Advertisement

ದೊಡ್ಡ ಬಾವಿ ಅಂತರ್ಜಲ ಮಾಯ

01:34 PM Sep 11, 2019 | Naveen |

ಸಿದ್ದಯ್ಯ ಪಾಟೀಲ
ಸುರಪುರ:
ರಂಗಂಪೇಟೆ ಜನತೆ ಜೀವ ಜಲವಾಗಿದ್ದ ಐತಿಹಾಸಿಕ ಪುರಾತನ ದೊಡ್ಡ ಬಾವಿ ನೀರಿಲ್ಲದೇ ಬರಿದಾಗಿದೆ. ಈ ಹಿಂದೆ ದೊಡ್ಡ ಬಾವಿ ರಂಗಂಪೇಟೆ, ತಿಮ್ಮಾಪುರ ಜನತೆಗೆ ಕುಡಿಯುವ ನೀರೊದಗಿಸುವ ಮೂಲವಾಗಿತ್ತು. ಆದರೆ, ಪ್ರಸ್ತುತ ದಿನದಲ್ಲಿ ಅಂತರ್ಜಲ ಮಟ್ಟ ಕ್ಷೀಣಿಸಿ ಹನಿ ನೀರೂ ಇಲ್ಲದಾಗಿದೆ.

Advertisement

ಬಾವಿ ಹಿನ್ನೆಲೆ: 17ನೇ ಶತಮಾನದಲ್ಲಿ ಅರಸು ಮನೆತನದ ಪಿತಾಂಬರಿ ಬೈರಿಪಿಡ್ಡಾ ನಾಯಕ ಜನತೆಗೆ ಕುಡಿಯುವ ನೀರಿಗಾಗಿ ದೊಡ್ಡ ಬಾವಿ ನಿರ್ಮಿಸಿಕೊಟ್ಟು ಅನುಕೂಲ ಕಲ್ಪಿಸಿದ್ದರು. ಬಾವಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿದ್ದು, ನಾಲ್ಕು ಕಡೆಯಿಂದಲೂ ಬಾವಿಗೆ ಸರಳವಾಗಿ ಇಳಿಯಲು ಮೆಟ್ಟಲುಗಳ ವ್ಯವಸ್ಥೆ ಮಾಡಲಾಗಿದೆ. ಬಾವಿ 100 ಅಡಿ ಒಳಕ್ಕೆ ಹೋದಂತೆ ಅಲ್ಲಿಯೂ ನೀರು ತುಂಬಿಕೊಂಡು ಮೇಲೆ ಬರಲು ಮೆಟ್ಟಿಲುಗಳ ವ್ಯವಸ್ಥೆ ಮಾಡಲಾಗಿದೆ.

ಸುಜ್ಜಿತ ಕಟ್ಟಡ: ನಾಲ್ಕು ಶತಮಾನ ಕಳೆದರೂ ಇಂದಿಗೂ ಬಾವಿ ತನ್ನ ಸೌಂದರ್ಯ ಕಳೆದುಕೊಂಡಿಲ್ಲ. ಅಂದಿನ ಗುಣಮಟ್ಟದ ಕಾಮಗಾರಿಗೆ ಹಿಡಿದ ಕೈಗನ್ನಡಿ ಇದಾಗಿದೆ. ಬಾವಿ ಮೇಲ್ಭಾಗದಲ್ಲಿ ಸುತ್ತಲೂ 74 ಕಲ್ಲಿನ ಕಂಬಗಳಿಂದ ಕಮಾನು ನಿರ್ಮಿಸಲಾಗಿದೆ. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಆಗಮಿಸಿದ ಜನರು ವಸತಿ-ವಿಶ್ರಾಂತಿ ಪಡೆಯಲು ತಂಗುದಾಣ ನಿರ್ಮಿಸಿದ್ದು, ಇಂದಿಗೂ ಇವು ಸುಸಜ್ಜಿತವಾಗಿವೆ.

ಪುನಃಶ್ಚೇತನ ಹೆಸರಿನಲ್ಲಿ ಕಳಪೆ ಕಾಮಗಾರಿ: 2016-17ರಲ್ಲಿ ಬಾವಿ ಪುನಃಶ್ಚೇತನಕ್ಕಾಗಿ ಸುಮಾರು 60 ಲಕ್ಷ ರೂ. ಮಂಜೂರಾಗಿತ್ತು. ಈ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಗುತ್ತಿಗೆದಾರರು ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ವಹಿಸದೇ ಅನುದಾನ ಮುಳುಗಿಸುವ ಕೆಲಸ ಮಾಡಿದ್ದಾರೆ.

ಬಾವಿ ಮೇಲೆ ಹೂಳು: ಬಾವಿಯಲ್ಲಿ ತುಂಬಿದ್ದ ಹೂಳನ್ನು ಎತ್ತಿ ಬೇರೆಡೆ ಸಾಗಿಸದೆ ಮೆಟ್ಟಿಲುಗಳ ಮೇಲೆ ಹಾಕಿ ಹೋಗಿರುವುದು ಕಾಮಗಾರಿ ಎಷ್ಟರ ಮಟ್ಟಿಗೆ ನಿರ್ವಹಿಸಿದ್ದಾರೆ ಎನ್ನುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ.

Advertisement

ಅಪೂರ್ಣ ಕಾಮಗಾರಿ: ಬಾವಿ ಸುತ್ತ ಕಾಂಪೌಂಡ್‌ ಎತ್ತರಿಸಿ ಸುತ್ತಲೂ ಸೋಡಿಯಂ ಲೈಟ್‌ಗಳನ್ನು ಹಾಕಬೇಕಿತ್ತು. ಬಾವಿಯ ನಾಲ್ಕು ಕಡೆ ದ್ವಾರಕ್ಕೆ ಗೇಟ್ ಅಳವಡಿಸಿ, ಕಾರಂಜಿ ನಿರ್ಮಿಸುವ ಮೂಲಕ ಪ್ರೇಕ್ಷಣೀಯ ಸ್ಥಳವನ್ನಾಗಿಸುವ ಯೋಜನೆ ರೂಪಿಸಲಾಗಿತ್ತು. ಆದರೆ, ಕೇವಲ ಗೇಟ್‌ಗಳನ್ನು ಮಾತ್ರ ಕೂಡಿಸಿದ್ದು, ಲೈಟ್ ಮತ್ತು ಕಾರಂಜಿ ನಿರ್ಮಿಸದೆ ಕೈ ತೊಳೆದುಕೊಳ್ಳಲಾಗಿತ್ತು. ವಿನಾಶದ ಅಂಚಿನಲ್ಲಿದ್ದ ಬಾವಿ ಸುತ್ತ ಕಮಾನುಗಳು ಬೀಳುವ ಹಂತದಲ್ಲಿದ್ದು, ಅವುಗಳ ದುರಸ್ತಿಯನ್ನು ಮಾಡಿಲ್ಲ.

ನೀರಿನಲ್ಲಿ ಹೋಮವಾದ ಅನುದಾನ: ಎಚ್ಕೆಆರ್‌ಡಿಬಿ ಯೋಜನೆಯಡಿ ಕಾಮಗಾರಿಗೆ 60 ಲಕ್ಷ ರೂ. ಅನುದಾನ ಒದಗಿಸಲಾಗಿತ್ತು. ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ನೀಡಲಾಗಿತ್ತು. ಆದರೆ, ನಿರ್ಮಿತಿ ಕೇಂದ್ರವರು ಕಾಮಗಾರಿ ಪೂರ್ಣಗೊಳಿಸದೆ ಅರ್ಧ ಕಾಮಗಾರಿ ಮಾಡಿ ಕೈ ಬಿಟ್ಟಿದ್ದಾರೆ. ಇದರಿಂದ ಸರಕಾರದ ಅನುದಾನ ನೀರನಲ್ಲಿ ಹೋಮ ಆದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next