Advertisement

ಕಲ್ಯಾಣಕ್ಕೆ ಧರ್ಮ ಮಾರ್ಗ ಶ್ರೇಷ್ಠ

03:44 PM Jan 29, 2020 | Naveen |

ಸುರಪುರ: ಜಗತ್ತಿನ ಸಕಲ ಜೀವ ರಾಶಿಗಳಲ್ಲಿ ಮನುಷ್ಯ ಜೀವನವೇ ಶ್ರೇಷ್ಠ. ಮಾನವರ ಕಲ್ಯಾಣಕ್ಕಾಗಿಯೇ ಪ್ರಕೃತಿಯನ್ನು ವರವಾಗಿ ಕೊಟ್ಟಿರುವ ಭಗವಂತ ಧರ್ಮ ಮಾರ್ಗದಲ್ಲಿ ಸಾಗುವಂತೆ ಸೂಕ್ಷ್ಮವಾಗಿ ತಿಳಿಸಿದ್ದಾನೆ. ಕಾರಣ ಪ್ರತಿಯೊಬ್ಬರು ಧರ್ಮ ಮಾರ್ಗದಲ್ಲಿ ನಡೆದು ಭಗವಂತನನ್ನು ಕಾಣುವ ಪ್ರಯತ್ನ ಮಾಡಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Advertisement

ತಾಲೂಕಿನ ಲಕ್ಷ್ಮೀಪುರ ಶ್ರೀ ಗಿರಿ ಮಠದ ಗುರು ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ನಡೆದ ಧರ್ಮಸಭೆಯಲ್ಲಿ ಸ್ವಾಮೀಜಿ ಸಂದೇಶ ನೀಡಿದರು. ಸೃಷ್ಠಿ ಕರುಣಿಸಿರುವ ಭಗವಂತ ಮಾನವನ ಕಲ್ಯಾಣಕ್ಕೆ ಬೇಕಿರುವ ಎಲ್ಲವನ್ನು ಇದರೊಳಗೆ ಇಟ್ಟಿದ್ದಾನೆ. ಅಣುರೇಣು ತೃಣಗಳಲ್ಲಿಯೂ ತಾನಿರುವುದಾಗಿ ತಿಳಿಸಿದ್ದಾನೆ. ದೇವನ ಸಂದೇಶವನ್ನು ನಾವೆಲ್ಲ ಸೂಕ್ಷ್ಮವಾಗಿ ಅರ್ಥೈಯಿಸಿಕೊಂಡು ಧರ್ಮ ಮಾರ್ಗದಲ್ಲಿ ಸಾಗಿ ಮಾನವ ಕುಲದ ಏಳ್ಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಋಷಿ ಮುನಿಗಳು, ಯೋಗಿಗಳು, ಯುಗ ಪುರುಷರು, ಧರ್ಮಗುರುಗಳು ವೇದ ಉಪನಿಷತ್‌ ಮತ್ತು ಶಾಸ್ತ್ರ ಪುರಾಣಗಳ ಮೂಲಕ ಭಗವಂತನನ್ನು ಸಾûಾತ್ಕರಿಸಿಕೊಂಡಿದ್ದಾರೆ. ಅದೇ ತೆರನಾಗಿ ಮಾನವರು ಕೂಡ ಧರ್ಮದಲ್ಲಿ ನಂಬಿಕೆ ಇಟ್ಟು ಗುರುಗಳ ಮಾರ್ಗದರ್ಶನದಲ್ಲಿ ಶ್ರೀಶೈಲ ಮಲ್ಲಿಕಾರ್ಜುನನನ್ನು ಕಾಣಬೇಕು ಎಂದು ಹೇಳಿದರು.

ಪ್ರಕೃತಿಯಲ್ಲಿ ಅದೆಷ್ಟೋ ಜೀವಿಗಳು ಜನಿಸುತ್ತವೆ. ವ್ಯರ್ಥ ಜೀವನ ನಡೆಸಿ ಒಂದು ದಿನ ಹೆಸರಿಲ್ಲದಂತೆ ಸತ್ತು ಹೋಗುತ್ತವೆ. ಇದರಿಂದ ಯಾವುದೇ ಲಾಭವಿಲ್ಲ. ಮನುಷ್ಯ ಇರುವಷ್ಟು ದಿನ ಪರೋಪಕಾರಿ ಮತ್ತು ಧರ್ಮಮಾರ್ಗಿಯಾಗಿ ಬದುಕುವುದು ಮುಖ್ಯ. ಇತರರಿಗೆ ಮಾದರಿಯಾಗಿ ಬದುಕುವವರು ಸತ್ತು ಇದ್ದವರಂತೆ ನಂದಾದೀಪವಾಗಿರುತ್ತಾರೆ. ಲೋಕದ ಹಿತಕ್ಕಾಗಿ, ಧರ್ಮದ ಒಳಿತಿಗಾಗಿ ತಮ್ಮ ಬದುಕನ್ನು ಗಂಧದ ಕೊರಡಿನಂತೆ ಸವೆಸುವವರು ಸಮಾಜದೊಳಗೆ ನಿತ್ಯ ಸ್ತುತ್ಯರು. ಲೋಕವಂದ್ಯರು, ಪ್ರಾತಃ ಸ್ಮರಣೀಯರಾಗುತ್ತಾರೆ. ಕಾರಣ ನೀವೆಲ್ಲ ಗುರುಸೇವೆ ಧರ್ಮ ಕಾರ್ಯ ಕೈಗೊಂಡು ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೊರಡಿ ಮಲ್ಲಿಕಾರ್ಜುನ ದೇವಸ್ಥಾನ ಎರಡನೇ ಶ್ರೀಶೈಲವಿದ್ದಂತೆ. ಬೆಟ್ಟ, ಗುಡ್ಡ, ತಪ್ಪಲು ಪ್ರದೇಶ ಸೇರಿದಂತೆ ಇಲ್ಲಿಯ ಪರಿಸರ ಭೌಗೊಳಿಕ ವಾತಾವರಣ ಎಲ್ಲವೂ ಶ್ರೀಶೈಲ ಕ್ಷೇತ್ರಕ್ಕಿಂತಲೂ ಮಿಗಿಲಾಗಿದೆ. ಮುಂಬರುವ ದಿನಗಳಲ್ಲಿ ಇದು ಪುಣ್ಯಕ್ಷೇತ್ರವಾಗಿ, ಶಕ್ತಿ ಪೀಠವಾಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳಿವೆ. ಮಠದ ನೂತನ ಪೂಜ್ಯರು ಕೂಡ ತಮ್ಮೆಲ್ಲರ ಸಹಕಾರದೊಂದಿಗೆ ಮಠವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯುವ ಶುಭ ಲಕ್ಷಣಗಳು ಕಂಡು ಬರುತ್ತಿವೆ ಎಂದು ಹೇಳಿದರು. ಮಠದ ಬಸವಲಿಂಗ ದೇವರು ಪ್ರಭುಲಿಂಗ ಸ್ವಾಮಿ, ಗುರುಶಾಂತಮೂರ್ತಿ ಶಿವಾಚಾರ್ಯರು, ಚನ್ನಬಸವ ಶಿವಾಚಾರ್ಯರು, ಸೂಗುರೇಶ್ವರ ಶಿವಾಚಾರ್ಯರು, ಪಟ್ಟಾಧಿಕಾರ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಡಾ| ಸುರೇಶ ಸಜ್ಜನ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next