ಸುರಪುರ: ದೇಶಾದ್ಯಂತ ಅಲ್ಪ ಸಂಖ್ಯಾತ, ಹಿಂದುಳಿದ ಹಾಗೂ ದಲಿತ ಜನಾಂಗದ ಮೇಲೆ ನಡೆಯುತ್ತಿರುವ ಹಲ್ಲೆ ತಡೆಗಟ್ಟುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಅಹಿಂದ ವರ್ಗಕ್ಕೆ ರಕ್ಷಣೆ ನೀಡುವಂತೆ ಆಗ್ರಹಿಸಿ ಪ್ರಗತಿಪರ ಸಾಮೂಹಿಕ ಸಂಘಟನೆಗಳ ಕಾರ್ಯಕರ್ತರು ನಗರದ ಮಾಹಾತ್ಮ ಗಾಂಧೀಜಿ ವೃತ್ತದಲ್ಲಿ ಪ್ರತಿಭಟಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡು ಕೇಂದ್ರ ಸರಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಮುಖಂಡ ದೇವೀಂದ್ರಪ್ಪ ಪತ್ತಾರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದಾಗಿನಿಂದ ದೇಶದಲ್ಲಿ ಕೋಮು ಗಲಭೆ ವಿಪರೀತವಾಗಿ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಕೇಸರಿಕರಣದ ಹೆಸರಲ್ಲಿ ಭಯೋತ್ಪಾದನೆ ತಾಂಡವಾಡುತ್ತಿದೆ. ಸಂಘ ಪರಿವಾರದವರ ಅಟ್ಟಹಾಸ ಮೀರುತ್ತಿದೆ. ಮಹಿಳೆಯರ ಸ್ವಾತಂತ್ರ್ಯ ಹರಣವಾಗುತ್ತಿದೆ. ದೌರ್ಜನ್ಯ ಅತ್ಯಾಚಾರ ಹೆಚ್ಚುತ್ತಿವೆ ಎಂದು ದೂರಿದರು. ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ಮಾತನಾಡಿ, ದೇಶದ ಬಹುಸಂಖ್ಯಾತರ ಸಂಸ್ಕೃತಿಯನ್ನು ಬೇರುಮಟ್ಟದಿಂದ ಕೀಳುವ ಹುನ್ನಾರು ನಡೆಯುತ್ತಿದೆ. ಇದೆಲ್ಲವನ್ನು ಮಟ್ಟಹಾಕಲು ಕೇಂದ್ರ ಸರಕಾರ ದಿಟ್ಟ ಹೆಜ್ಜೆ ಇಡಬೇಕು ಎಂದು ಆಗ್ರಹಿಸಿದರು. ಮದೀನಾ ಮಸೀದಿ ಅಧ್ಯಕ್ಷ ಮುಫ್ತಿ ಎಕ್ಬಾಲಹ್ಮದ್ ಒಂಟಿ ಮಾತನಾಡಿದರು.
ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಗ್ರೇಡ್-2 ತಹಶೀಲ್ದಾರ್ ಸೊಫೀಯಾ ಸುಲ್ತಾನ್ ಅವರಿಗೆ ಸಲ್ಲಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ವೆಂಕಟೇಶ ಹೊಸ್ಮನಿ, ಖಾಜಾ ಖಲೀಲ ಅಹ್ಮದ್ ಅರಕೇರಿ, ಮಾನಪ್ಪ ಕಟ್ಟಿಮನಿ, ರಾಹುಲ ಹುಲಿಮನಿ, ಐಮದ್ ಪಠಾಣ, ಮಹ್ಮದ್ ಮೌಲಾ ಸೌಧಾಗರ, ವೀರಭದ್ರಪ್ಪ ತಳವಾರ ದಾವುದ್ ಪಠಾಣ, ರಾಜ್ ಮೊಹ್ಮದ್ ಖಾಲೇಬಾಬಾ, ಇಸ್ತೇಖಾನ್ ಹುಸೇನ್, ವೆಂಕಟೇಶ ಭಕ್ರಿ, ತಿಪ್ಪಣ್ಣ ಶೆಳ್ಳಗಿ, ರಾಜು ಕಟ್ಟಿಮನಿ, ರಮೇಶ ಅರಕೇರಿ, ಮಾಳಪ್ಪ ಕಿರದಳ್ಳಿ, ಖಾಜಾ ಅಜ್ಮೀರ್, ಮಹಿಬೂಬ್ ಪಟೇಲ್ ಇದ್ದರು.