ಸುರಪುರ: ದೇಶಾದ್ಯಂತ ಕರೆ ನೀಡಿದ್ದ ಭಾರತ ಬಂದ್ ಬೆಂಬಲಸಿ ದಲಿತ ಮತ್ತು ಪ್ರಗತಿ ಪರ ಸಂಘಟನೆಗಳು ಬುಧವಾರ ನಗರದ ಮಹಾತ್ಮ ಗಾಂಧೀ ಜಿ ವೃತ್ತದಲ್ಲಿ ಪ್ರತಿಭಟಿಸಿದವು. ಬಂದ್ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಒತ್ತಾಯ ಮಾಡಿ ಅಂಗಡಿಗಳನ್ನು ಬಂದ್ ಮಾಡಿಸುವಂತ್ತಿಲ್ಲ. ಸಾರ್ವಜನಿಕರ ಶಾಂತಿ ಕದಡುವಂತ್ತಿಲ್ಲ ಎಂದು ಪೊಲೀಸ್ ಇಲಾಖೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿದ್ದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಬೆಳಗ್ಗೆ ತಮ್ಮ ಅಂಗಡಿಗಳನ್ನು ತರೆದು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದ್ದರು.
10 ಗಂಟೆ ಸುಮಾರಿಗೆ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದ್ದಂತೆ
ಗಾಂಧಿ ವೃತ್ತದಲ್ಲಿ ವರ್ತಕರು ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲಿಸಿದರು. ತರಕಾರಿ ಮಾರುಕಟ್ಟೆ, ಪಟೇಲ್ ವೃತ್ತ, ಅರಮನೆ ಮಾರ್ಗ ಸೇರಿದಂತೆ ಉಳಿದೆಡೆ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ವ್ಯಾಪಾರ ವಹಿವಾಟು ಆರಂಭಿಸಿದ್ದವು. ಹೀಗಾಗಿ ನಗದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ಕಂಡು ಬಂದಿತು. ಸರ್ಕಾರಿ ಕಚೇರಿ, ಬ್ಯಾಂಕ್‌ಗಳು, ಶಾಲಾ-ಕಾಲೇಜುಗಳು ಎಂದಿನಂತೆ ನಡೆದವು.
ಸಾರಿಗೆ ಸಂಚಾರ ಸುಗಮವಾಗಿದ್ದರೆ ಜನ ಸಂಚಾರ ವಿರಳವಾಗಿತ್ತು. ಪ್ರತಿಭಟನಾಕಾರರು ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಮಹಾತ್ಮ ಗಾಂಧಿಧೀಜಿ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟಿಸಿದರು.
ಯಲ್ಲಪ್ಪ ಚಿನ್ನಾಕಾರ, ಅಹ್ಮದ್ ಪಠಾಣ, ನಾಗಣ್ಣ ಕಲ್ಲದೇವನಹಳ್ಳಿ, ಮುಫ್ತಿ ಎಕ್ಬಾಲ ವಂಟಿ, ಮಾನಪ್ಪ ಕಟ್ಟಿಮನಿ, ಉಸ್ತಾದ್ ವಜಾಹತ್ ಹುಸೇನ್, ಸುರೇಖಾ ಕುಲಕರ್ಣಿ ಮಾತನಾಡಿ, ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಎನ್‌ಆರ್‌ಸಿ, ಸಿಎಎ, ಎನ್ ಪಿಆರ್ ದೇಶದ ನಾಗರಿಕರಿಗೆ ಅವಶ್ಯಕತೆ ಇಲ್ಲ. ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿಗೆ ಭಂಗ ತರುತ್ತಿದೆ. ದೇಶದ ಅಭಿವೃದ್ಧಿ, ಸರ್ವ ಧರ್ಮಗಳ ಸಹೋದರೆತೆಯ ತತ್ವಗಳಿಗೆ ಧಕ್ಕೆಯಾಗುತ್ತಿದೆ. ಕೇಂದ್ರ ಸರಕಾರ ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ದೇಶದ ಪ್ರಧಾನಿ ಮತ್ತು ಗೃಹ ಸಚಿವರು ದಿನಕ್ಕೊಂದು ಹೇಳಿಕೆ ನೀಡುತ್ತಾ ದೇಶದ ಜನತೆಗೆ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಸಿಎಎ, ಎನ್‌ಆರ್‌ಸಿ, ಎನ್‌ಆರ್‌ಪಿ ಕಾನೂನುಗಳನ್ನು ತಕ್ಷಣ ರದ್ದುಗೊಳಿಸಬೇಕು. ವಿಳಂಬ ಅನುಸರಿಸಿದರೆ ದೇಶದಲ್ಲಿ ಇನ್ನೂ ಹೆಚ್ಚಿನ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿ ರಾಷ್ಟ್ರಪತಿಗೆ ಬರೆದ ಮನವಿಯನ್ನು ಗ್ರೇಡ್-2 ತಹಶೀಲ್ದಾರ್ ಸೋಫೀಯಾ ಸುಲ್ತಾನ್ ಅವರಿಗೆ ಸಲ್ಲಿಸಿದರು.
ವೆಂಕಟೇಶ ಹೊಸ್ಮನಿ, ಖಲೀಲ್ ಅಹ್ಮದ್ ಅರಕೇರಿ, ಗಫಾರ್ ನಗನೂರಿ, ರಾಹುಲ್ ಹುಲಿಮನಿ, ಮಹಿಬೂಬ್ ಒಂಟಿ, ಲಿಯಾಖತ್ ಕಟಪಟೆ, ಖಾಲೀದ್ ಅಹ್ಮದ್, ಅಬ್ದುಲ್ ಮಜೀದ್, ಹಣಮಂತ ಬೊಮ್ಮನಳ್ಳಿ, ಹಣಮಂತ ಕಟ್ಟಮನಿ, ಮಾಳಪ್ಪ ಕಿರದಳ್ಳಿ, ಭೀಮರಾಯ ಸಿಂದಗೇರಿ, ಪ್ರಕಾಶ ಅಲ್ಹಾಳ, ಅಬೀದ್ ಹುಸೇನ್, ತಿಪ್ಪಣ್ಣ ಶೆಳ್ಳಗಿ, ರಫೀಕ್, ರಾಜು ದೊಡ್ಡಮನಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.