ಸುರಪುರ: ಬೆಳೆ ಸಮೀಕ್ಷೆ ಕಾರ್ಯದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಆಮೆಗತಿಯಲ್ಲಿ ಕೆಲಸ ಮಾಡುತ್ತಿರುವುದು ಸರಿಯಲ್ಲ. ನಿಮ್ಮ ನಿರ್ಲಕ್ಷ್ಯದಿಂದ ರೈತರು ತೊಂದರೆ ಎದುರಿಸಬೇಕಾಗುತ್ತದೆ. ಸರ್ವೆ ಕಾರ್ಯ ತ್ವರಿತವಾಗಿ ಮುಗಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಕಂದಾಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುರಪುರ, ಹುಣಸಗಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಇಷ್ಟೊಂದು ಕಾಲಾವಕಾಶ ನೀಡಿದ್ದರು ಕೂಡ ಬೆಳೆ ಸರ್ವೆ ಕಾರ್ಯದಲ್ಲಿ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರಿಂದ ಅನಗತ್ಯವಾಗಿ ವಿಳಂಬವಾಗುತ್ತಿದೆ. ಈ ಪ್ರವೃತ್ತಿ ಸರಿಯಲ್ಲ. ಈ ಕುರಿತು ತಹಶೀಲ್ದಾರರು ಜಾಗೃತಿ ವಹಿಸಬೇಕು. ತ್ವರಿತವಾಗಿ ಸರ್ವೆ ಕಾರ್ಯ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಶಿಸ್ತು ಕ್ರಮ ತೆಗದುಕೊಳ್ಳಬೇಕಾಗುತ್ತದೆ ಎಂದು ತಾಕೀತು ಮಾಡಿದರು.
ಫಸಲ ಬಿಮಾ, ಕ್ರಾಪ್ ಕಟಿಂಗ್ ಕುರಿತು ಗ್ರಾಮ ಲೆಕ್ಕಿಗರು ಜಿಪಿಆರ್‌ಎಸ್ ಮಾಡುವ ಮೂಲಕ ರೈತರ ವಿವರವಾದ ಮಾಹಿತಿ ಸಂಗ್ರಹಿಸಬೇಕು. ಅಂತ್ಯ ಸಂಸ್ಕಾರ, ರೈತ ಆತ್ಮಹತ್ಯೆ, ರಾಷ್ಟ್ರೀಯ ಭದ್ರತಾ ಕುಟುಂಬ ಯೋಜನೆ, ಕಡತಗಳು ಪೆಂಡಿಂಗ್ ಉಳಿಯಲು ಕಾರಣವೇನು? ಅನುದಾನ ಇದ್ದರು ಫಲಾನುಭವಿಗಳಿಗೆ ಯಾಕೆ ಸಂದಾಯ ಮಾಡುತ್ತಿಲ್ಲ. ಕಡತಗಳ ವಿಲೇವಾರಿ ಕೊರತೆಯಿಂದ ವಿಳಂಬ ಮಾಡಬೇಡಿ. ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.
ಆಯುಷ್ಮಾನ್ ಭಾರತ ಯೋಜನೆಯಡಿ ಇದುವರೆಗೆ ಎಷ್ಟು ಜನರಿಗೆ ಕಾರ್ಡ್ ವಿತರಿಸಲಾಗಿದೆ. ಪಿಡಿಒಗಳೊಂದಿಗೆ ಗ್ರಾಮ ಲೆಕ್ಕಿಗರು ಸಹಕಾರ ನೀಡಿ ಗ್ರಾಮಗಳಲ್ಲಿ ಡಂಗೂರ ಹಾಕಿಸಲು ಸೂಚಿಸಲಾಗಿತ್ತು. ಯಾಕೆ ಡಂಗೂರ ಹಾಕಿಸಿಲ್ಲ ಎಂದು ಗ್ರಾಮ ಲೆಕ್ಕಿಗರನ್ನು ತರಾಟೆಗೆ ತೆಗೆದುಕೊಂಡರು. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಯೋಜನೆ ಲಾಭ ಮನೆ ಮನೆಗೆ ಮುಟ್ಟಿಸಲು ಪಿಡಿಒ, ಆಹಾರ ಇಲಾಖೆ ಸಿಬ್ಬಂದಿ, ನ್ಯಾಯಬೆಲೆ ಅಂಗಡಿ ಮಾಲೀಕರು ಎಲ್ಲರು ಸೇರಿ ಯೋಜನೆ ಯಶಸ್ವಿಗೊಳಿಸಲು ಶ್ರಮಿಸಬೇಕು ಎಂದು ಸೂಚಿಸಿದರು.
ಸರಕಾರ ಪ್ರಧಾನಮಂತ್ರಿ ಉಜ್ವಲ್ ಗ್ಯಾಸ್ ಯೋಜನೆಯಡಿ ತಾಲೂಕಿಗೆ 5 ನೂರು ಟಾರ್ಗೆಟ್ ನೀಡಿದೆ. ಇದೂ ಪೂರ್ಣವಾಗಿಲ್ಲ. ಏನು ಸಮಸ್ಯೆ ಎಂದು ಆಹಾರ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಆಹಾರ ಇಲಾಖೆ ನಿರೀಕ್ಷಕರಿಗೆ ಸೂಚಿಸಿದರು.
ಜಾತಿ, ಆದಾಯ ಪ್ರಮಾಣ ಪತ್ರ, ಜಮೀನು, ಪ್ರಧಾನಮಂತ್ರಿ ಉಜ್ವಲ್ ಯೋಜನೆ ಸೇರಿದಂತೆ ಬಿಪಿಎಲ್ ಕುಂಟುಂಬಸ್ಥರ ಸಮಗ್ರ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿತ್ತು. ಆದರೆ ಕೆಲ ಗಾಮ ಲೆಕ್ಕಿಗರು ಇದನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಶೇ. 17ರಷ್ಟು ಸಾಧನೆ ಮಾಡಿರುವುದು ಅತ್ಯಂತ ಕಳಪೆಯಾಗಿದೆ. ವಾರದಲ್ಲಿ ಇದನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ತಾಲೂಕಿನಲ್ಲಿ ಸಂಧ್ಯಾ ಸುರಕ್ಷಾ, ವಿಧವಾ ನಿರ್ಗತಿಕ, ಅಂಗವಿಕಲ ಸೇರಿದಂತೆ ವಿವಿಧ ಮಾಸಾಶಸನಗಳ ಫಲಾನುಭವಿಗಳ ಆಧಾರ್, ಬ್ಯಾಂಕ್ ಖಾತೆ ಸಂಗ್ರಹ ಕಾರ್ಯ ಆದಷ್ಟು ಬೇಗ ಪೂರ್ಣಗೊಳಿಸಬೇಕು. ಈಗಾಗಲೇ ಮಾಹಿತಿ ನೀಡಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯ ಮಾಡಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಸುರಪುರ ತಹಶೀಲ್ದಾರ್ ನಿಂಗಪ್ಪ ಬಿರಾದಾರ, ಹುಣಸಗಿ ತಹಶೀಲ್ದಾರ್ ವಿನಯಕುಮಾರ ಪಾಟೀಲ. ಗ್ರೇಡ್ 2 ತಹಶೀಲ್ದಾರ್ ಸೋಫ್ತಿಯಾ ಸುಲ್ತಾನ್, ಸುರೇಶ ಚಾವಲ್ಕರ್ ಇದ್ದರು.