ಸುರಪುರ: ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವ ಪೊಲೀಸರ ಸೇವೆ ಸಮಾಜದಲ್ಲಿ ಅನನ್ಯವಾಗಿದೆ. ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ತಮ್ಮ ಆರೋಗ್ಯ ಸುರಕ್ಷತೆ ಕಡೆಗೂ ಕಾಳಜಿ ವಹಿಸುವುದು ಅಷ್ಟೇ ಮುಖ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ| ಓಂ ಪ್ರಕಾಶ ಅಂಬೂರೆ ಹೇಳಿದರು.
ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಜಿಪಂ ಹಾಗೂ ಆರೋಗ್ಯ ಇಲಾಖೆ ಪೊಲೀಸರಿಗೆ ಏರ್ಪಡಿಸಿದ್ದ ಆರೋಗ್ಯ ರಕ್ಷಣಾ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಆರೋಗ್ಯ ಕಳೆದುಕೊಂಡರೆ ಬದುಕು ಶೂನ್ಯ. ಆದ್ದರಿಂದ ಎಷ್ಟೇ ಒತ್ತಡದಲ್ಲಿ ಕೆಲಸ ಮಾಡಿದರೂ ಕೂಡ ಆರೋಗ್ಯದ ಕಡೆ ಒಂದಿಷ್ಟು ಗಮನ ಕೊಡಿ ಎಂದರು.
ಚಿಕಿತ್ಸಾ ಮನೋಶಾಸ್ತ್ರದ ವೈದ್ಯ ಡಾ| ಜಯಕುಮಾರ ಮಾತನಾಡಿ, ಸಾರ್ವಜನಿಕ ರಂಗದಲ್ಲಿ ಸೇವೆ ಮಾಡುತ್ತಿರುವ ಪೊಲೀಸರು ವ್ಯಾಯಾಮ, ಧ್ಯಾನ ಮಾಡುವುದು ಅಗತ್ಯವಾಗಿದೆ. ಉತ್ತಮ ಆರೋಗ್ಯಕ್ಕಾಗಿ ಹೆಚ್ಚು ನೀರು ಕುಡಿಯುವುದು, ದಿನಂ ಪ್ರತಿ ಉಲ್ಲಾಸ ಉತ್ಸಾಹ, ಚೈತನ್ಯದಿಂದ ಇತರರೊಂದಿಗೆ ಪ್ರೀತಿಯಿಂದ ನಗು ನಗುತ್ತಾ ಇರುವುದು ಒಳ್ಳೆಯದು ಎಂದು ತಿಳಿಸಿದರು.
ಮನೋ ವೈದ್ಯ ಡಾ| ಉಮೇಶ ಮಾತನಾಡಿ, ಮಾನಿಸಿಕ ಕಾಯಿಲೆಗೆ ಒತ್ತಡ ಒಂದೇ ಕಾರಣವಲ್ಲ, ಅನೇಕ ಕಾರಣಗಳಿವೆ. ಮೆದುಳಿನಲ್ಲಿ ಆಗುವ ರಸಾಯಿನಿಕ ಕ್ರಿಯೆಗಳಿಂದ ಮಾನಸಿಕ ಕಾಯಿಲೆ ಬರುವ ಸಾಧ್ಯತೆ ಇದೆ. ಇದಕ್ಕೆ ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದರು.
ಪಿಎಸ್‌ಐ ಸೋಮಲಿಂಗ ಒಡೆಯರ್ ಅಧ್ಯಕ್ಷತೆ ವಹಿಸಿದ್ದರು. ನಗರ ಠಾಣೆ ಪೇದೆ ಮುಖ್ಯಪೇದೆಗಳು ಭಾಗವಹಿಸಿದ್ದರು. ಮುಖ್ಯ ಪೇದೆ ಮನೋಹರ ರಾಠೊಡ ಸ್ವಾಗತಿಸಿದರು. ಚಂದ್ರು ವಂದಿಸಿದರು.