ಸುರಪುರ: ಬಾಲ ಕಾರ್ಮಿಕತೆ ಇದೊಂದು ಕೆಟ್ಟ ಪದ್ಧತಿ. ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಕೂಡ ಈ ಅನಿಷ್ಟತೆ ನಿರೀಕ್ಷಿತ ಪ್ರಮಾಣದಲ್ಲಿ ತಡೆಗಟ್ಟಲಾಗದಿರುವುದು ವಿಷಾದದ ಸಂಗತಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ತಯ್ಯಬಾ ಸುಲ್ತಾನ್ ಹೇಳಿದರು.
ನಗರದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಜಿಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕರ ಕಚೇರಿ ತಾಲೂಕು ಮಟ್ಟದ ವಿವಿಧ ಇಲಾಖೆ ಮತ್ತು ಸಂಘಟನೆಗಳು ಸಂಯುಕ್ತವಾಗಿ ಏರ್ಪಡಿಸಿದ್ದ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
18 ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಈ ಕಾಯ್ದೆಯನ್ನು ಉಲ್ಲಂಘಿಸಿ ಮಕ್ಕಳನ್ನು ದುಡಿಸಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಕನಿಷ್ಠ 6 ತಿಂಗಳಿಂದ ಗರಿಷ್ಠ 2 ವರ್ಷದ ವರೆಗೆ ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸುವ ಅವಕಾಶವಿದೆ, ಕಾರಣ ಯಾವುದೇ ಕಾರಣಕ್ಕೆ ಮಕ್ಕಳನ್ನು ದುಡಿಸಿಕೊಳ್ಳಬಾರದು ಎಂದು ತಾಕೀತು ಮಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಚಿದಾನಂದ ಬಡಿಗೇರ ಮಾತನಾಡಿ, ಸರಕಾರ ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಜಾರಿಗೊಳಿಸಿ ವಿವಿಧ ಸೌಲಭ್ಯ ಒದಗಿಸಿದೆ. ಪಾಲಕ ಪೋಷಕರಿಗೆ ಮಕ್ಕಳ ಶಿಕ್ಷಣದ ಬಾರ ಕಡಿಮೆಮಾಡಿದೆ. ಇಷ್ಟಿದ್ದು ಶಾಲೆ ಬಿಡಿಸಿ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸುವುದು ಹೊಲ ಮನೆಗಳ ಕೆಲಸಕ್ಕೆ ಕರೆದುಕೊಂಡು ಹೋಗುವುದು ಸರಿಯಲ್ಲ. ಪ್ರತಿಯೊಬ್ಬರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಅವರನ್ನು ಒಳ್ಳೆಯ ಅಧಿಕಾರಿಗಳನ್ನಾಗಿ ಮಾಡಿ ದೇಶದ ಅಭಿವೃದ್ಧಿಗೆ ನೆರವಾಗಿ ಎಂದು ಸಲಹೆ ನೀಡಿದರು.
ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘವೀರಸಿಂಗ್ ಠಾಕೂರ ಪ್ರಮಾಣ ವಚನ ಬೋಧಿಸಿ ನಂತರ ಪ್ರಾಸ್ತವಿಕ ಮಾತನಾಡಿ, ಈ ಅನಿಷ್ಟ ಪದ್ಧತಿಯನ್ನು ತಡೆಗಟ್ಟಲು ಅಧಿಕಾರಿಗಳು ಪ್ರಯತ್ನ ಮಾಡಿದರೆ ಸಾಲದು ಇದಕ್ಕೆ ಸಾರ್ವಜನಿಕರು ಕೈ ಜೋಡಿಸುವುದು ಅಗತ್ಯವಾಗಿದೆ. ರೆಡೆಮೇಡ್ ಗಾರ್ಮೆಂಟ್ಸ, ಗ್ಯಾರೇಜ, ಹೋಟೆಲ್, ಕಿರಾಣಿ ಮತ್ತು ಇತರೆಡೆ ಬಾಲ ಕಾರ್ಮಿಕರು ಕೆಲಸ ಮಾಡುವುದು ಕಂಡು ಬಂದಲ್ಲಿ ತಕ್ಷಣವೇ ಜಿಲ್ಲಾ ಸಹಾಯವಾಣಿ 08473-253456, 253727 ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ವಕೀಲೆ ಜಯಲಲಿತಾ ಪಾಟೀಲ, ನಂದನಗೌಡ ಪಾಟೀಲ ಉಪನ್ಯಾಸ ನೀಡಿದರು. ಇದೇ ವೇಳೆ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಆಡಿಯೋ ಸಿಡಿ ಮತ್ತು ಜಾಗೃತಿ ಪೋಸ್ಟರ್ ಹಾಗೂ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಬಿ.ಎನ್. ಅಮರನಾಥ, ವಕೀಲರ ಸಂಘದ ಅಧ್ಯಕ್ಷ ಮಹ್ಮದ್ ಹುಸೇನ್, ತಹಶೀಲ್ದಾರ್ ಸುರೇಶ ಅಂಕಲಗಿ, ಮಕ್ಕಳ ಸಮಿತಿ ಜಿಲ್ಲಾಧ್ಯಕ್ಷ ಹಣಮಂತ್ರಾಯ ಕರಡಿ, ಸದಸ್ಯ ಮಾಳಪ್ಪ ವಂಟೂರ, ಆರೋಗ್ಯಾಧಿಕಾರಿ ಡಾ| ಆರ್.ವಿ. ನಾಯಕ, ಸಿಡಿಪಿಒ ಲಾಲಸಾಬ ಪೀರಾಪೂರ, ಹಿಂದುಳಿದ ವರ್ಗಗಳ ಅಧಿಕಾರಿ ಬಾಬೂ, ಅರಣ್ಯಾಧಿಕಾರಿ ಶರಣಪ್ಪ ಕುಂಬಾರ, ಯಲ್ಲಪ್ಪ ಕಾಡ್ಲೂರ, ಅಮರೇಶ ಕುಂಬಾರ, ಮೆಕ್ಯಾನಿಕ್ ಸೇವಾ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಚವ್ಹಾಣ, ಡಾನ್ ಬಾಸ್ಕೋ ಸೇವಾ ಕೇಂದ್ರದ ಶರಣಪ್ಪ ಅಮರಾಪುರ, ಅಹ್ಮದ್ ಹುಸೇನ್ ಇತರರು ವೇದಿಕೆಯಲ್ಲಿದ್ದರು. ಲಕ್ಷ್ಮಣ ಬಿರಾದಾರ ಸ್ವಾಗತಿಸಿದರು. ಮಲ್ಲು ಭೋವಿ ನಿರೂಪಿಸಿ, ವಂದಿಸಿದರು.