ಸುರಪುರ: ನಗರದ ಬಾಲಕರ ಸರಕಾರಿ ಪ್ರೌಢಶಾಲೆಯಲ್ಲಿ ಮಧ್ಯಾಹ್ನ ಕಳಪೆ ಊಟ ಉಣ ಬಡಿಸಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಮಂಗಳವಾರ ಅಡುಗೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಅಕ್ಷರ ದಾಸೋಹ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ವಿದ್ಯಾರ್ಥಿಗಳು ಅವಾಚ್ಯವಾಗಿ ನಿಂದಿಸಿದ ಅಡುಗೆ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಈ ವೇಳೆ ಅಡುಗೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲ ಶಿಕ್ಷಕರು ಮಧ್ಯಸ್ಥಿಕೆ ವಹಿಸಿ ತಿಳಿ ಹೇಳಿ ಇನ್ಮೂಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಸಮಾಧಾನ ಮಾಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು ವಿದ್ಯಾರ್ಥಿಗಳಾದ ವಿಠ್ಠಲ, ಹುಲಿಮಾನಪ್ಪ ಮಾತನಾಡಿ, ಅಡುಗೆಯವರು ಅನ್ನ ಸಾಂಬಾರಗೆ ಸರಿಯಾಗಿ ಖಾರ, ಉಪ್ಪು ಹಾಕುವುದಿಲ್ಲ. ಸರಕಾರ ವಿತರಿಸುವ ತೊಗರಿ ಬೇಳೆ ಬಳಸದೆ ಬರೀ ನೀರು ಸಾಂಬಾರ್ ಮಾಡುತ್ತಾರೆ.
ಕಳಪೆ ಮಟ್ಟದ ಅಡುಗೆಯನ್ನೇ ಊಣ ಬಡಿಸುತಾರೆ. ಈ ಬಗ್ಗೆ ಕೇಳಿದರೆ ಅಡುಗೆ ಸಿಬ್ಬಂದಿ ಕೆಟ್ಟದಾಗಿ ವರ್ತಿಸಿ ನಮ್ಮನ್ನೆ ಗದರಿಸುತ್ತಾರೆ. ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಆರೋಪಿಸಿದರು. ಅಡುಗೆಗೆ ಎಣ್ಣೆ ಹಾಕುವುದೇ ಇಲ್ಲ. ಈ ಬಗ್ಗೆ ಶಾಲೆ ಪ್ರಧಾನ ಶಿಕ್ಷಕರು ಅಡುಗೆ ಸಿಬ್ಬಂದಿಗೆ ಅನೇಕ ಬಾರಿ ತಿಳಿ ಹೇಳಿದ್ದಾರೆ. ಆದರೂ ಅಡುಗೆ ಸಿಬ್ಬಂದಿ ಸುಧಾರಿಸಿಕೊಳ್ಳುತ್ತಿಲ್ಲ. ಯಾರೊಬ್ಬರಿಗೂ ಕಿಮ್ಮತ್ತು ನೀಡದೆ ಏಕ ಪಕ್ಷೀಯವಾಗಿ ನಡೆದುಕೊಳ್ಳುತ್ತಾರೆ. ಸರಕಾರ ವಿತರಿಸುವ ಯಾವ ಸಾಮಗ್ರಿಯನ್ನು ಸಿಹಿ ಊಟಕ್ಕೆ ಬಳಸುವುದಿಲ್ಲ. ಅವರು ನೀಡಿದ್ದನ್ನೆ ಊಣ್ಣಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಅನ್ನ ಸಾಂಬಾರ ಸರಿಯಾಗಿ ಬೇಯಿಸುವುದಿಲ್ಲ. ಅರೆ ಬರೆ ಬೆಂದಿರುವ ಅನ್ನವನ್ನೇ ಊಟಕ್ಕೆ ಬಡಿಸುತ್ತಾರೆ. ಚಿತ್ರಾನ್ನಕ್ಕೆ ಯಾವುದೇ ತರಕಾರಿ ಬಳಸುವುದಿಲ್ಲ. ಯಾವಾಗಲೋ ಒಮ್ಮೆ ಸೌತೇಕಾಯಿ ಹಾಕುತ್ತಾರೆ. ಅದು ಸರಿಯಾಗಿ ಕುದ್ದಿರುವುದಿಲ್ಲ. ಅಡುಗೆ ಸಿಬ್ಬಂದಿ ಸ್ಥಳೀಯರೆ ಆಗಿದ್ದಾರೆ. ಹೆಚ್ಚಿಗೆ ಏನಾದರು ಹೇಳಿದರೆ ರಾಜಕೀಯ ಪ್ರಭಾವ ಬಳಸಿ ಮಾತನಾಡುತ್ತಾರೆ ಅಥವಾ ಮಕ್ಕಳಿಂದ ದೌರ್ಜನ್ಯ ಮಾಡಿಸುತ್ತಾರೆ. ಈ ಬಗ್ಗೆ ಅಕ್ಷರ ದಾಸೋಹ ಯೋಜನೆ ನಿರ್ದೇಶಕ ಮೌನೇಶ ಕಂಬಾರ ಅವರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.
ಯಾವುದೇ ಕ್ರಮಕ್ಕೆ ತೆಗೆದುಕೊಂಡಿಲ್ಲ. ಅವರು ಸಹ ಪರೋಕ್ಷವಾಗಿ ಅಡುಗೆ ಸಿಬ್ಬಂದಿ ಪರವಾಗಿಯೇ ಸೊಪ್ಪು ಹಾಕುತ್ತಿದ್ದಾರೆ. ಹೀಗಾಗಿ ನಮಗೆ ಕಳಪೆ ಅಡುಗೆ ಊಟ ಮಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಾದ ಬಸವರಾಜ, ರವಿಚಂದ್ರ, ಮೌನೇಶ, ಬೋಜರಾಜ. ನಿಂಗಪ್ಪ ಗುರಪ್ಪ, ಮುತ್ತುರಾಜ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.