Advertisement
ಸುರಪುರ: ನಾರಾಯಣಪುರ ಬಸವಸಾಗರ ಜಲಾಶಯದಿಂದ ಬುಧವಾರ 3.70 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಟ್ಟ ಪರಿಣಾಮ ನೆರೆ ಹಾವಳಿಯಿಂದಾಗಿ ಹೊಲ-ಗದ್ದೆಗಳಿಗೆ ನೀರು ನುಗ್ಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಮತ್ತೂಮ್ಮೆ ಬೆಳೆ ನಷ್ಟ ಆಗುವ ಲಕ್ಷಣಗಳು ಕಂಡು ಬರುತ್ತಿದೆ.
Related Articles
Advertisement
ತಾಲೂಕಿನ ನದಿಪಾತ್ರದ ಗ್ರಾಮಗಳಾದ ಬೆಂಚಿಗಡ್ಡಿ, ಲಿಂಗದಹಳ್ಳಿ, ಬಂಡೊಳ್ಳಿ, ತಿಂಥಿಣಿ, ದೇವಾಪುರ, ಶೆಳ್ಳಗಿ, ಮುಷ್ಠಳ್ಳಿ, ಹೆಮ್ಮಡಗಿ, ಚೌಡೇಶ್ವರಿಹಾಳ, ಸೂಗೂರು ಸೇರಿದಂತೆ ಇತರೆ ಗ್ರಾಮಗಳಲ್ಲಿ ಕೈಗೆ ಬಂದಿದ್ದ ಬೆಳೆಗಳು ಜಲಾವೃತಗೊಳ್ಳುತ್ತಿವೆ.
ಬೆಳೆಗಳು ಕೊಚ್ಚಿ ಹೋಗುವ ಸಂಭವ: ದೇವಪುರ, ಶೆಳ್ಳಗಿ, ಮುಷ್ಠಳ್ಳಿ, ಚೌಡೇಶ್ವರಿಹಾಳ ಸೇರಿದಂತೆ ನದಿ ಪಾತ್ರದ ಜಮೀನುಗಳಿಗೆ ಪ್ರವಾಹದ ನೀರು ನುಗ್ಗುತ್ತಿದ್ದು, ಹೊಲಗಳು ಜಲಮಯವಾಗುತ್ತಿವೆ. ನದಿಗೆ ಇನ್ನಷ್ಟು ನೀರು ಹರಿಸಿದಲ್ಲಿ ಭತ್ತ, ಹತ್ತಿ, ಶೇಂಗಾ, ಸೂರ್ಯಕಾಂತಿ, ಸಜ್ಜೆ, ಮೆಣಸಿನಕಾಯಿ ಇತರೆ ಬೆಳೆಗಳು ಕೊಚ್ಚುಕೊಂಡು ಹೋಗುವ ಸಂಭವವಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಜಮೀನುಗಳ ಬದುಗಳಲ್ಲಿ ಕುಳಿತು ನೀರು ಆವರಿಸುವುದನ್ನು ವೀಕ್ಷಿಸುತ್ತಿರುವುದು ಎಲ್ಲೆಡೆ ಸಾಮಾನ್ಯವಾಗಿದೆ.
ಜಾಕ್‌ವೆಲ್ ರಕ್ಷಣೆ: ನಗರಕ್ಕೆ ನೀರು ಸರಬರಾಜು ಮಾಡುವ ಇಂಟೆಕ್‌ವೆಲ್ ನದಿಯಲ್ಲಿ ಸಂಪೂರ್ಣ ಮುಳಗಿ ಹೋಗಿದೆ. ಇದರಿಂದ ನಗರಕ್ಕೆ ಕುಡಿಯುವ ನೀರು ಸರಬರಾಜಿನಲ್ಲಿ ಮತ್ತೂಮ್ಮೆ ವ್ಯತ್ಯಯವಾಗುವ ಲಕ್ಷಣ ಗೋಚರಿಸುತ್ತಿದೆ. ಜಾಕ್ ವೆಲ್ ಮುಳುಗವು ಸಾಧ್ಯತೆ ಇದ್ದು, ಮುಂಜಾಗ್ರತೆ ವಹಿಸಿ ನಗರಸಭೆಯವರು ಜಾಕ್‌ವೆಲ್‌ನಲ್ಲಿದ್ದ ಮೋಟಾರ್ ಗಳನ್ನು ಹೊರ ತೆಗೆಯುವ ಕಾರ್ಯ ಭರದಿಂದ ನಡೆಸಿದ್ದಾರೆ.