ಸುರಪುರ: ಸವಿತಾ ಮಹರ್ಷಿ ಮತ್ತು ಶರಣ ಮಡಿವಾಳ ಮಾಚಿದೇವ ಸೇರಿದಂತೆ ಎಲ್ಲ ಶಿವಶರಣರಲ್ಲಿ ನಾವು ಸಮಾನತೆ ಕಾಣುತ್ತೇವೆ ಎಂದು ಉಪನ್ಯಾಸಕ ಲಕ್ಷ್ಮೀಕಾಂತ ದೇವರಗೋನಾಲ ಹೇಳಿದರು.
ನಗರದ ಮಾಲ್ಮೀಕಿ ಭವನದಲ್ಲಿ ಶನಿವಾರ ತಾಲೂಕು ಆಡಳಿತ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಮಡಿವಾಳ ಮಾಚಿದೇವ ಬಟ್ಟೆ ತೊಳೆಯುವ ಕಾಯಕ ಮಾಡಿದರೆ, ಸವಿತಾ ಮಹರ್ಷಿ ಕ್ಷೌರಿಕ ವೃತ್ತಿ ಕೈಗೊಂಡಿದ್ದರು. ಮೇಲ್ನೋಟಕ್ಕೆ ಇದು ಕನಿಷ್ಟ ಎನಿಸಬಹುದು, ಆದರೆ ಶರಣರ ಪಾಲಿಗೆ ಇದು ಅತ್ಯಂತ ಮಹತ್ವ ಪೂರ್ಣ, ಸರ್ವ ಶ್ರೇಷ್ಠ ಕಾಯಕವಾಗಿತ್ತು ಎಂದು ವಿವರಿಸಿದರು.
ಮಡಿವಾಳ ಮಾಚಿದೇವ ಬಟ್ಟೆ ಮಾತ್ರ ತೊಳೆಯಲಿಲ್ಲ. ಸವಿತಾ ಮಹರ್ಷಿ ಕೇವಲ ಕ್ಷೌರಿಕ ವೃತ್ತಿ ಮಾಡಲಿಲ್ಲ. ಕಾಯಕದೊಂದಿಗೆ ಸಮಾಜಕ್ಕೆ ಅಂಟಿದ್ದ ಕಂದಾಚಾರ, ಮೌಡ್ಯತೆ ಎಂಬ ಅನಿಷ್ಟಗಳನ್ನು ತೊಳೆದರು. ತಮ್ಮ ವಚನಗಳ ಮೂಲಕ ಮೇಲು-ಕೀಳು, ಮುಟ್ಟು, ಮೈಲಿಗೆ, ಅಸಮಾನತೆ ತೊಡೆದು ಹಾಕಲು ಪ್ರಯತ್ನಿಸಿದ್ದರು ಎಂದು ಹೇಳಿದರು.
ವಕೀಲ ನಿಂಗಣ್ಣ ಚಿಂಚೋಡಿ ಮಾತನಾಡಿ, ವೃತ್ತಿ ಯಾವುದಾದರೇನು, ಸಮಾಜದಲ್ಲಿ ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗಿ ಬದುಕುವುದು ಮುಖ್ಯ. ಆದ್ದರಿಂದ ಸಮಾಜ ಬಾಂಧವರು ಶಿಕ್ಷಣಕ್ಕೆ ಪ್ರಥಮಾದ್ಯತೆ ನೀಡಬೇಕು ಎಂದರು.
ತಹಸೀಲ್ದಾರ್ ನಿಂಗಣ್ಣ ಬಿರಾದಾರ ಮಾತನಾಡಿ, ಕಾಯಕದೊಂದಿಗೆ ಆರೋಗ್ಯ ವೃದ್ಧಿ ಮಾಡಿಕೊಳ್ಳುವ ಸೂತ್ರವನ್ನು ಶರಣರು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಡಿವೈಎಸ್‌ಪಿ ವೆಂಕಟೇಶ ಉಗಿಬಂಡಿ, ತಾಪಂ ಇಒ ಅಮರೇಶ, ರಮೇಶ ಗುತ್ತೇದಾರ, ಬಾಲರಾಜ ಚಿನ್ನಾಕರ್, ಸ್ವಾಮಿ ಬೈಲಪ್ಪ ಮುತ್ಯಾ ಗೊಡ್ರ್ಯಾಳ, ಸಮಾಜದ ತಾಲೂಕು ಅಧ್ಯಕ್ಷ ವೀರಗಂಟೆಪ್ಪ ಹೆಗ್ಗನದೊಡ್ಡಿ ವೇದಿಕೆಯಲ್ಲಿದ್ದರು. ಕಂದಾಯ ನಿರೀಕ್ಷಕ ಗುರುಬಸಪ್ಪ ಸ್ವಾಗತಿಸಿದರು. ಗುರು ರಾಠೊಡ ನಿರೂಸಿದರು. ಕೊಂಡಲ ನಾಯಕ ವಂದಿಸಿದರು.