Advertisement

ಬಸವಲಿಂಗ ದೇವರ ಪಟ್ಟಾಧಿಕಾರ ಮಹೋತ್ಸವ

12:24 PM Feb 02, 2020 | Naveen |

ಸುರಪುರ: ತಾಲೂಕಿನ ಲಕ್ಷ್ಮೀಪುರದ ಶ್ರೀಗಿರಿ ಮಠದ ಬಸವಲಿಂಗ ದೇವರ ಗುರು ಪಟ್ಟಾಧಿಕಾರ ಮಹೋತ್ಸವಕ್ಕೆ ಮಠದಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು, ಈ ಸಮಾರಂಭವನ್ನು ಸಗರನಾಡಿನ ಇತಿಹಾಸದಲ್ಲೇ ಸ್ಮರಣೀಯವಾಗಿಸಲು ಮಠದ ಭಕ್ತರು ಟೊಂಕ ಕಟ್ಟಿ ನಿಂತಿದ್ದಾರೆ.

Advertisement

ಮಠವನ್ನು ತಳಿರು ತೋರಣ, ಬಾಳೆ ದಿಂಡು, ತೆಂಗಿನ ಗರಿ ಸೇರಿದಂತೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿದೆ. ವಿದ್ಯುತ್‌ ದೀಪಗಳಿಂದ ಮಠ ಝಗ ಮಗಿಸುತ್ತಿದೆ. ಹೆದ್ದಾರಿಯಿಂದ ಮಠದವರೆಗಿನ ದೀಪಗಳ ಅಲಂಕಾರ ಕಣ್ಮನೆ ಸೆಳೆಯುತ್ತಿದೆ. ಸಮಾರಂಭಕ್ಕೆ ನಾಡಿನ ಪಂಚಪೀಠಗಳ ಜಗದ್ಗುರುಗಳು ಆಗಮಿಸಲಿದ್ದು, ಈಗಾಗಲೇ ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರನ್ನು ಅಡ್ಡಪಲ್ಲಕ್ಕಿ ಮಹೋತ್ಸವದೊಂದಿಗೆ ಸ್ವಾಗತಿಸಲಾಗಿದೆ.

ಫೆ.2ರಂದು ನಡೆಯುವ ಪಟ್ಟಾಧಿಕಾರ ಮಹೋತ್ಸವವಿದ್ದು, ಜ. 11ರಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪುರಾಣ ನಡೆಯುತ್ತಿದ್ದು, ಇದರೊಟ್ಟಿಗೆ ಲೋಕ ಕಲ್ಯಾಣಾರ್ಥ ಶತ ಚಂಡಿಕಾ ಯಾಗವೂ ನಡೆಯುತ್ತಿದೆ. ನೂರಾರು ಭಕ್ತರು ದಂಪತಿಗಳ ಸಹಿತವಾಗಿ ಯಾಗದಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ಪಾಲ್ಗೊಳ್ಳುತ್ತಿದ್ದಾರೆ. ಶ್ರೀಗಿರಿ ಬೆಟ್ಟದ ಮೊರಡಿ ಮಲ್ಲಿಕಾರ್ಜುನ ದೇವಸ್ಥಾನ ಭಕ್ತರಿಗೆ ಬೇಡಿದ್ದನ್ನು ಕರುಣಿಸುವ ಕಲ್ಪತರುವಾಗಿದೆ. ಇದಕ್ಕೆ ಇಂಬು ನೀಡುವಂತೆ ದೇವಸ್ಥಾನ-ಮಠದ ಪೂಜ್ಯರು ಕೂಡ ಭಕ್ತರ ಮನಗೆದ್ದ ಮಹಾತ್ಮರೆನಿಸಿದ್ದಾರೆ.

ದೇವಸ್ಥಾನ ಹಿನ್ನೆಲೆ: ಮಕ್ಕಳ ಭಾಗ್ಯ ಪಡೆಯಲು ಗೋಣೆಯ್ಯ ಗೋಣೆಮ್ಮ ಎಂಬ ದಂಪತಿ ವಿಜಯಪುರದಿಂದ ಶ್ರೀಶೈಲಕ್ಕೆ ಪ್ರತಿ ವರ್ಷ ಪಾದಯಾತ್ರೆ ಕೈಗೊಳ್ಳುತ್ತಿದ್ದರು. ಒಮ್ಮೆ ಪಾದಯಾತ್ರೆ ಸಂದರ್ಭದಲ್ಲಿ ಲಕ್ಷ್ಮೀಪುರ ಮತ್ತು ಬಿಜಾಸ್ಪೂರ ಬಳಿಯ ತಪ್ಪಲು ಪ್ರದೇಶದ ಬಳಿ ವಸತಿ ಮಾಡಿದ್ದರು.

ಶ್ರೀಶೈಲ ಚನ್ನಮಲ್ಲಿಕಾರ್ಜುನ ವೃದ್ಧ ದಂಪತಿಯ ಕನಸ್ಸಿನಲ್ಲಿ ಬಂದು ನಿಮ್ಮ ಭಕ್ತಿಗೆ ಮೆಚ್ಚಿದ್ದೇನೆ. ಮಕ್ಕಳ ಭಾಗ್ಯ ಕರುಣಿಸಿದ್ದೇನೆ. ಇನ್ನೂ ಮೇಲೆ ಶ್ರೀಶೈಲಕ್ಕೆ ಬರುವ ಅಗತ್ಯವಿಲ್ಲ. ಇಲ್ಲಿಯೇ ನೆಲೆ ನಿಂತು ದರ್ಶನ ನೀಡುತ್ತೇನೆಂದು ಅಭಯ ನೀಡಿದನಂತೆ. ಮಾತಿನಂತೆ ಗಂಡು ಮಗುವಿನ ಜನನವಾಯಿತು. ಮಕ್ಕಳ ಭಾಗ್ಯ ಕರುಣಿಸಿದ ಫಲವಾಗಿ ವೃದ್ಧ ದಂಪತಿ ಬೆಟ್ಟದ ಮೇಲೆ ದೇವಸ್ಥಾನ ನಿರ್ಮಿಸಿ ಉತ್ಸವ ಆರಂಭಿಸಿದ್ದಾರೆಂದು  ಶ್ರೀಶೈಲ ಮಲ್ಲಿಕಾರ್ಜುನ ಇತಿಹಾಸ ಪುರಾಣದಿಂದ ತಿಳಿದು ಬರುತ್ತದೆ. ಅಂದು ಸಣ್ಣದಾಗಿ ಕಟ್ಟಿಸಿದ್ದ ದೇವಸ್ಥಾನ ಇಂದು ದೊಡ್ಡ ಬೃಹತ್‌ ಆಕಾರದಲ್ಲಿ ತಲೆ ಎತ್ತಿದೆ.

Advertisement

ವರ್ಷಕ್ಕೆರಡು ಬಾರಿ ಜಾತ್ರೆ: ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬೆಟ್ಟದ ಮೇಲೆ, ಸಂಕ್ರಮಣ ಸಂದರ್ಭದಲ್ಲಿ ಬೆಟ್ಟದ ಕೆಳಗಡೆ ರಥೋತ್ಸವ ಜರುಗುತ್ತದೆ.ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಭಾಗಿಯಾಗುತ್ತಾರೆ.

ಲಿಂ|ಮೌನ ಮುನಿಯ ಸಾಧನೆ: ಮಠದ ಹಿಂದಿನ ಸ್ವಾಮೀಜಿ ಮೌನಮುನಿ ಆಗಿದ್ದರು. ತಮ್ಮ ತಪೋಬಲದ ಶಕ್ತಿಯಿಂದ ಅನೇಕ ಪವಾಡಗಳನ್ನು ತೋರಿದ್ದರು. ಅನೇಕ ಬಾರಿ ಅನುಷ್ಠಾನ
ಕೈಗೊಂಡಿದ್ದರು. ದೇವಸ್ಥಾನಕ್ಕೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ಆಗುವವರೆಗೆ ಮಾತನಾಡಲ್ಲ ಎಂದು ಮೌನಿಯಾಗಿದ್ದರು. ಅವರ ಸಂಕಲ್ಪ ಮತ್ತು ಭಕ್ತರ ಸಹಕಾರದಲ್ಲಿ ಎಲ್ಲಾ ವ್ಯವಸ್ಥೆಗಳು ಆಗಿವೆ.

ನೂತನ ಪಟ್ಟಾಧಿಕಾರಿಗಳ ಪರಿಚಯ: ನೂತನ ಪಟ್ಟಾಧಿ ಕಾರಿ ಬಸವಲಿಂಗ ದೇವರು ಲಕ್ಷ್ಮೀಪುರದಲ್ಲಿ ಬಸಮ್ಮ ವೇ| ಶ್ರೀಶೈಲಯ್ಯ ಸ್ವಾಮಿ ದಂಪತಿಯ ಉದರಲ್ಲಿ ಜನಿಸಿದರು. ಸ್ವ ಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು ಪಿಯುಸಿವರೆಗೆ ಓದಿ, ಶಹಾಪುರದ ಫಕಿರೇಶ್ವರ ಮಠದಲ್ಲಿ ವೇದಾಧ್ಯಯನ ಮಾಡಿದ್ದಾರೆ. ಮೌನಮುನಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಇವರಿಗೆ ಗುರು ಪಟ್ಟಾಧಿಕಾರ ಸಮಾರಂಭ ನಡೆಯುತ್ತಿದೆ. ಸಮಾರಂಭ ಯಶಸ್ಸಿಗೆ ಸ್ವಾಗತ ಸಮಿತಿ ಅಧ್ಯಕ್ಷ ಡಾ| ಸುರೇಶ ಸಜ್ಜನ್‌, ಸೂಗೂರೇಶ ವಾರದ, ಆನಂದ ಬಡಿಗೇರ, ಮಲ್ಲಿಕಾರ್ಜುನ ಹೂಗಾರ, ಚಂದ್ರು ಡೋಣೋರು ಇತರರು ಟೊಂಕ ಕಟ್ಟಿ ನಿಂತಿದ್ದು, ಎಡಬಿಡದೆ ಕಾರ್ಯ ಪ್ರವೃತ್ತರಾಗಿದ್ದಾರೆ.

ಅಭಿವೃದ್ಧಿ ಕಾರ್ಯ: ನೂತನ ಪಟ್ಟಾಧಿಕಾರಿ ಬಸವಲಿಂಗ ದೇವರು ಉತ್ತರಾಧಿಕಾರ ವಹಿಸಿಕೊಂಡ ನಂತರ ಭಕ್ತರ ನೆರವಿನಲ್ಲಿ ಮಠದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದು, 50 ಲಕ್ಷ ರೂ. ವೆಚ್ಚದಲ್ಲಿ ಮುಖ್ಯದ್ವಾರ, 1 ಕೋಟಿ ವೆಚ್ಚದಲ್ಲಿ ಮಠದ ನೂತನ ಕಟ್ಟಡ, ಹೆದ್ದಾರಿಯಿಂದ ದೇವಸ್ಥಾನವರೆಗೆ ಸಿಸಿ ರಸ್ತೆ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳಾಗಿವೆ.

„ಸಿದ್ದಯ್ಯ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next