Advertisement

ರೈತರಿಗೆ ವರದಾನ ಜೈವಿಕ ಅನಿಲ

07:21 PM Nov 07, 2019 | Naveen |

„ಸಿದ್ದಯ್ಯ ಪಾಟೀಲ
ಸುರಪುರ: ಆರೋಗ್ಯ ಕಾಪಾಡಲು ಕೇಂದ್ರ ಸರಕಾರ ಪ್ರಧಾನ ಮಂತ್ರಿ ಉಜ್ವಲ್‌ ಭಾರತ ಯೋಜನೆಯಡಿ ಜಾರಿಗೆ ತಂದಿರುವ ಬಯೋ ಗ್ಯಾಸ್‌ (ಹೊಗೆ ರಹಿತ ಹೊಲೆ)ನಿಂದ ಉತ್ಪತ್ತಿಯಾಗುವ ಹರ್ಬಲ್‌ ಯೂರಿಯಾ ಪೋಷಕಾಂಶ ರೈತರಿಗೆ ವರದಾನವಾಗಿದೆ.

Advertisement

ಕೃಷಿಕರನ್ನೇ ಮುಖ್ಯ ಗುರಿಯಾಗಿಸಿಕೊಂಡು ಜಾರಿಗೆ ತಂದ ಬಯೋ ಗ್ಯಾಸ್‌ (ಹೊಗೆ ರಹಿತ ಹೊಲೆ) ಯೋಜನೆ ಹಳ್ಳಿಗಳಲ್ಲಿ ಅಷ್ಟಾಗಿ ಪ್ರಚಾರ ಪಡೆಯುತ್ತಿಲ್ಲ. ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಗುರಿ ಸಾಧಿಸಲಾಗಿಲ್ಲ. ಇದಕ್ಕೆ ರೈತರ ನಿರಾಸಕ್ತಿಯೇ ಕಾರಣ ಎಂದು ಹೇಳಲಾಗುತ್ತಿದೆ.

ಬಯೋ ಗ್ಯಾಸ್‌ ಯೋಜನೆ ಬಳಕೆಯಿಂದ ದೂರವೇ ಉಳಿದಿದ್ದಾರೆ ರೈತರು. ಕೇಂದ್ರ ಸರಕಾರ ಬಯೋ ಗ್ಯಾಸ್‌ ಯೋಜನೆ ಎಲ್ಲ ಹಳ್ಳಿ ಕೃಷಿಕರಿಗೆ ತಲುಪಿಸಲು ರಾಜ್ಯ ಸರಕಾರದ ಜತೆಗೆ ಸರಕಾರೇತರ ಸಂಸ್ಥೆಗಳಿಗೆ ಜವಾಬ್ದಾರಿ ವಹಿಸಿದೆ. ಕಲ್ಯಾಣ ಕರ್ನಾಟಕ ಭಾಗಗಳಾದ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ ಜಿಲ್ಲೆಗಳಲ್ಲಿ ಬಯೋ ಗ್ಯಾಸ್‌ ಘಟಕ ನಿರ್ಮಾಣ ಮಾಡಲಾಗುತ್ತಿದೆ.

3 ಹಸು ಅಗತ್ಯ: ಬಯೋ ಗ್ಯಾಸ್‌ ಯೋಜನೆಗೆ ಒಳಪಡಲು ಒಂದು ಕುಟುಂಬ 3ಕ್ಕಿಂತ ಹೆಚ್ಚು ಹಸುಗಳನ್ನು ಹೊಂದಿರಲೇಬೇಕು. ಅವಿಭಕ್ತ ಕುಟುಂಬವಾಗಿದ್ದರೆ ಜಾನುವಾರುಗಳಿಗೆ ಅನುಗುಣವಾಗಿ ಬಯೋ ಗ್ಯಾಸ್‌ ನಿರ್ಮಿಸಿಕೊಡಲಾಗುತ್ತದೆ.

ದಾಖಲಾತಿ: ಯೋಜನೆ ಲಾಭ ಪಡೆಯಲು ಫಲಾನುಭವಿಯೂ ಒಂದು ಪಾಸ್‌ಪೋರ್ಟ್‌ ಅಳತೆ ಚಿತ್ರ. ಗುರುತಿಗಾಗಿ ಆಧಾರ್‌ ಕಾಡ್‌ ಅಥವಾ ಚುನಾವಣೆ ಗುರುತಿನ ಚೀಟಿ ನೀಡಬೇಕು. ಬಳಿಕ ಯೋಜನೆಗನುಗಣವಾಗಿ ಅರ್ಜಿ ಭರ್ತಿ ಮಾಡಿಕೊಡಬೇಕು. ಬಳಿಕ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.

Advertisement

ಜಾಗ ನಿಗದಿ: ಬಯೋ ಗ್ಯಾಸ್‌ ಘಟಕ ನಿರ್ಮಾಣಕ್ಕಾಗಿ 12 ಅಡಿ ಸುತ್ತಳತೆ ಜಾಗ ಅಗತ್ಯ. 12 ಅಡಿ ಸುತ್ತಳತೆ ಜಾಗದಲ್ಲಿ ಮೊದಲಿಗೆ ಜೆಸಿಬಿ ಯಂತ್ರದಿಂದ 8 ಅಡಿ ಆಳ ತೆಗೆಸಿ ಬಳಿಕ ಗೋಳಾಕಾರದ ಸಿಮೆಂಟ್‌ ಬುಟ್ಟಿ ಇಡಲಾಗುತ್ತದೆ. ಬಳಿಕ ಸುತ್ತಲು ಕಾಂಕ್ರಿಟ್‌ ಹಾಕಿ ಪ್ಯಾಕ್‌ ಮಾಡಿ 2 ಅಡಿ ಅಗಲದ ಜಾಗ ಬಿಡಲಾಗುತ್ತದೆ. ಇದರಿಂದ ಹರ್ಬಲ್‌ ಯೂರಿಯಾ ಪಡೆಯಬಹುದಾಗಿದೆ.

ಅನುಷ್ಠಾನ ವಿಧಾನ: ಆರಂಭದಲ್ಲಿ ಕನಿಷ್ಠ 2 ಟನ್‌ ಅಂದರೆ ನೂರು ಬುಟ್ಟಿ ( ಸಾಧಾರಣ ಎರಡು ಚಕ್ಕಡಿ) ಸಗಣಿ, 2 ಸಾವಿರ ಲೀಟರ್‌ ನೀರು ಬೇಕು. ನಂತರ ಪ್ರತಿ ದಿನ ಕನಿಷ್ಠ ಎರಡು ಬುಟ್ಟಿ ಸಗಣಿ, ಎರಡು ಕೊಡ ನೀರಿನೊಂದಿಗೆ ಮಿಶ್ರಣ ಮಾಡಿ ಗುಂಡಿಗೆ ಹಾಕಬೇಕು. ಹಾಕಿರುವ ಎರಡು ಬುಟ್ಟಿ ಸಗಣಿ ಮರುದಿನವೇ ಹರ್ಬಲ್‌ ಗೊಬ್ಬರವಾಗಿ ಹೊರ ಬರುತ್ತದೆ. ಕಾಂಪೋಸ್ಟ್‌, ರಸಾಯನಿಕ ಗೊಬ್ಬರಗಿಂತ ಹರ್ಬಲ್‌ ಗೊಬ್ಬರ ಉತ್ಕೃಷ್ಟವಾಗಿದೆ.

ಅಡ್ಡ ಪರಿಣಾಮವಿಲ್ಲ: ಬಯೋ ಗ್ಯಾಸ್‌ನಿಂದ ಹೊರಹೊಮ್ಮುವ ಮಿಥೇನ್‌(ಪಂಕವಾಯು) ಪರಿಸರ ಹಾಗೂ ಜನರ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಮಾನವರಿಗೆ ಯಾವುದೇ ರೋಗಗಳು ಬರುವುದಿಲ್ಲ.

ಪುಕ್ಕಟೆ ನಿರ್ಮಾಣ: ಸಗಣಿ ಮತ್ತು ನೀರು ಹತ್ತಿರ ಇರುವ ಕಡೆ ಬಯೋ ಗ್ಯಾಸ್‌ ಘಟಕ ನಿರ್ಮಿಸಲಾಗುತ್ತದೆ. ಇದಕ್ಕೆ 20 ಸಾವಿರ ರೂ. ವೆಚ್ಚವಾಗುತ್ತದೆ. ಕೇಂದ್ರದಿಂದ 15 ಸಾವಿರ, ರಾಜ್ಯದಿಂದ 5 ಸಾವಿರ ರೂ. ಸೇರಿ 20 ಸಾವಿರ ರೂ. ನೀಡುತ್ತಾರೆ. ಇದಕ್ಕೆ ಫಲಾನುಭವಿಗಳು ಎರಡು ಬಂಡಿ ಮರುಳು, ನಾಲ್ವರು ಕಾರ್ಮಿಕರನ್ನು ನೀಡಬೇಕು. ಉಳಿದ ಸಿಮೆಂಟ್‌, ಕಂಕರ್‌ ಉಳಿದೆಲ್ಲ ಸಾಮಗ್ರಿಯನ್ನು ಸರಕಾರೇತರ ಸಂಸ್ಥೆಯೇ ಮಾಡಿಕೊಳ್ಳಲಿದೆ.

ಅನುಷ್ಠಾನ ಸಮರ್ಪಕವಾಗಲಿ: ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಕುಟುಂಬಕ್ಕೂ ಈ ಯೋಜನೆ ಅನುಷ್ಠಾನಗೊಳಿಸುವ ನಿರ್ದೇಶನವಿದೆ. ತಾಲೂಕಿನ ದೇವತ್ಕಲ್‌ ಮತ್ತು ದೇವಾಪುರ ಗ್ರಾಪಂ ಹೊರತು ಪಡಿಸಿದರೆ ಉಳಿದ ಗ್ರಾಪಂ ವ್ಯಾಪ್ತಿಯಲ್ಲಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಬೇಕಿದೆ.

ಚಿಕ್ಕ ಕುಟುಂಬಕ್ಕೆ ಉಪಯುಕ್ತ: ಪತಿ, ಪತ್ನಿ, ತಂದೆ, ತಾಯಿ, ಇಬ್ಬರು ಮಕ್ಕಳು ಸೇರಿದಂತೆ ಆರು ಜನರಿರುವ ಕುಟುಂಬಕ್ಕೆ ಉತ್ತಮವಾದ ಯೋಜನೆಯಾಗಿದೆ. ಅವಿಭಕ್ತ ಕುಟುಂಬದವರು ಹಸುಗಳ ಆಧಾರದ ಮೇಲೆ ಬಯೋ ಗ್ಯಾಸ್‌ ನಿರ್ಮಿಸಿಕೊಳ್ಳಬಹುದಾಗಿದೆ.

ಟ್ಯೂಬ್‌ಗಳಲ್ಲಿ ಇಂಧನ: ಟ್ಯೂಬ್‌ಗಳಲ್ಲಿ ಬಯೋ ಗ್ಯಾಸ್‌ ತುಂಬಿಕೊಂಡು ನೆಲೆ ನಿಂತ ಯಾವುದೇ ಪ್ರದೇಶದಲ್ಲಿ ಸ್ಟೌವ್‌ ಇಟ್ಟುಕೊಂಡು ಅಡುಗೆ ಮಾಡಿಕೊಳ್ಳಬಹುದು. ತಾಲೂಕಿನ ಕಕ್ಕೇರಾ ಹತ್ತಿರದ ಲಿಂಗಾಪುರ ದೊಡ್ಡಿಯಲ್ಲಿ ವ್ಯವಸ್ಥೆ ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next