ಸುರಪುರ: ತಾಲೂಕು ಆಡಳಿತದಿಂದ ಅ. 23ರಂದು ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಶೀಲ್ದಾರ್ ನಿಂಗಪ್ಪ ಬಿರೇದಾರ ತಿಳಿಸಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಹದ ಹಿನ್ನೆಲೆಯಲ್ಲಿ ಜಯಂತಿ ಸರಳವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಅಂದು ಬೆಳಗ್ಗೆ ಶಾಲಾ ಕಾಲೇಜು, ಆರೋಗ್ಯ ಇಲಾಖೆ, ಗ್ರಾಪಂ ಕಚೇರಿ, ಅಂಗನವಾಡಿ ಸೇರಿದಂತೆ ಸರಕಾರಿ, ಅರೇ ಸರಕಾರಿ ಸ್ವಾಮ್ಯಕ್ಕೆ ಒಳಪಟ್ಟ ಎಲ್ಲಾ ಕಚೇರಿಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಡ್ಡಾಯವಾಗಿ ಆಚರಿಸಬೇಕು. ನಿರ್ಲಕ್ಷ್ಯ ತೋರಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಾಕೀತು ಮಾಡಿದರು.
ನಂತರ ತಾಲೂಕು ಆಡಳಿತದಿಂದ ನಡೆಯುವ ಜಯಂತ್ಯುತ್ಸವದಲ್ಲಿ ಎಲ್ಲಾ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಹಿಂದಿನಂತೆ ಗೈರಾದರೆ ಸಹಿಸಲಾಗುವುದಿಲ್ಲ. ಗೈರಾಗುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದರು.
ಪೂರ್ವಭಾವಿ ಸಭೆಗೆ ಬಹುತೇಕ ಇಲಾಖೆ ಅಧಿಕಾರಿಗಳು ಗೈರಾಗಿದ್ದು, ತಹಶೀಲ್ದಾರ್ ಅವರನ್ನು ಕೆರಳುವಂತೆ ಮಾಡಿತು. ಮುಂಚಿತವಾಗಿಯೇ ನೋಟಿಸ್ ಜಾರಿಮಾಡಿದರೂ ಕೂಡ ಗೈರಾಗಿರುವುದು ಸರಿಯಲ್ಲ. ಇದು ತಾಲೂಕು ಆಡಳಿತದ ಆದೇಶವನ್ನು ಅವಮಾನಿಸಿದಂತೆ, ಕಾರಣ ಗೈರಾದ ಅಧಿಕಾರಿಗಳಿಗೆ ತಕ್ಷಣವೇ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಶಿರಸ್ತೇದಾರ್ ಕೊಂಡಲ ನಾಯಕ ಅವರಿಗೆ ಸೂಚಿಸಿದರು.
ತಾಲೂಕು ಆರೋಗ್ಯಾ ಧಿಕಾರಿ ಡಾ| ಆರ್.ವಿ. ನಾಯಕ, ಉಪಖಜಾನೆ ಅಧಿಕಾರಿ ಡಾ| ಮೋನಪ್ಪ ಶಿರವಾಳ, ಉಪನೋಂದಣಿ ಅಧಿಕಾರಿ ಕಿಶನ್ ಚವ್ಹಾಣ, ಸಿಡಿಪಿಒ ಲಾಲಸಾಬ ಪಿರಾಪುರ, ಸಮಾಜ ಕಲ್ಯಾಣಾಧಿಕಾರಿ ಸತ್ಯನಾರಾಯಣ ದರಬಾರಿ, ಬಿಇಒ ಕಚೇರಿ ವ್ಯವಸ್ಥಾಪಕ ಜಗದೇವಪ್ಪ, ನಗರಸಭೆ ನೈರ್ಮಲ್ಯಾಧಿ ಕಾರಿ ಲಕ್ಷ್ಮಣ ಕಟ್ಟಿಮನಿ, ವಿಶ್ವನಾಥ ಯಾದಗಿರಿಕರ್ ಇದ್ದರು.