ಸುರಪುರ: ಕಟ್ಟುನಿಟ್ಟಾಗಿ ಲಾಕ್‌ಡೌನ್ ಜಾರಿಗೆ ತರಲು ನಗರಸಭೆ 3 ವಾರ್ಡ್‌ಗೆ ಒಂದರಂತೆ ಕಂಟೇನ್ಮೆಂಟ್ ಝೋನ್ (ನಿಯಂತ್ರಣ ವಲಯ) ರಚಿಸಲು ನಿರ್ಧರಿಸಿದೆ. ಪ್ರಾಯೋಗಿಕವಾಗಿ 1, 2, 14 ಮತ್ತು 29, 30, 31 ವಾರ್ಡ್ಗಳನ್ನು ಕಂಟೇನ್ಮೆಂಟ್ ಝೋನ್‌ಗಳಾಗಿ
ಘೋಷಿಸಲಾಗಿದೆ. ಸೋಮವಾರ ನಗರಸಭೆ ವ್ಯಾಪ್ತಿಯ 6 ವಾರ್ಡ್‌ಗಳನ್ನು ಕಂಟೇನ್ಮೆಂಟ್ ಝೋನ್ ವ್ಯಾಪ್ತಿಗೆ ತರಲಾಗುತ್ತಿದೆ.
ಕಂಟೇನ್ಮೆಂಟ್ ಝೋನ್‌ನಲ್ಲಿ ಬರುವ ಮನೆಗಳಿಗೆ ತರಕಾರಿ, ದಿನಸಿ, ಔಷ ಧ ಇತರ ಅಗತ್ಯ ಸಾಮಗ್ರಿಗಳನ್ನು ನಗರಸಭೆ ಸಿಬ್ಬಂದಿ ಇಲ್ಲವೇ ನಗರಸಭೆಯಿಂದ ನಿಯೋಜಿತರಾದ ಸ್ವಯಂ ಸೇವಕರು ತಲುಪಿಸಲಿದ್ದಾರೆ. ಯಾವುದೇ ಕಾರಣಕ್ಕೂ ಜನರು ಮನೆ ಬಿಟ್ಟು ಹೊರಬರಲು ಅವಕಾಶವಿಲ್ಲ. ಹೊರಗೆ ಬಂದರೆ ಅಗತ್ಯ ಕಾರಣ ತಿಳಿಸಬೇಕು. ಇಲ್ಲದಿದ್ದರೆ ಅವರ ಮೇಲೆ ಕಾನೂನು ಕ್ರಮ ತೆಗೆದು ಕೊಳ್ಳಲಾಗುತ್ತಿದೆ.
ಈಗಾಗಲೇ ಕಂಟೇನ್ಮೆಂಟ್ ಝೋನ್ ವ್ಯಾಪ್ತಿಯ ಮನೆಗಳಿಗೆ ಸಾಮಗ್ರಿ ಪೂರೈಸುವವರ ಮೊಬೈಲ್ ಸಂಖ್ಯೆ ನೀಡಲಾಗಿದೆ. ಮನೆ ಮಾಲೀಕರು ಅವರಿಗೆ ಫೋನ್ ಮಾಡಿ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಬಹುದು. ಸಾಮಗ್ರಿ ಮುಟ್ಟಿದ ತಕ್ಷಣ ಹಣ ಕೊಡಬೇಕು ಎಂದು ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ತಿಳಿಸಿದರು.
ಲಾಕ್‌ಡೌನ್ ಇದ್ದರೂ ಜನರು ಅನಗತ್ಯವಾಗಿ ಹೊರಗೆ ತಿರುಗಾಡುವುದು ನಡೆದೇ ಇದೆ. ದ್ವಿಚಕ್ರ ವಾಹನಗಳ ಸಂಚಾರವೂ ಇದೆ. ಈಗಾಗಲೇ ಸಾಕಷ್ಟು ವಾಹನಗಳನ್ನು ಸೀಜ್ ಮಾಡಿದ್ದರೂ ಜನ ಕೇಳುತ್ತಿಲ್ಲ. ಕಾರಣ ಲಾಕ್‌ಡೌನ್ ಇನ್ನಷ್ಟು ಕಠಿಣಗೊಳಿಸಲು ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಈ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಹಂತ ಹಂತವಾಗಿ ಎಲ್ಲ ವಾರ್ಡ್‌ಗಳನ್ನು ಕಂಟೇನ್ಮೆಂಟ್ ಝೋನ್ ವ್ಯಾಪ್ತಿಗೆ ತರಲಾಗುತ್ತದೆ. 10 ಕಂಟೇನ್ಮೆಂಟ್ ಝೋನ್ ರಚಿಸಲಾಗುವುದು. ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ವಾಹನ ದಟ್ಟಣೆ ತಗ್ಗಿಸಲು ಮತ್ತು ಪೊಲೀಸರಿಗೆ ಸಂಚಾರ ನಿಯಂತ್ರಣಕ್ಕೆ ಅನುಕೂಲವಾಗಲು ರಾಜಾ ನಾಲ್ವಡಿ ವೆಂಕಟಪ್ಪನಾಯಕ ವೃತ್ತದಿಂದ ನಗರಸಭೆಯ ವರೆಗೆ ಒಂದು ಬದಿ ರಸ್ತೆಯನ್ನು ಕಲ್ಲುಗಳನ್ನು ಅಡ್ಡ ಹಾಕಿ ಬಂದ್ ಮಾಡಲಾಗಿದೆ ಎಂದು ತಿಳಿಸಿದರು.