ಸುರಪುರ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹಕ್ಕು. ಇದನ್ನು ಸಮರ್ಪಕವಾಗಿ ಸದ್ವಿನಿಯೋಗ ಮಾಡಿಕೊಳ್ಳುವುದರ ಜತೆಗೆ ಸಂರಕ್ಷಣೆಯನ್ನೂ ಮಾಡಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಗಂಡಾರ ಎದುರಿಸಬೇಕಾಗುತ್ತದೆ ಎಂದು ಪರಿಸರವಾದಿ ನರೇಂದ್ರ ಪಾಟೀಲ ಎಚ್ಚರಿಕೆ ನೀಡಿದರು.
ಸೈಕಲ್ ಮೇಲೆ ಕರ್ನಾಟಕ ದರ್ಶನಕ್ಕೆ ಹೊರಟ್ಟಿದ್ದ ಸಂದರ್ಭದಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕೃತಿ ಹೆತ್ತ ತಾಯಿ ಇದ್ದಂತೆ. ನಮಗೆ ಬೇಕಾದಾಗೆಲ್ಲ ಸಿಗುವುದು ಪ್ರಕೃತಿ ಮಡಲಲ್ಲಿ. ಪಶು ಪಕ್ಷಿ ಪ್ರಾಣಿ, ವನ್ಯ ಜೀವಿಗಳು ಸೇರಿದಂತೆ ಪ್ರತಿಯೊಂದು ಜೀವಿಗೂ ಸ್ವತಂತ್ರವಾಗಿ ಬದುಕುವ ಹಕ್ಕು ಇದೆ. ನಮ್ಮ ಸ್ವಾರ್ಥಕ್ಕಾಗಿ ಇತರೆ ಜೀವಿಗಳ ಬದುಕುವ ಹಕ್ಕು ಕಸಿದುಕೊಳ್ಳುವುದಾಗಲಿ, ಪರಿಸರ ನಾಶ ಮಾಡಿ ಇಷ್ಟಾರ್ಥ ಪೂರೈಸಿಕೊಳ್ಳುವುದು ಮನುಷ್ಯ ಧರ್ಮವಲ್ಲ ಎಂದು ಹೇಳಿದರು.
ನನ್ನ ದೇಶದ ಪರಿಸರ, ಜನಜೀವನ, ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಬೇಕು. ಸಂಚಾರದಿಂದ ಹೆಚ್ಚಿನದನ್ನು ಕಲಿಯಬೇಕು. ಕಲಿತದನ್ನು ಜನರಿಗೆ ತಿಳಿಸಬೇಕು ಎಂಬ ಉದ್ದೇಶದಿಂದ ದೇಶ ಸಂಚಾರ ಮಾಡುತ್ತಿದ್ದೇನೆ. ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಸೈಕಲ್ ಮೇಲೆ ಪ್ರವಾಸ ಕೈಗೊಂಡಿದ್ದೇನೆ. ಇಲ್ಲಿಯವರೆಗೆ 850 ಕಿಮೀ ಪ್ರವಾಸ ಮಾಡಿದ್ದೇನೆ. ಪ್ರವಾಸದಲ್ಲಿ ಸಾಕಷ್ಟು ಅನುಭವಕ್ಕೆ ಬಂದಿದೆ. ಇದುವರೆಗೂ ನಾನು ಕಂಡುಕೊಂತೆ ಪರಿಸರ ಸಂರಕ್ಷಣೆ ಮತ್ತು ಜನಜೀವನದ ಸಂಸ್ಕೃತಿಯಲ್ಲಿ ದಕ್ಷಿಣ ಮತ್ತು ಉತ್ತರ ಭಾಗಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಬಯಲು ಸೀಮೆಯಲ್ಲಿ ಅರಣ್ಯ ಭೂಮಿ ಯಥೇಚ್ಚವಾಗಿ ನಾಶವಾಗುತ್ತಿದೆ. ಕಾಡು ಬೆಳೆಸಬೇಕು. ಅರಣ್ಯ ಸಂಪತ್ತು ಸಂರಕ್ಷಿಸಬೇಕು ಎಂಬ ಕನಿಷ್ಠ ತಿಳಿವಳಿಕೆ ಇಲ್ಲಿಯ ಜನರಿಗಿಲ್ಲ. ಜನಪ್ರತಿನಿಧಿಗಳಿಗೂ ಈ ಬಗ್ಗೆ ಆಸಕ್ತಿ ಇಲ್ಲ. ಹೀಗಾಗಿ ಇಲ್ಲಿಯ ಪರಿಸರ ನಾಶವೇ ಈ ಪರಿಸ್ಥಿಗೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಕೃತಿಯಲ್ಲಿ ಪಶು ಪಕ್ಷಿ ಪ್ರಾಣಿ ಸಂಕುಲ ಎಲ್ಲವು ಇರಬೇಕು. ಎಲ್ಲದರಲ್ಲಿಯೂ ಮಾನವೀಯತೆ ಧಯೆ ಅಂತಃಕರುಣೆ ತೋರುವುದು ಪ್ರತಿಯೊಬ್ಬರ ಧರ್ಮವಾಗಬೇಕು. ಗಿಡಗಳನ್ನು ನಾಟಿ ಮಾಡಿದ ಮಾತ್ರಕ್ಕೆ ಕೆಲಸ ಮುಗಿಯುವುದಿಲ್ಲ. ಅವುಗಳನ್ನು ಮಕ್ಕಳಂತೆ ಜೋಪಾನ ಮಾಡುವುದು ಮುಖ್ಯವಾಗಿದೆ. ನಮ್ಮ ಬೆಟ್ಟ ಗುಡ್ಡಗಳನ್ನು ಕಾಡರಣ್ಯವಾಗಿ ಮಾರ್ಪಡಿಸಬೇಕು. ಹುಲಿ, ಕರಡಿ, ಜಿಂಕೆ ನಿರ್ಭಿತಿಯಿಂದ ಜೀವಿಸುವಂತಾಗಬೇಕು. ಸಕಲ ಜೀವರಾಶಿಗಳು ವಾಸಿಸುವಂತಾದಾಗ ಭಾರತ ಪ್ರಭುದ್ದವಾಗುತ್ತದೆ. ವಿಶ್ವ ಗುರುವಾಗುತ್ತದೆ ಎಂದು ಹೇಳಿದರು.
ರೈತರು ಕೇವಲ ಆರ್ಥಿಕ ಬೆಳೆಗಳನ್ನು ಬೆಳೆಯಬಾರದು. ಇದರೊಂದಿಗೆ ಪರಿಸರಕ್ಕೆ ಪೂರಕವಾಗಬಲ್ಲ ಬೆಳೆ ಬೆಳೆಯುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಹುಬ್ಬಳ್ಳಿ ಟೈಗರ್ ಸಂಸ್ಥೆಯಲ್ಲಿ ಕಾರಂತರ ಜತೆಗೂಡಿ ಕೆಲಸ ಮಾಡಿದ್ದೇನೆ. ನರ್ಮದಾ ಬಚಾವೋ ಹೋರಾಟದಲ್ಲಿ ಭಾಗವಹಿಸಿದ್ದೇನೆ. ಸ್ವಯಂ ನಿವೃತ್ತಿ ಪಡೆದುಕೊಂಡು ಪರಿಸರ ಕಾಳಜಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ದೇಶದ ಬಹುತೇಕ ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿಯ ಜನಜೀವನ, ಪರಿಸರ, ಸಂಸ್ಕೃತಿ, ಭೌಗೋಳಿಕ ಹಿನ್ನೆಲೆ ಬಗ್ಗೆ ತಿಳಿದುಕೊಂಡಿದ್ದೇನೆ. ಜಮ್ಮು ಕಾಶ್ಮೀರದ ಲಡಾಕ್‌ನಲ್ಲಿ 2017ರಿಂದ 19ರ ವರೆಗೆ ವಿವಿಧ ಶಾಲೆ ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಅಗತ್ಯತೆ ಕುರಿತು ಉಪನ್ಯಾಸ ನೀಡಿದ್ದೇನೆ.
ನರೇಂದ್ರ ಪಾಟೀಲ, ಪರಿಸರವಾದಿ