ಸುರಪುರ: ಇಲ್ಲಿಯ ಸುಪ್ರಸಿದ್ಧ ವೇಣುಗೋಪಾಲ ಸ್ವಾಮಿ ಜಾತ್ರೆ ಸಂಭ್ರದಿಂದ ಜರುಗಿತು.
ತಾಲೂಕಿನ ವಿವಿಧ ಗ್ರಾಮಗಳಿಂದ ಜನರು ಆಗಮಿಸಿ ದೇವಸ್ಥಾನ ಬಳಿ ಜಮಾಯಿಸಿದ್ದರು. ಜಾತ್ರೆ ಅಂಗವಾಗಿ ರವಿವಾರ ನಡೆದ ದೇವರ ಸ್ತಂಭಾರೋಹಣದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
ಬೆಳಗ್ಗೆ ವೇಣುಗೋಪಾಲ ಸ್ವಾಮಿಗೆ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು. 14 ಕೇರಿಗಳ ಪ್ರತಿಯೊಬ್ಬರ ಮನೆಯಲ್ಲಿ ಅಭ್ಯಂಜನ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಭಾಜಾ ಭಜಂತ್ರಿಯೊಂದಿಗೆ ವೇಣುಗೋಪಾಲಸ್ವಾಮಿಗೆ ಕಾಯಿ ಕರ್ಪೂರ ನೀಡಿದರು. ದಾಸರಿಗೆ ವಿವಿಧ ಭಕ್ಷ ್ಯಗಳ ಗೋಪಾಳ ಬುಟ್ಟಿ ತುಂಬಿಸಿದರು. ಎಲ್ಲರ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಸಂಜೆ ಅರಮನೆಯಿಂದ ರಾಜ ಗುರುಗಳೊಂದಿಗೆ ರಾಜ ಮನೆತನದ ವತನದಾರರು ಮೈಮೂರೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿದರು. ರಾಜಗುರು ವಿಜಯ ರಾಘವನ್ ಬುಕ್ಕ್ ಪಟ್ಟಣಂ ಅವರು ವೇಣುಗೋಪಾಲನಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಮೇಲಿನಿಂದ ನಾಣ್ಯಗಳನ್ನು ಚಿಮ್ಮವ ಮೂಲಕ ಸ್ತಂಭಾರೋಹಣಕ್ಕೆ ಚಾಲನೆ ನೀಡಿದರು.
ದೇವಸ್ಥಾನ ಆವರಣದಲ್ಲಿ ನಡು ಹಾಕಲಾಗಿದ್ದ ಐದು ಕಂಬಗಳನ್ನು ನಿಗದಿತ ಗ್ರಾಮದವರು ಹತ್ತಲು ಆರಂಭಿಸಿದರು. ಮೊದಲೆ ಕಂಬಗಳಿಗೆ ಜಾರುವ ಲೋಳೆ ಪದಾರ್ಥ ಸವರಲಾಗಿತ್ತು. ಚರ್ಮದ ಚೀಲದ ಪಿಚಕಾರಿ ಹಾಕಿಕೊಂಡಿದ್ದ ಮೈಮೂರರು ಕೆಳಗಿನಿಂದ ಹಾಗೂ ಕಂಬದ ತುದಿಯಲ್ಲಿ ಕುಳಿತ್ತಿದ್ದ ಓರ್ವ ವ್ಯಕ್ತಿ ಮೇಲಿನಿಂದ ಸ್ತಂಭಾರೋಹಿಗಳಿಗೆ ನೀರು ಸುರಿಯುತ್ತಿದ್ದರು. ಇದರಿಂದ ಸ್ತಂಭಾರೋಹಿಗಳು ಕಂಬ ಹತ್ತಲಾಗದೆ ಜಾರಿ ಜಾರಿ ಕೆಳಗೆ ಬೀಳುತ್ತಿದ್ದರು. ಇದು ಸೇರಿದ್ದ ಜನಸ್ತೋಮಕ್ಕೆ ಕೆಲ ಸಮಯ ಮನರಂಜನೆ ನೀಡಿತು.
ಕೊನೆಗೂ ಒಬ್ಬರ ಸಹಾಯದಿಂದ ಮತ್ತೂಬ್ಬರು ಕಷ್ಟ ಪಟ್ಟು ಮೇಲೇರಿ, ಕಂಬದ ತುದಿಗೆ ಕಟ್ಟಿದ್ದ ಕುಂಬಳ ಕಾಯಿ ಹರಿದರು. ನಂತರ ಗರುಡವಾಹನದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ದೇವಸ್ಥಾನದಿಂದ ಜೋಳದ ಹನುಮಂತ ದೇವರ ದೇವಸ್ಥಾನದವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ವತನದಾರರಾದ ಡಾ| ನಿರಂಜನ ನಿಷ್ಠಿ, ರಾಜಾ ಎಸ್. ಗೋಪಾಲ ನಾಯಕ, ರಾಜಾ ಚಿರಂಜೀವಿ ನಾಯಕ, ರಾಜಾ ಶ್ರೀನಿವಾಸ ನಾಯಕ, ಸುನೀಲ ಸರ್ ಪಟ್ಟಣಶೆಟ್ಟಿ, ದಿನೇಶ ಮಂತ್ರಿ, ವೇಣುಮಾಧವ ನಾಯಕ, ಸುಬಾಶ್ಚಂದ್ರ ನಾಯಕ, ಶ್ರೀಕೃಷ್ಣ ದೇವರಾಯ ನಾಯಕ, ಶ್ರೀನಿವಾಸ ನಾಯಕ ಸೀಬಾರಬಂಡಿ, ವೀರೇಶ ದೇಶಮುಖ ಸೇರಿದಂತೆ ಇತರರಿದ್ದರು.