ಸುರಪುರ: ಕಣ್ವ ಶಾಖೆಯ ಶ್ರೀ ಕೃಷ್ಣಧ್ವೈ, ಪಾಯನ ತೀರ್ಥರ ಮಠದಲ್ಲಿ ರವಿವಾರ ಶ್ರೀ ಕೃಷ್ಣಧ್ವೈಪಾಯನ ತೀರ್ಥರ ಆರಾಧನಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು.
ಹುಣಸಿಹೊಳೆ ಕಣ್ವ ಮಠದ ವಿದ್ಯಾಕಣ್ವ ವಿರಾಜ ತೀರ್ಥರ ಸನ್ನಿಧಾನದಲ್ಲಿ ಬೆಳಗ್ಗೆ ಸುಪ್ರಭಾತ, ನೈರ್ಮಾಲ್ಯ ವಿಸರ್ಜನೆ, ಶ್ರೀ ಕೃಷ್ಣಧ್ವೈ, ಪಾಯನ ತೀರ್ಥರ ಮೂಲ ವೃಂದಾವನಕ್ಕೆ ಸಂಪ್ರೋಕ್ಷಣೆ ನಡೆಯಿತು.
ಪ್ರತಿಷ್ಠಾಪನಾಂಗ ಹೋಮದ ನಂತರ ಆಂಜನೇಯ ಮೂರ್ತಿಗೆ ಪುನರ್ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಯತಿಗಳು ವಿಠ್ಠಲ ಕೃಷ್ಣನ ಪೂಜೆಯೊಂದಿಗೆ ಸಂಸ್ಥಾನ ದೇವರ ಪೂಜೆ ಕೈಗೊಂಡರು. ನಂತರ ಪ್ರಸಾದ ವಿತರಿಸಲಾಯಿತು.
ಈ ವೇಳೆ ವಿದ್ಯಾಕಣ್ವ ವಿರಾಜ ತೀರ್ಥರು ಧರ್ಮ ಸಂದೇಶ ನೀಡಿ, ಸೃಷ್ಟಿಯಲ್ಲಿನ ಮಾನವನ ಕಲ್ಯಾಣಕ್ಕಗಿಯೇ ಭಗವಂತ ಪ್ರಕೃತಿಯನ್ನು ವರವಾಗಿ ಕರುಣಿಸಿದ್ದಾನೆ. ಸಾಕ್ಷಾತ್ ಸಂಘರ್ಷಣ ಸ್ವರೂಪಿಯಾಗಿ ಅವತರಿಸಿ ಬ್ರಹ್ಮಾಂಡವನ್ನೇ ಸೃಷ್ಟಿಸಿದ್ದಾನೆ. ತಾನು ಕೂಡ ಹಲವಾರು ರೂಪ ತಾಳಿ ನಮಗೆ ಬೇಕಾಗಿದ್ದನ್ನೆಲ್ಲ ನೀಡಿದ್ದಾನೆ. ಅಂತ್ಯದಲ್ಲಿ ಕಾಲ ಸ್ವರೂಪನಾಗಿ ನಮ್ಮನ್ನು ಬೀಜ ರೂಪದಲ್ಲಿ ಐಕ್ಯ ಮಾಡಿಕೊಳ್ಳುತ್ತಾನೆ. ಇಂತಹ ಲೀಲಾ ವಿನೋಧನಾದ ಪರಮಾತ್ಮನನ್ನು ಸ್ಮರಿಸುವುದು, ಭಜಿಸುವುದು ನಮೆಲ್ಲರ ಕರ್ತವ್ಯವಾಗಿದೆ ಎಂದರು.
ಕಾಲಚಕ್ರದಲ್ಲಿ ಮಾನವ ಸೃಷ್ಟಿ ಒಂದು ಭಾಗವಾಗಿದೆ. ಹಲವು ಜೀವರಾಶಿಗಳಲ್ಲಿ ಶ್ರೇಷ್ಠ ಜೀವಿಯಾಗಿರುವ ಮನುಷ್ಯ ದೇವ ಋಣ, ಋಷಿ, ಪಿತೃ ಋಣಗಳಿಗೆ ಭಾದ್ಯನಾಗುತ್ತಾನೆ. ಪಿತೃ ಋಣವನ್ನು ಸೇವೆ, ಋಷಿ ಋಣವನ್ನು ಸಂಧ್ಯಾವಂದನ, ದೇವ ಋಣವನ್ನು ಪೂಜಾ ವಿಧಾನದಿಂದ ತೀರಿಸಬೇಕಾಗುತ್ತದೆ. ಕಾರಣ ಪ್ರತಿಯೊಬ್ಬರು ಈ ಮೂರು ಋಣಗಳನ್ನು ತೀರಿಸಿ ಮೋಕ್ಷ ಮಾರ್ಗ ಕಂಡುಕೊಳ್ಳಬೇಕು ಎಂದು ಸಂದೇಶ ನೀಡಿದರು. ಬ್ರಾಹ್ಮಣ ಸಮಾಜದ ಪ್ರಮುಖರಾದ ಭೀಮಸೇನಾಚಾರ್ಯ ಜೋಶಿ ಮಂಗಳೂರ, ರಾಘವೇಂದ್ರಾಚಾರ್ಯ ರಾಜಪುರೋಹಿತ, ಮಲ್ಹಾರಾವ್ ಸಿಂದಗೇರಿ, ರಾಘವೇಂದ್ರಚಾರ್ಯ ಹಳ್ಳದ, ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ವೆಂಕಟೇಶ ನಾಗರಾಳ, ಚಂದ್ರಕಾಂತ ನಾಡಗೌಡ, ಶ್ರೀನಿವಾಸ ಸಿಂಧಗೇರಿ, ಮಲ್ಹಾರಾವ್ ಪಠವಾರಿ, ಕೃಷ್ಣಾ ದೇವರು, ಲಕ್ಷ್ಮೀಕಾಂತ ಅಮ್ಮಾಪುರ, ರಾಘವೇಂದ್ರಾಚಾರ್ಯ ಭಕ್ರಿ, ಪ್ರಕಾಶ ವಕೀಲ, ಗೋಪಾಲರಾವ್ ಅಗ್ನಿಹೋತ್ರಿ, ಶ್ರೀನಿವಾಸ ದೇವಡಿ, ಗಂಗಾಧರ ಜೋಶಿ ಮತ್ತಿತರರು ಇದ್ದರು.