ಸುರಪುರ: ಜಾತಿ, ಮತ, ಧರ್ಮ ಎಣಿಸದೆ ಸರ್ವರಿಗೂ ಸಂತೋಷ ಕೊಡುವ ಶಕ್ತಿ ಸಂಗೀತಕ್ಕೆ ಇದೆ. ಸಮಾಜ ಸಮಾಜಗಳ ನಡುವೆ ಭಾತೃತ್ವ ಗಟ್ಟಿಗೊಳಿಸುವಲ್ಲಿ ಸಂಗೀತದ ಪಾತ್ರ ಗಮನಾರ್ಹವಾಗಿದೆ ಎಂದು ದೇವಾಪುರ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ಹೇಳಿದರು.
ಇಲ್ಲಿಯ ಶಿವಶರಣೆ ರೇಣುಕಾ ಮಾತೆ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಸಂಗೀತ ಸಂಜೆ, ಧರ್ಮ ಸಭೆ, ಜ್ಞಾನ ಸಿಂಚನಾ ಪ್ರಶಸ್ತಿ ಪ್ರದಾನ ಮತ್ತು ಭಕ್ತಿ ಸೌರಭ ಗ್ರಂಥದ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಸಂದೇಶ ನೀಡಿದರು.
ಸಂಗೀತಕ್ಕೆ ಜಾತಿ ಇಲ್ಲ, ಮತ, ಪಂಥ, ವರ್ಗ, ವರ್ಣವೂ ಇಲ್ಲ. ಮಾನಸಿಕ ನೆಮ್ಮದಿಗೆ ಸಂಗೀತ ದಿವ್ಯ ಔಷಧವಾಗಿದೆ ಎಂದು ತಿಳಿಸಿದರು.
ಶಿವಶರಣೆ ರೇಣುಕಾ ಮಾತೆಯನ್ನು ತಂದೆ, ತಾಯಿ, ಅಕ್ಕ ಎಂಬ ದೈವಿ ಸ್ವರೂಪದಲ್ಲಿ ಕಟ್ಟಿಮನಿ ಪರಿವಾರದವರು ಕಂಡಿದ್ದರು. ಇಲ್ಲಿ ಸಂಗೀತ ಪಾಠ ಶಾಲೆ ಆರಂಭಿಸುವುದರ ಮೂಲಕ ಅನೇಕರು ಸಂಗೀತ ಕಲಿಕೆಗೆ ಪ್ರೇರಣೆಯಾಗಿದ್ದಾರೆ. ಸಂಗೀತ ಸ್ಮರಣೆ ಮೂಲಕ ಮಹಾತ್ಮರ ಸ್ಮರಣೆ ಮಾಡುವುದು ಪ್ರಶಂಸನೀಯ ಎಂದ ಅವರು, ಜೀವನದಲ್ಲಿ ಒಳ್ಳೆಯ ಸಂಸ್ಕಾರವನ್ನು ಕಲಿಸಿದವರಿಗೆ ನಾವು ಕೃತಜ್ಞರಾಗಬೇಕು ಎಂದು ನುಡಿದರು.
ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ), ಹಾಲಿ ಸದಸ್ಯ ಬಸವರಾಜ ಸ್ಥಾವರಮಠ ಮಾತನಾಡಿದರು. ತಾಳಿಕೋಟಿಯ ಸಿದ್ದಲಿಂಗ ದೇವರು ಖಾಸಗತ ಅವರು ಧರ್ಮ ಸಭೆ ಉದ್ಘಾಟಿಸಿದರು.
ಪ್ರಹ್ಲಾದ ಕಟ್ಟಿಮನಿ ರಚಿಸಿದ ಭಕ್ತಿ ಸೌರಭ ಗ್ರಂಥದ ಲೋಕಾರ್ಪಣೆ ಜರುಗಿತು. ಜೈರಾಮ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು.ವೇಣುಗೋಪಾಲ ಜೇವರ್ಗಿ, ಶ್ರೀಹರಿರಾವ್ ಆದೋನಿ ವೇದಿಕೆಯಲ್ಲಿದ್ದರು. ಇದೇ ವೇಳೆ ಮೈಸೂರದ ಭೀಮಾಶಂಕರ ಬಿದನೂರಗೆ ಶಿವಶರಣೆ ಶ್ರೀರೇಣುಕಾ ಮಾತೆ ಜ್ಞಾನ ಸಿಂಚನ ಪ್ರಶಸ್ತಿ-2019 ಪ್ರದಾನ ಮಾಡಲಾಯಿತು. ಸಂಗೀತ ಕಲಾವಿದರು, ಪ್ರಮುಖರು, ಪಾಲಕ-ಪೋಷಕರು ಇದ್ದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿ, ವಂದಿಸಿದರು.