರಿಯದೆ ನಿಂತಲ್ಲೆ ನಿಲ್ಲುತ್ತಿದೆ. ಇದರಿಂದ ನೀರು ಮಲೀನವಾಗಿ ಪಾಚಿ ಗಟ್ಟಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿವೆ. ಸಾಂಕ್ರಾಮಿಕ ರೋಗದ ಭಯ ಜನರನ್ನು ಕಾಡುತ್ತಿದೆ. ಈಗಾಗಲೇ ಕೆಲವರು ಚಿಕೂನ್‌ ಗುನ್ಯಾ ರೋಗದಿಂದ ಬಳಲುತ್ತಿದ್ದಾರೆ.

Advertisement

ತಿಪ್ಪಿ ಗುಂಡಿಗಳ ತಾಣ: ಗ್ರಾಮ ಪ್ರವೇಶ ಮಾಡುವವರಿಗೆ ಎರಡು ಬದಿಯ ತಿಪ್ಪಿಗುಂಡಿಗಳೆ ಕೈ ಬೀಸಿ ಸ್ವಾಗತಿಸುತ್ತಿವೆ. ಎಲ್ಲಿ ನೋಡಿದರಲ್ಲಿ ಗ್ರಾಮದ ತುಂಬೆಲ್ಲ ತಿಪ್ಪಿಗುಂಡಿಗಳು ಕಾಣಿಸುತ್ತಿವೆ. ಶಾಲೆ ಸುತ್ತಮುತ್ತಲು ಕೂಡ ತಿಪ್ಪಿಗುಂಡಿಗಳು ಹಾಕಲಾಗಿದೆ. ಹೀಗಾಗಿ ತಿಪ್ಪಿಗುಂಡಿಗಳ ನಡುವೆ ಶಾಲೆ ಎಂಬಂತಾಗಿದೆ. ರಾಶಿ ರಾಶಿ ಕಸ: ಗ್ರಾಮದಲ್ಲಿ ನೈರ್ಮಲ್ಯ ಮರೀಚಿಕೆಯಾಗಿದೆ. ಎಲ್ಲಿ ನೋಡಿದರಲ್ಲಿ ರಾಶಿ ರಾಶಿ ಕಸ, ಬೀಡಿ ಸಿಗರೇಟು, ಗುಟಕಾ ಚೀಟುಗಳು ಬಿದ್ದಿರುವುದು ಕಾಣಿಸುತ್ತವೆ. ಗ್ರಾಪಂ ಸಿಬ್ಬಂದಿ ಒಂದು ಬಾರಿಯಾದರೂ ಅಪ್ಪಿ ತಪ್ಪಿ ಕಸ ಗೂಡಿಸಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಗ್ರಾಮದಿಂದ ನಗರಕ್ಕೆ ಆಗಮಿಸುವ ರಸ್ತೆ ಜಾಲಿಗಿಡಗಳಿಂದ ಆವರಿಸಿವೆ. ಎರಡು ಬದಿಯಲ್ಲಿ ಗಿಡಗಳು ಒಂದಕ್ಕೊಂದು ತಳಕು ಹಾಕಿಕೊಂಡಿದ್ದು ಎದುರಿನಿಂದ ಬರುವ ವಾಹನಗಳು ಕಾಣಿಸುವುದಿಲ್ಲ. ವಾಹನಗಳು ಸೈಡ್‌ ತೆಗೆದು ಕೊಳ್ಳಲು ಜಾಗವೇ ಇಲ್ಲ. ಚಾಲಕರು ಎಚ್ಚರ ತಪ್ಪಿ ಚಲಾಯಿಸಿದರೆ ಅಪಘಾತ ಖಚಿತ. ಕೆಲ ಬಡಾವಣೆಗಳಲ್ಲಿಯೂ ಜಾಲಿಗಿಡಗಳು ವ್ಯಾಪಕವಾಗಿ ಬೆಳೆದಿವೆ.

ಚರಂಡಿ ಇಲ್ಲದ ಕಾರಣ ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. 10ರಿಂದ 15 ಜನರು ಚಿಕೂನ್‌ ಗುನ್ಯಾ ರೋಗದಿಂದ ಬಳಲುತ್ತಿದ್ದಾರೆ. ಸ್ವತ್ಛತೆಗಾಗಿ ದೂರ ಸಲ್ಲಿಸಿದರು. ಪಿಡಿಒ ಸ್ಪಂದಿಸಿಲ್ಲ. ರಾಜಕೀಯ ಪ್ರಭಾವ ಹೊಂದಿದ್ದು, ಕಚೇರಿಗೆ ಸರಿಯಾಗಿ ಬರುವುದೇ ಇಲ್ಲ ಬಂದರೂ ಕೈಗೆ ಸಿಗುವುದಿಲ್ಲ. ಕೆಲಸ ಕಾರ್ಯಗಳಿಗೆ ಗ್ರಾಮಸ್ಥರು ನಿತ್ಯ ಪರದಾಡುತ್ತೇವೆ. ಈ ಬಗ್ಗೆ ಕೇಳಿದರೆ ಜನರನ್ನು ಬೆದರಿಸುತ್ತಾನೆ.
ಯಲ್ಲಪ್ಪ ಗಡದರ,
ಗ್ರಾಮದ ಮುಖಂಡ ಸಾಮಾಜಿಕ ಕಾರ್ಯಕರ್ತ

ನಿರ್ಮಲ ಭಾರತ ಯೋಜನೆಯಡಿ ಕೆಲವರಿಗೆ ಶೌಚಾಲಯ ನಿರ್ಮಿಸಿ ಕೊಟ್ಟಿದ್ದೇವೆ. ಆದರೆ ಅರಿವಿನ ಕೊರತೆ ಮತ್ತು ಮೌಡ್ಯತೆಯಿಂದ ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳು ತ್ತಿಲ್ಲ. ಕಟ್ಟಿಗೆ, ಕುಳ್ಳು, ಹೊಟ್ಟು, ಸೊಪ್ಪು ತುಂಬಿ ಶೌಚಾಲಯಗಳನ್ನು ಹಾಳು ಮಾಡಿಕೊಂಡಿದ್ದಾರೆ. ನೈರ್ಮಲ್ಯ ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತೇನೆ.
ಬಾಬೂ ಸುರಪುರ,
ಪಿಡಿಒ ದೇವಿಕೇರಾ

ಶಾಲೆ ಪಕ್ಕದಲ್ಲಿಯೇ ಜನರು ಶೌಚಕ್ಕೆ ಬರುತ್ತಾರೆ. ತಿಪ್ಪಿಗುಂಡಿ ಹಾಕದಂತೆ ಮನವಿ ಮಾಡಿದರೂ ಕೇಳುವುದಿಲ್ಲ. ಇದರಿಂದ ಶಾಲಾ ವಾತಾವರಣ ಕಲುಷಿತವಾಗುತ್ತಿದೆ. ಹಲವಾರು ಕಾರ್ಯಕ್ರಮಗಳ ಮೂಲಕ ಗ್ರಾಮಸ್ಥರಲ್ಲಿ ಸ್ವತ್ಛತೆ ಕುರಿತು ಅರಿವು ಮೂಡಿಸುತ್ತೇವೆ. ಸ್ವಚ್ಛತೆ ಬಗ್ಗೆ ಗ್ರಾಮಸ್ಥರು ಜಾಗೃತಿ ವಹಿಸುವುದು ಅಗತ್ಯವಾಗಿದೆ.
ದೇವರಾಜ, ಶಿಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next