ಸುರಪುರ: ತಾಲೂಕಿನ ಟಿ. ಬೊಮ್ನಳ್ಳಿ ಗ್ರಾಮಕ್ಕೆ ಏತ ನೀರಾವರಿ ಕಲ್ಪಿಸುವುದು ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶೋಷಿತ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅವರನ್ನು ಭೇಟಿ ಮಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ, ಗ್ರಾಮದ ಕೆರೆ ಸುಮಾರು 50 ಎಕರೆ ವಿಸ್ತಾರ ಇದೆ. ವರ್ಷ ಇಡೀ ನೀರಿನಿಂದ ತಂಬಿರುತ್ತದೆ. ಇತ್ತೀಚೆಗೆ ಕರೆ ಹೂಳು ಮತ್ತು ಗಿಡಗಂಟೆ ಬೆಳೆದು ವ್ಯರ್ಥವಾಗಿ ಹಾಳಾಗುತ್ತಿದೆ. ಇದನ್ನು ಸ್ವಚ್ಛಗೊಳಿಸಿ ಏತ ನೀರಾವರಿ ಕಲ್ಪಿಸುವುದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಗ್ರಾಮದ ಪಕ್ಕದಲ್ಲಿಯೇ ಕಾಲುವೆ ಹಾದು ಹೋಗಿದೆ. ಆದರೆ ಕೆಲ ಜಮೀನುಗಳಿಗೆ ನೀರಾವರಿ ಇಲ್ಲ. ಕೆರೆಯನ್ನು ಏತ ನೀರಾವರಿಗೆ ಒಳಪಡಿಸದಲ್ಲಿ ನೀರಾವರಿ ವಂಚಿತ ರೈತರಿಗೆ ಹೆಚ್ಚಿನ ನೆರವಾಗಲಿದೆ. ಕಾರಣ ಸ್ಥಳ ಪರಿಶೀಲಸಿ ಏತ ನೀರಾವರಿ ಯೋಜನೆಗೆ ಒಳಪಡಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಕುಡಿಯುವ ನೀರಿಗೆ ಬಹಳಷ್ಟು ಸಮಸ್ಯೆ ಇದೆ. ಕೆಲ ವಾರ್ಡ್ಗಳಿಗೆ ನೀರು ಸರಬರಾಜು ಆಗುವುದೇ ಇಲ್ಲ. ನೀರು ಶುದ್ಧೀಕರಣ ಮಾಡುತ್ತಿಲ್ಲ. ಶುದ್ಧೀಕರಣ ಯಂತ್ರಗಳು ಕೆಟ್ಟು ಹೋಗಿ ಸುಮಾರು ವರ್ಷ ಕಳೆದಿವೆ. ನಗರಸಭೆಯವರು ಕಲುಷಿತ ನೀರು ಸರಬರಾಜು ಮಾಡುತ್ತಿದ್ದಾರೆ. ಇದರಿಂದ ರೋಗ ಆವರಿಸುವ ಸಾಧ್ಯತೆ ಇದೆ. ಕಾರಣ ಕೂಡಲೇ ಈ ಸಮಸ್ಯೆ ನಿವಾರಿಸಬೇಕು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಮನೆ ಹಂಚಿಕೆ ಕಾರ್ಯ ಸರಿಯಾಗಿ ಆಗಿಲ್ಲ. ಪಿಡಿಒಗಳು ತಮಗೆ ಇಷ್ಟ ಬಂದವರಿಗೆ ಮನೆ ಹಂಚಿಕೆ ಮಾಡಿ ಅರ್ಹ ಬಡವರಿಗೆ ವಂಚನೆ ಮಾಡಿದ್ದಾರೆ. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಂಗನವಾಡಿ ಕೇಂದ್ರಗಳಲ್ಲಿ ನಿಯಮಾನುಸಾರ ಪೌಷ್ಟಿಕ ಆಹಾರ
ವಿತರಿಸುತ್ತಿಲ್ಲ. ಬ್ಯಾಂಕ್‌ಗಳು ರೈತರಿಗೆ ಸೌಲಭ್ಯ ನೀಡುತ್ತಿಲ್ಲ, ಡಿಸಿಸಿ ಮತ್ತು ವಿಎಸ್‌ಎಸ್ ಸೊಸೈಯಿಟಿಗಳಲ್ಲಿ ಸಾಲ ವಿತರಣೆಯಲ್ಲಿ ತಾರತಮ್ಯ ನಡೆಯುತ್ತಿದೆ. ಈ ಎಲ್ಲಾ ಬೇಡಿಕೆಗಳ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗೋಪಾಲ ಬಾಗಲಕೋಟೆ, ಬಸವರಾಜಗೌಡ ಯಂಕೋಬ ನಾಯಕ, ಭೀಮರಾಯ ಸಾಹು, ಪರಮಣ್ಣಗೌಡ ಪಾಟೀಲ, ಸಿದ್ದಪ್ಪ ಪೂಜಾರಿ, ಸಣ್ಣ ಬೀರಪ್ಪ, ಭೀಮರಾಯ ತಿಪನಟಗಿ, ದೇವಿಂದ್ರಪ್ಪ ನಾಯಕ, ಕೃಷ್ಣ ದೊರೆ, ದೇವಿಂದ್ರ ರತ್ತಾಳ ಇತರರಿದ್ದರು.