Advertisement

ಫಸಲ್ ಬಿಮಾ ಯೋಜನೆಗೆ ಸಿಗದ ರೈತರ ಪ್ರೋತ್ಸಾಹ

12:04 PM Jul 24, 2019 | Naveen |

ಸಿದ್ದಯ್ಯ ಪಾಟೀಲ
ಸುರಪುರ:
ಬೆಳೆ ನಷ್ಟ ಪರಿಹಾರ ಒದಗಿಸಿಕೊಡುವ ಮೂಲಕ ರೈತರ ಸಂಕಷ್ಟಕ್ಕೆ ನೆರವಾಗಲೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಫಸಲ್ ಬಿಮಾ ಯೋಜನೆಗೆ ತಾಲೂಕಿನಲ್ಲಿ ರೈತರಿಂದ ಪ್ರೋತ್ಸಾಹ ದೊರೆಯುತ್ತಿಲ್ಲ. ಹೀಗಾಗಿ ಕೇಂದ್ರದ ಮಹತ್ವಾಕಾಂಕ್ಷೆ ಯೋಜನೆಗೆ ಹಿನ್ನಡೆ ಕಂಡು ಬರುತ್ತಿದೆ.

Advertisement

ಕೃಷಿಕರು ಅತಿವೃಷ್ಟಿ, ಅನಾವೃಷ್ಟಿ, ಕೀಟ ಬಾಧೆ, ಆಲಿ ಕಲ್ಲು ಮಳೆ, ಪ್ರವಾಹ, ಭೂ ಕುಸಿತ, ಸಿಡಿಲು, ಅಗ್ನಿ ದುರಂತ ಸೇರಿದಂತೆ ನೈಸರ್ಗಿಕ ವಿಪತ್ತುಗಳಿಂದ ಬೆಳೆ ನಷ್ಟವಾದಲ್ಲಿ ರೈತರಿಗೆ ಪರಿಹಾರ ಭರಿಸಿಕೊಡುವುದು ಈ ಯೋಜನೆ ಉದ್ದೇಶವಾಗಿದೆ.

ಯೋಜನೆಗೆ ಒಳಪಡುವ ಬೆಳೆಗಳು: ಭತ್ತ, ತೊಗರಿ, ಹತ್ತಿ, ಶೇಂಗಾ, ಜೋಳ, ಸಜ್ಜೆ, ಮುಸುಕಿನ ಜೋಳ, ನವಣೆ, ಉದ್ದು, ಸೂರ್ಯಕಾಂತಿ, ಹೆಸರು, ಹುರಳಿ, ಎಳ್ಳು, ಅಲಸಂದೆ ಯೋಜನೆಗೆ ಒಳಪಡುವ ಬೆಳೆಗಳಾಗಿವೆ. ನೀರಾವರಿ ಮತ್ತು ಖುಷ್ಕಿ ಬೆಳೆಗೆ ಪ್ರತ್ಯೇಕ ವಿಮೆ ದರ ನಿಗದಿ ಮಾಡ ಲಾಗಿದೆ.

ನೋಂದಣಿ: ಕೃಷಿ ಕಚೇರಿ ಹಾಗೂ ರೈತ ಕೇಂದ್ರಗಳಲ್ಲಿ ಅರ್ಜಿ ಪಡೆದು ಬೆಳೆಗೆ ಸಂಬಂಧಿಸಿದ ಪಹಣಿ ಲಗತ್ತಿಸಿ, ಆಯಾ ಪ್ರದೇಶವಾರು ನಿಗದಿಪಡಿಸಿದ ಬ್ಯಾಂಕ್‌ಗೆ ತೆರಳಿ ರೈತ ತನ್ನ ಶಕ್ತಿಯನುಸಾರ ವಿಮೆ ಮೊತ್ತ ಭರಿಸಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಯಾಗುತ್ತಿದ್ದಂತೆ ಕೃಷಿ ಇಲಾಖೆ ವೆಬ್‌ಸೈಟ್ನಿಂದ ಮಾಹಿತಿ ಹೋಗುತ್ತದೆ.

ಸಾಧನೆ: ಬೆಳೆ ವಿಮೆ ಕಳೆದ ಸಾಲಿಗೆ ಹೋಲಿಸಿದಲ್ಲಿ ಪ್ರಸಕ್ತ ಸಾಲಿನಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ ಬಾರಿ ಸರಿ ಸುಮಾರು 8,270 ರೈತರು ವಿಮೆಗೆ ಒಳಪಟ್ಟಿದ್ದರು. ಇ ಪೈಕಿ 4,693 ಫಲಾನುಭವಿಗಳು ಯೋಜನೆಗೆ ಅರ್ಹರಾಗಿದ್ದಾರೆ. 7.70 ಕೋಟಿ ರೂ. ವಿಮೆ ಪರಿಹಾರ ಮೊತ್ತ ಬಂದಿದೆ. ಪ್ರಸಕ್ತ ಸಾಲಿನಲ್ಲಿ 2,011 ರೈತರು ವಿಮೆ ನೋಂದಣಿ ಮಾಡಿದ್ದಾರೆ.

Advertisement

ಮಾಹಿತಿ ಕೊರತೆ: ಈ ಮಹತ್ವಾಕಾಂಕ್ಷೆ ಯೋಜನೆಗೆ ಸರಕಾರ, ಕೃಷಿ ಇಲಾಖೆ, ಜನಪ್ರತಿನಿಧಿಗಳು ಹೆಚ್ಚಿನ ಗಮನ ಕೊಟ್ಟಿಲ್ಲ. ಸಂಬಂಧಿತ ಅಧಿಕಾರಿಗಳು ಹೆಚ್ಚಿನ ಪ್ರಚಾರ ನೀಡಿಲ್ಲ. ಯಾವುದೇ ಜಾಗೃತಿ ಶಿಬಿರ ಆಯೋಜಿಸಿ ಅರಿವು ಮೂಡಿಸಲಿಲ್ಲ. ರೈತರನ್ನು ಯೋಜನೆಯತ್ತ ಸೆಳೆಯುವ ಗಮನಾರ್ಹ ಕೆಲಸ ಎಲ್ಲಿಯೂ ನಡೆಯಲಿಲ್ಲ. ಹೀಗಾಗಿ ರೈತರಿಗೆ ಮಾಹಿತಿ ಕೊರತೆಯಿಂದ ಯೋಜನೆಗೆ ತಾಲೂಕಿನಲ್ಲಿ ನಿರಾಸಕ್ತಿ ವ್ಯಕ್ತವಾಗಿದ್ದು, ನಿಗದಿತ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ಯೋಜನೆ ವಿಫಲತೆಗೆ ಕಾರಣ ಎಂಬುದು ರೈತರ ಆರೋಪವಾಗಿದೆ.

ನಿರಾಸಕ್ತಿ: ಪ್ರಸಕ್ತ ಸಾಲಿನಲ್ಲಿ ಬೆಳೆ ನಷ್ಟವಾದಲ್ಲಿ ವಿಮೆ ಅನ್ವಯವಾಗುವುದಿಲ್ಲ. ಆದರೆ, ಆಯಾ ಗ್ರಾಪಂ, ಹೋಬಳಿವಾರು ಪ್ರದೇಶಗಳಲ್ಲಿ ಹಿಂದಿನ 5 ವರ್ಷಗಳ ಸರಾಸರಿ ಅತ್ಯುತ್ತಮ ಇಳುವರಿ ಪರಿಗಣಿಸಿ ವಿಮೆ ಭರಿಸುವ ನಿಯಮ ಅಳವಡಿಸಿರುವುದರಿಂದ ರೈತರು ನಿರಾಸಕ್ತಿ ತೋರುತ್ತಿದ್ದಾರೆ.

ವಿಮೆಗೆ ಕೊನೆ ದಿನ: ಸಾಲ ಪಡೆಯುವ ಮತ್ತು ಪಡೆಯದಿರುವ ರೈತರು ತಮ್ಮ ಬೆಳೆ ವಿಮೆ ಮಾಡಿಸಿಕೊಳ್ಳಲು ಹೋಬಳಿ ಮಟ್ಟದಲ್ಲಿ ಜುಲೈ 31, ಗ್ರಾಪಂ ಮಟ್ಟದಲ್ಲಿ ಆಗಸ್ಟ್‌ 14 ಕೊನೆ ದಿನವಾಗಿದೆ.

ಕಳೆದ ಸಾಲಿನ ವಿಮೆ ಮೊತ್ತ ಬಂದಿದ್ದು, ಶೀಘ್ರವೇ ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯೋಜನೆ ಪರಿಣಾಮಕಾರಿ ಅನುಷ್ಠಾನಗೊಳಿಸಲು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸಿ ರೈತರನ್ನು ಯೋಜನೆಗೆ ಒಳಪಡಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸುರೇಶ ಅಂಕಲಗಿ,
ತಹಶೀಲ್ದಾರ್‌ ಸುರಪುರ
ಹೊಸದಾಗಿ ಪ್ರಭಾರ ವಹಸಿಕೊಂಡಿದ್ದು, ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲಾ ಆಯಾಮಗಳಿಂದ ಪ್ರಯತ್ನಿಸಲಾಗುತ್ತಿದೆ. ಎಎಒ ಮತ್ತು ಅನುವುಗಾರರ ಮೂಲಕ ಪ್ರತಿ ದಿನ ಕನಿಷ್ಠ 3ರಿಂದ 4 ಗ್ರಾಮಗಳಲ್ಲಿ ರೈತರಿಗೆ ತಿಳಿಹೇಳಲಾಗುತ್ತಿದೆ. ಅಗತ್ಯಬಿದ್ದಲ್ಲಿ ಡಂಗೂರ ಹಾಕಿಸಲು ಸೂಚಿಸಿದ್ದೇನೆ. ಯೋಜನೆ ಯಶಸ್ವಿಗೆ ನಿರಂತರ ಪ್ರಯತ್ನಿಸುತ್ತಿದ್ದೇವೆ. ಯೋಜನೆ ಲಾಭ ಪಡೆದುಕೊಳ್ಳಲು ರೈತರು ನಿಗತದಿ ಸಮಯದಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ದಾನಪ್ಪ ಕತ್ನಳ್ಳಿ,
ಸಹಾಯಕ ಕೃಷಿ ನಿರ್ದೇಶಕ, ಸುರಪುರ
ಕೇಂದ್ರ ಸರಕಾರ ಜಾರಿ ಮಾಡಿರುವ ಫಸಲ್ ಬಿಮಾ ಯೋಜನೆ ಲಾಭ ರೈತರಿಗೆ ತಲುಪಿಸುವಲ್ಲಿ ತಾಲೂಕು ಆಡಳಿತ ಆಸಕ್ತಿ ತೋರುತ್ತಿಲ್ಲ. ಯೋಜನೆ ಕುರಿತು ರೈತರಲ್ಲಿ ಸಾಕಷ್ಟು ಗೊಂದಲ ಇದೆ. ಈ ಕುರಿತು ಒಮ್ಮೆಯೂ ಜಾಗೃತಿ ಮೂಡಿಸಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಶಿಬಿರ ಆಯೋಜಸಿ ರೈತರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ.
ವೆಂಕೋಬ ದೊರೆ,
ಶೋಷಿತ ಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ
Advertisement

Udayavani is now on Telegram. Click here to join our channel and stay updated with the latest news.

Next