ಸುರಪುರ: ಸದೃಢ ಆರೋಗ್ಯವಿದ್ದಲ್ಲಿ ಗಟ್ಟಿ ಮನಸ್ಸು ಮತ್ತು ಚಿಂತನೆ ಉತ್ತಮವಾಗುತ್ತವೆ ಎಂಬ ಮಾತಿನಿಂತೆ ಮನುಷ್ಯನಿಗೆ ಆರೋಗ್ಯ ಭಾಗ್ಯ ಮುಖ್ಯವಾಗಿದೆ. ಉತ್ತಮ ಆರೋಗ್ಯವಿದ್ದಲ್ಲಿ ಏನಾದರು ಸಾಧಿಸಲು ಸಾಧ್ಯ. ಆದ್ದರಿಂದ ಸಾರ್ವಜನಿಕರು ಆರೋಗ್ಯ ರಕ್ಷಣೆ ಮೊದಲ ಆದ್ಯತೆ ನೀಡಬೇಕು ಎಂದು ಮೌಲ್ವಿ ಮಫ್ತಿ ಇಕ್ಬಾಲ್ ವಂಟಿ ಹೇಳಿದರು.
ತಿಮ್ಮಾಪುರದ ಮದೀನಾ ಮಸ್ ಜಿದ್‌ನಲ್ಲಿ ನಗರ ಆರೋಗ್ಯ ಅಭಿಯಾನದ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯಕ್ಕಿಂತ ಭಾಗ್ಯ ಮತ್ತೂಂದಿಲ್ಲ. ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ಹೇಳಿದರು.
ಮನೆ ಸುತ್ತಮುತ್ತಲಿನ ಪ್ರದೇಶ ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಹಿರಿಯರು, ಮಕ್ಕಳ ಆರೋಗ್ಯದ ಬಗ್ಗೆ ಮುತವರ್ಜಿ ವಹಿಸಬೇಕು. ರೋಗಗಳಿಂದ ಮುಕ್ತವಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ ಸ್ವತ್ಛವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.
ಡಾಟಾ ಮ್ಯಾನೇಜರ್ ಜಾವೀದ್ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೊಳೆಗೇರಿ ಪ್ರದೇಶದಲ್ಲಿ ವಾಸವಿರುವ ಜನರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ರಕ್ತ ತಪಾಸಣೆ, ಬಿಪಿ, ಸುಗರ್ ಸೇರಿದಂತೆ ಇತರೆ ಕಾಯಿಲೆಗಳ ಪರೀಕ್ಷೆ ಮಾಡಲಾಗುತ್ತಿದೆ. ಆಯಾ ರೋಗಕ್ಕೆ ಔಷಧ ನೀಡಲಾಗುತ್ತದೆ. ಗರ್ಭಿಣಿ, ಬಾಣಂತಿಯರಿಗೆ ಔಷದೋಪಚಾರ ನೀಡಲಾಗುವುದು. ಬಡಾವಣೆ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಡಾ| ಅಮರ್, ನೇತ್ರಾಧಿಕಾರಿ ತಮೀಮ್ ಅಹಮದ್ ತಿಮ್ಮಾಪುರಿ, ಹಿರಿಯ ಆರೋಗ್ಯ ಸಹಾಯಕಿಯರಾದ ಪದ್ದಮ್ಮ, ಜೇಜಮ್ಮ, ಎಲ್‌ಡಿಸಿ ಹನುಮಂತ, ಪಾರ್ಮ್ಸಿಸ್ಟ್ ಉಮಾಶಂಕರ ದಿಕ್ಷೀತ್, ಮುಖಂಡ ಜಾವೀದ್, ಸಯ್ಯದ್ ಉಸ್ತಾದ್ ಇದ್ದರು.