ಸುರಪುರ: ಪ್ರಸ್ತುತ ದಿನಮಾನಗಳಲ್ಲಿ ಯುವ ಸಮುದಾಯದಲ್ಲಿ ನೈತಿಕ ಶಿಕ್ಷಣ, ಸಂಸ್ಕಾರ ಬಿತ್ತುವುದು ಅಗತ್ಯವಾಗಿದೆ ಎಂದು ಮಾನ್ವಿ ಕಾಲೇಜಿನ ಉಪನ್ಯಾಸಕ ಗಿರಿಧರ ಪೂಜಾರಿ ಹೇಳಿದರು.
ರಂಗಂಪೇಟೆ ರಾಮಣ್ಣ ಬೋಡಾ ಸ್ಮಾರಕ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ನಡೆದ 77ನೇ ನಾಡಹಬ್ಬ ಉತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಕುರಿತು ಅವರು ಉಪನ್ಯಾಸ ನೀಡಿದರು.
ಗುರು ಹಿರಿಯರು, ತಂದೆ-ತಾಯಿಂದಿರನ್ನು ಗೌರವದಿಂದ ಕಾಣದಿರುವ ಪ್ರವೃತ್ತಿ ಸಮಾಜದಲ್ಲಿ ಕಂಡು ಬರುತ್ತಿದೆ. ತಂದೆ-ತಾಯಿಂದಿರನ್ನು ಗೌರವಯುತವಾಗಿ ನೋಡಿಕೊಳ್ಳದೇ ವೃದ್ಧಾಶ್ರಮಕ್ಕೆ ತಳ್ಳುವ ಕೆಟ್ಟ ಸಂಸ್ಕೃತಿ ಬೆಳೆಯುತ್ತಿರುವುದು ವಿಷಾದದ ಸಂಗತಿ ಎಂದು ಹೇಳಿದರು.
ಯುವ ಜನಾಂಗ ಮತ್ತು ವಿದ್ಯಾರ್ಥಿ ಸಮುದಾಯದ ಪ್ರತಿಯೊಬ್ಬರ ಜೀವನದಲ್ಲಿ ತಂದೆ, ತಾಯಿ, ಗುರು, ರೈತ, ಯೋಧರು ಪ್ರಮುಖರಾಗುತ್ತಾರೆ. ಅವರನ್ನು ಗೌರವದಿಂದ ಕಾಣುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಅವರಿಂದ ಪಡೆಯುವ ಜನ್ಮ, ಮಾರ್ಗದರ್ಶನ, ಪ್ರೀತಿ, ವಾತ್ಸಾಲ್ಯ, ಕರುಣೆ ಇವುಗಳಲ್ಲಿ ಒಂದಾದರೂ ವಾಪಸ್ ಅವರಿಗೆ ಕೊಡಲೇ ಬೇಕು ಎಂದು ಹೇಳಿದರು.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯಿಂದಲೇ ಪುರುಷನಿಗೆ ಆದರದ ಗೌರವವಿದೆ. ಸ್ತ್ರೀ ಇಲ್ಲದ ಪುರುಷನಿಗೆ ಗೌರವವಿಲ್ಲ. ಮಹಿಳೆಯರಲ್ಲಿ ತಾಳ್ಮೆ, ಸಹನಾ ಶಕ್ತಿ ಅಧಿಕವಾಗಿರುತ್ತದೆ. ಗಂಡನಿಲ್ಲದಿದ್ದರೂ ಮಹಿಳೆ ಜೀವಸಬಲ್ಲಳು. ಆದರೆ, ಪತ್ನಿ ಕಳೆದುಕೊಂಡ ಪತಿ ಹೆಚ್ಚು ದಿನ ಬದುಕಲಾರ. ಆದ್ದರಿಂದ ಮಹಿಳೆಯರನ್ನು ಸಮಾನ ಭಾವದಿಂದ ಕಾಣಬೇಕು. ದಬ್ಟಾಳಿಕೆ, ದೌರ್ಜನ್ಯ, ದೈಹಿಕ-ಮಾನಸಿಕ ಹಿಂಸೆಗಳತಂಹ ಕೃತ್ಯಗಳಿಂದ ಪುರುಷ ಪ್ರಧಾನ ಸಮಾಜದಿಂದ ಹೊರಬರಬೇಕು. ಸೌಜನ್ಯ-ಸಹಬಾಳ್ವೆ ಜೀವನ ನಡೆಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಶಿಕ್ಷಣ ಎಂದರೆ ಅಕ್ಷರ ಕಲಿಕೆ ಮಾತ್ರವಲ್ಲ. ಸೂಪ್ತವಾಗಿ ಅಡಗಿರುವ ಪ್ರತಿಭೆ ಹೆಕ್ಕಿ ತೆಗೆಯುವುದೇ ನಿಜವಾದ ಶಿಕ್ಷಣ. ಪ್ರಶಸ್ತಿ, ಪದವಿ ಪಡೆದು ಪದವೀಧರನಾದರೇ ಸಾಲದು. ಮನುಷ್ಯನ ಕಷ್ಟಕ್ಕೆ ಸ್ಪಂದಿಸುವ ಮಾನವೀಯತೆಯುಳ್ಳ ಒಬ್ಬ ಅಶಿಕ್ಷಿತ ಸುಶಿಕ್ಷಿತನಿಗಿಂತಲೂ ಸರ್ವಶ್ರೇಷ್ಠ. ಈ
ಕಾರಣದಿಂದಾಗಿ ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪ್ರಥಮ ದರ್ಜೆ ಗುತ್ತಿಗೆದಾರ ಪ್ರಕಾಶ ಸಜ್ಜನ ಮಾತನಾಡಿ, 77 ವರ್ಷದಿಂದ ನಡೆದುಕೊಂಡು ಬಂದಿರುವ ಸಂಘಕ್ಕೆ ಐತಿಹಾಸವಿದೆ. ಈ ಪರಂಪರೆಯನ್ನು ಈ ಭಾಗದ ಸಾಹಿತ್ಯ ಪ್ರೇಮಿಗಳು ಮುಂದುವರಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು. ಖ್ಯಾತ ಉದ್ಯಮಿ ಸುಭಾಷ್ ಬೋಡಾ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.