Advertisement

ವಿದ್ಯಾವಾರಿಧಿ ಶ್ರೀ ಕೆಳಗಿಳಿಸಲು ಸಹಮತ

11:24 AM Sep 21, 2019 | |

ಸುರಪುರ: ಮೈಸೂರು ಮೂಲದ ಯುವತಿ ಜತೆ ಅಶ್ಲೀಲ ಸಂಭಾಷಣೆ ನಡೆಸಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಯಾದಗಿರಿ ಜಿಲ್ಲೆಯ ಹುಣಸಗಿ ಸಮೀಪದ ಹುಣಸಿಹೊಳೆ ಕಣ್ವ ಮಠಾಧೀಶ ವಿದ್ಯಾವಾರಿಧಿ ತೀರ್ಥ ಯತಿಗಳನ್ನು ಪೀಠದಿಂದ ಕೆಳಗಿಳಿಸಲು ನಿರ್ಣಯ ಕೈಗೊಳ್ಳಲಾಗಿದೆ.

Advertisement

ಅಖೀಲ ಭಾರತ ಕಣ್ವ ಶಾಖಾ ವಿಪ್ರ ಸಮಾಜ ಬಾಂಧವರು ನಗರದ ದರ್ಬಾರ್‌ನಲ್ಲಿ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಣ್ವ ಶಾಖಾ ವಿಪ್ರ ಸಮಾಜದ ಮುಖಂಡ ಮಲ್ಹಾರಾವ್‌ ಕುಲಕರ್ಣಿ ಸಿಂದಗೇರಿ, ಹುಣಸಿಹೊಳೆ ಕಣ್ವಮಠಕ್ಕೆ ಐತಿಹಾಸಿಕ ಪರಂಪರೆಯಿದೆ. ರಾಜಾಶ್ರಯ ನೀಡಿ ಮಠದ
ಶ್ರೇಯೋಭಿವೃದ್ಧಿಗೆ ಅರಸರು ನೀಡಿದ ಕೊಡುಗೆ ಅಪಾರ. ಅಂದಿನಿಂದ ಇಂದಿನವರೆಗೂ ಪ್ರತಿ ಧರ್ಮ ಕಾರ್ಯವೂ ಅರಸು ಮನೆತನದವರ ಮಾರ್ಗದರ್ಶನದಲ್ಲಿ ನಡೆದುಕೊಂಡು ಬಂದಿದೆ. ಆದರೆ, ಮಠದ ಯತಿ ವಿದ್ಯಾವಾರಿಧಿ ತೀರ್ಥರು
ಅನೈತಿಕತೆಯಿಂದ ನಡೆದುಕೊಳ್ಳುವುದರೊಂದಿಗೆ ಶ್ರೀಮಠಕ್ಕೆ ಮತ್ತು ಸಂಸ್ಥಾನಕ್ಕೆ ಚ್ಯುತಿ ತಂದಿದ್ದಾರೆ. ಹೀಗಾಗಿ ಅವರನ್ನು ತಕ್ಷಣದಿಂದಲೇ ಪೀಠದಿಂದ ಕೆಳಗಿಳಿಸಲು ನಿರ್ಧರಿಸಲಾಗಿದೆ
ಎಂದರು.

ರಾಯಚೂರಿನ ಎಸ್‌.ಕೆ. ಪುರೋಹಿತ ಮಾತನಾಡಿ, ಯತಿಗಳ ನಡೆಯಿಂದ ಇಡೀ ವಿಪ್ರ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಉನ್ನತ ಸ್ಥಾನದಲ್ಲಿದ್ದು ಈ ರೀತಿ ನಡೆದುಕೊಂಡಿರುವುದು ಮಠದ ಭಕ್ತರಲ್ಲಿ ನೋವು ತರಿಸಿದೆ. ಕೂಡಲೇ ಪೀಠದಿಂದ ಕೆಳಗಿಳಿಸಬೇಕು ಎಂಬುದು ತಮ್ಮ
ಜಿಲ್ಲೆಯ ವಿಪ್ರರ ಮನವಿಯಾಗಿದೆ ಎಂದರು.

ಬಳ್ಳಾರಿಯ ಎ.ಜೆ.ದೇಸಾಯಿ ಮಾತನಾಡಿ, ವಿದ್ಯಾವಾರಿಧಿ ತೀರ್ಥರು ಇಡೀ ಯತಿ ವರ್ಗಕ್ಕೆ ಕಳಂಕ ತಂದಿದ್ದಾರೆ. ಪೀಠದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದ್ದಾರೆ. ತಕ್ಷಣದಿಂದಲೇ ಅವರನ್ನು ಪೀಠದಿಂದ ಕೆಳಗಿಳಿಸಬೇಕು. ಸೂಕ್ತ ಯತಿಯೊಬ್ಬರ ನೇಮಕಕ್ಕೆ ಸಹಕರಿಸಬೇಕು ಎಂದು ಕೋರಿದರು.

ಕಮಲಾಪುರದ ಸತ್ಯನಾರಾಯಣ ಮಾತನಾಡಿ, ಯತಿಗಳ ಕರ್ಮಕಾಂಡ ದೇಶದ ವಿಪ್ರ ಸಮಾಜವನ್ನೇ ಘಾಸಿಗೊಳಿಸಿದೆ. ಸ್ತ್ರೀ ಕುಲವನ್ನು ಗೌರವಿಸುವ ಸಮಾಜದಲ್ಲಿ ಘಟನೆ ನಡೆದಿರುವುದು ನೋವು ತಂದಿದೆ. ಇದೊಂದು ನಾಚಿಕೆಗೇಡಿನ ಸಂಗತಿ. ಇದಕ್ಕೆ ಯಾರದ್ದೂ ಸಮ್ಮತಿಯಿಲ್ಲ. ಪೀಠದಿಂದ ಕೆಳಗಿಳಿಸಲು
ಕಲಬುರಗಿ ಜಿಲ್ಲೆಯ ವಿಪ್ರರ ಸಹಮತವಿದೆ ಎಂದರು.

Advertisement

ಬೀದರನ ಪ್ರಾಣೇಶಾಚಾರ್ಯ ಒಂದಾಲಿ ಮಾತನಾಡಿ, ಯತಿಗಳ ನಡೆ ಸುಸಂಸ್ಕೃತ ಸಮಾಜಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ. ಮಠದಲ್ಲಿ ಅವರು ಮುಂದುವರಿದಿದ್ದೇ ಆದಲ್ಲಿ ವಿಪ್ರರ್ಯಾರೂ ಮಠಕ್ಕೆ ಹೆಜ್ಜೆ ಇಡುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದ್ದೇವೆ. ಹೀಗಾಗಿ ಅವರನ್ನು ಕೆಳಗಿಳಿಸಲು ನಮ್ಮ ಸಂಪೂರ್ಣ
ಸಹಕಾರವಿದೆ ಎಂದರು.

ಸಿಂಧನೂರಿನ ಕಮಲಾಬಾಯಿ, ಕೊಪ್ಪಳದ ರಾಧಾಬಾಯಿ ಪುರೋಹಿತ ಮಾತನಾಡಿ, ಯತಿಗಳ ಕರ್ಮಕಾಂಡ ಸಮಾಜದೆದುರು ತೆರೆದಿಟ್ಟ ಮೈಸೂರು ಮೂಲದ ಸಂತ್ರಸ್ತೆ
ಯುವತಿಗೆ ಕಣ್ವ ಶಾಖೆ ಸಮಸ್ತ ಮಹಿಳೆಯರ ಪರವಾಗಿ ಹಾರ್ದಿಕ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಒಂದು ವೇಳೆ ಮಹಿಳೆ ಹೊರ ಹಾಕದೆ ಇದ್ದರೆ ಈ ಸ್ವಾಮೀಜಿ
ಮಠಕ್ಕೆ ಬರುವ ನಮ್ಮಂತ ಅದೆಷ್ಟೋ ಅಸಹಾಯಕ ಭಕ್ತರ ಮಾನಹರಣ ಮಾಡುವ ಅಪಾಯವಿತ್ತು. ಅವರನ್ನು ಕೂಡಲೇ ಕೆಳಗಿಳಸಬೇಕು ಎಂದು ಮನವಿ ಮಾಡಿದರು.

ವಿವಿಧ ಜಿಲ್ಲೆಗಳ ಕಣ್ವ ಶಾಖಾ ವಿಪ್ರರಾದ ವೇದಮೂರ್ತಿ ರಂಗನಾಥಾಚಾರ್ಯ, ಗುರುರಾಜಚಾರ್ಯ ಪುಣ್ಯವಂತರ, ಶಂಕರ ಪುರೋಹಿತ, ನಾರಾಯಣಚಾರ್ಯ, ವಾಸುದೇವಚಾರ್ಯ, ಬಿ.ಪಿ. ಕುಲಕರ್ಣಿ,
ಭೀಮಸೇನಾಚಾರ್ಯ, ಮಂಜುನಾಥ ಕುಲಕರ್ಣಿ,
ರಾಘವೇಂದ್ರಚಾರ್ಯ ರಾಜಪುರೋಹಿತ, ಅಶೋಕ ಕುಲಕರ್ಣಿ ಹೇಮನೂರ ಮಾತನಾಡಿ, ವಿದ್ಯಾವಾರಿಧಿ ತೀರ್ಥರನ್ನು ಪೀಠದಿಂದ ಕೆಳಗಿಳಿಸುವಂತೆ ಒತ್ತಾಯಿಸಿ ಸಲಹೆ-ಸೂಚನೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಮಾತನಾಡಿ, ವಿಪ್ರರೆಲ್ಲರ ಅಭಿಪ್ರಾಯ ಆಲಿಸಿದ್ದೇನೆ. ಮೊದಲು ನೀವೆಲ್ಲರೂ ಒಟ್ಟಾಗಿ ಸೇರಿ ಚರ್ಚಿಸಿ ಒಂದು ನಿರ್ಣಯಕ್ಕೆ ಬನ್ನಿ. ಯೋಗ್ಯರನ್ನು ಪೀಠಕ್ಕೆ ಕರೆತರಲು ಸೂಕ್ತ ವ್ಯಕ್ತಿಯನ್ನು ಹುಡುಕಾಡಿ. ಇಂತಹವರೇ ಅರ್ಹರು ಎಂದು ಗುರುತಿಸಿಕೊಟ್ಟಲ್ಲಿ ಅವರನ್ನು ಕರೆ ತಂದು ಪರಂಪರೆಯಂತೆ ರಾಜಮರ್ಯಾದೆಯಿಂದ ಪೀಠಾಲಂಕಾರ ಸಮಾರಂಭ ಅದ್ಧೂರಿಯಾಗಿ ಮಾಡೋಣ ಎಂದು ಭರವಸೆ ನಿಡಿದರು.
ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಲಹೆ ಸೂಚನೆ ನೀಡಿದರು. ರಾಜಾ ಸೀತಾರಾಮ ನಾಯಕ, ರಾಜಾ ಲಕ್ಷ್ಮೀ ನಾರಾಯಣ ನಾಯಕ, ಕೃಷ್ಣ ದೇವರಾಯ ನಾಯಕ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಿಪ್ರ ಸಮಾಜ ಬಾಂಧವರು ಭಾಗವಹಿಸಿದ್ದರು.

ಸುರಪುರ: ದರ್ಬಾರ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ವಿಪ್ರ ಸಮಾಜದವರನ್ನು ಉದ್ದೇಶಿಸಿ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next