ಸಿದ್ದಯ್ಯ ಪಾಟೀಲ
ಸುರಪುರ: ಕಳೆದ ಎರಡ್ಮೂರು ದಿನಗಳಿಂದ ಹರಿಯುತ್ತಿರುವ ಕೃಷ್ಣೆಯ ಅಬ್ಬರದ ಪ್ರವಾಹ ಗುರುವಾರ ಕೂಡ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಇದರಿಂದ ಶೆಳ್ಳಗಿ, ಮುಷ್ಠಳ್ಳಿ, ಹೆಮ್ಮಡಗಿ, ಚೌಡೇಶ್ವರಿಹಾಳ ಸೇರಿದಂತೆ ನದಿ ಪಾತ್ರದ ಇತರೆ ಗ್ರಾಮಗಳ ಹೊಲ-ಗದ್ದೆಗಳಿಗೆ ನೀರು ನುಗ್ಗಿದ್ದು ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ನೆಲಕಚ್ಚಿದೆ. ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ನಾರಾಯಣಪುರ ಬಸವಸಾಗರ ಜಲಾಶಯದಿಂದ ಗುರುವಾರ ನದಿಗೆ 3.75 ಲಕ್ಷ ಕ್ಯೂಸೆಕ್ ಹೆಚ್ಚುವರಿಯಾಗಿ ನೀರು ಹರಿಸಲಾಗುತ್ತಿದೆ.
ಪ್ರವಾಹದ ಹೊಡೆತಕ್ಕೆ ಸಿಲುಕಿ ನದಿ ದಂಡೆಯಲಿದ್ದ ಸಾವಿರಾರು ಪಂಪ್‌ಸೆಟ್ ನೀರು ಪಾಲಾಗಿವೆ. ಸಾವಿರಾರು ವಿದ್ಯುತ್ ಕಂಬಗಳು, ಪರಿವರ್ತಕ (ಟಿ.ಸಿ) ಗಳು ಸುಟ್ಟು ಹೋಗಿವೆ. ಪ್ರವಾಹದ ರಭಸಕ್ಕೆ ಕಂಬಗಳು ವಾಲಿ ನಿಂತಿದ್ದು, ಬೀಳುವ ಸ್ಥಿತಿಯಲ್ಲಿವೆ. ಕಳೆದ ಬಾರಿ ಪ್ರವಾಹದ ನಂತರ ಜೆಸ್ಕಾಂ ಇಲಾಖೆಯವರು 876 ಕಂಬ, 136 ಟಿ.ಸಿಗಳನ್ನು ಹೊಸದಾಗಿ ಹಾಕಿದ್ದರು.
ಕೆಲಸ ಮುಗಿಸುವ ಮುನ್ನವೇ ಮೊತ್ತೂಮ್ಮೆ ಎರಗಿದ ಪ್ರವಾಹ ಜೆಸ್ಕಾಂ ಇಲಾಖೆ ನಿದ್ದೆಗೆಡುವಂತೆ ಮಾಡಿದೆ. ಸಂತ್ರಸ್ತ ರೈತರಿಂದ ಆಕ್ರೋಶ: ನದಿಗೆ ನೀರು ಹರಿಸುವ ಮುನ್ನ ಯಾವುದೇ ಎಚ್ಚರಿಕೆ ನೀಡಿಲ್ಲ. ಏಕಾಏಕಿ ನದಿಯಲ್ಲಿ ನೀರು ಹರಿದು ಬಂದಿರುವುದು ಆತಂಕ ಸೃಷ್ಟಿಸಿದೆ. ಇಷ್ಟು ಪ್ರಮಾಣದಲ್ಲಿ ನದಿಗೆ ನೀರು ಹರಿಯುತ್ತಿದ್ದು, ಹೊಲಗಳಿಗೆ ನುಗ್ಗಿ ಬೆಳೆ ನಾಶವಾಗುತ್ತಿದೆ. ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಿದ್ದ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ನದಿಪಾತ್ರಗಳ ಗ್ರಾಮದ ಸಂತ್ರಸ್ತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಾಡಳಿತ ನಿರ್ಲಕ್ಷ್ಯ : ಮುಂಜಾಗ್ರತೆ ಕ್ರಮವಾಗಿ ಎಚ್ಚರಿಕೆಯಿಂದಿರಲು ನದಿ ಪಾತ್ರದ ಗ್ರಾಮಗಳಲ್ಲಿ ತಾಲೂಕಾಡಳಿತ ಡಂಗುರ ಸಾರಬೇಕಿತ್ತು. ಮಕ್ಕಳು, ಮಹಿಳೆಯರು ಬಟ್ಟೆ ತೊಳೆಯಲು ನದಿ ಕಡೆ ಹೋಗದಂತೆ ಅಧಿಕಾರಿಗಳನ್ನು ನೇಮಿಸಿ ತಡೆಯುವ ಕಾರ್ಯ ಮಾಡಬೇಕಿತ್ತು. ಆದರೆ, ಇದ್ಯಾವುದಕ್ಕೂ ತಾಲೂಕಾಡಳಿತ ತಲೆಕೆಡಿಸಿಕೊಂಡಿಲ್ಲ.ಈ ಕುರಿತು
ಅನೇಕ ಗ್ರಾಮಗಳಲ್ಲಿ ತಾಲೂಕಾಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ತಲುಪದ ಬೆಳೆ ನಷ್ಟ ಪರಿಹಾರ: ಕಳೆದ ಬಾರಿ ಪ್ರವಾಹದಿಂದ ಸಾವಿರಾರು ಎಕರೆ ಪ್ರದೇಶದಲ್ಲಿನ ಬೆಳೆ ಹಾನಿಯಾಗಿತ್ತು. ಈ ಕುರಿತು ತಾಲೂಕು ಆಡಳಿತ, ಕೃಷಿ ಇಲಾಖೆ ಅ ಧಿಕಾರಿಗಳು ಸರ್ವೇ ಮಾಡಿ ವರದಿ ಸಲ್ಲಿಸಿದರೂ ಈವರೆಗೂ ಬೆಳೆ ನಷ್ಟ ಪರಿಹಾರ ನಯಾಪೈಸೆ ಸಿಕ್ಕಿಲ್ಲ. ಈ ಬಗ್ಗೆ ಕೇಳಿದರೆ ತಹಶೀಲ್ದಾರ್ ಉಡಾಫೆ ಉತ್ತರ ನೀಡುತ್ತಾರೆ ಎಂದು ಬೆಳೆ ನಷ್ಟ ಅನುಭವಿಸಿದ ವಿವಿಧ ಗ್ರಾಮಗಳ ರೈತರು ದೂರುತ್ತಾರೆ.