ಸೂರಜ್ ಗೌಡ ಅಭಿನಯದ “ನಿನ್ನ ಸನಿಹಕೆ’ ಚಿತ್ರ ಇನ್ನೇನು ಒಂದು ಸಾಂಗ್ ಮತ್ತು ಒಂದು ಫೈಟ್ ಚಿತ್ರೀಕರಿಸಿದರೆ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಈಗ ಈ ಚಿತ್ರದ ಅಪ್‌ಡೇಟ್ ಏನೆಂದರೆ, ಸೂರಜ್‌ಗೌಡ ನಟನೆ ಜೊತೆಯಲ್ಲಿ ಇದೇ ಮೊದಲ ಸಲ ನಿರ್ದೇಶನಕ್ಕೂ ಇಳಿದಿದ್ದಾರೆ.
ಹೌದು, ಚಿತ್ರದಲ್ಲೊಂದು ಬದಲಾವಣೆ ಅಂದರೆ, ಸೂರಜ್ ಗೌಡ ನಿರ್ದೇಶಕರಾಗಿರೋದು. ಹಾಗಂತ, ನಿರ್ದೇಶನ ಮಾಡಲೇಬೇಕು ಅಂತ ಮಾಡಿದ್ದಲ್ಲ. ಆಕಸ್ಮಿಕ ಎಂಬಂತೆ ಅವರ ಪಾಲಿಗೆ ನಿರ್ದೇಶನದ ಜವಾಬ್ದಾರಿ ಬಂದಿದೆ. ಹಾಗಾದರೆ, ಸೂರಜ್‌ಗೌಡ ಹೀಗೆ ದಿಢೀರನೆ ನಿರ್ದೇಶಕರಾಗಲು ಕಾರಣವಿಷ್ಟೇ.
ಸುಮನ್ ಜಾದುಗಾರ್ ಅವರು “ನಿನ್ನ ಸನಿಹಕೆ’ ಚಿತ್ರ ನಿರ್ದೇಶಕರು. ಮೂರು ದಿನಗಳ ಕಾಲ ಅವರು ನಿರ್ದೇಶನವನ್ನೂ ಮಾಡಿದ್ದರು. ಆದರೆ, ಬೈಕ್ ಅಪಘಾತದಿಂದಾಗಿ ಅವರು ಕೈಗೆ ಪೆಟ್ಟು ತಿಂದು ವಿಶ್ರಾಂತಿ ಪಡೆಯಬೇಕಾಯಿತು. ಆದರೆ, ಚಿತ್ರಕ್ಕೆ ಎಲ್ಲಾ ತಯಾರುನಡೆದಿದ್ದರಿಂದ, ಅದನ್ನು ಸೂರಜ್‌ಗೌಡ ಅವರು ಮುಂದುವರೆಸಬೇಕು ಎಂಬ ಸೂಚನೆ ನಿರ್ಮಾಪಕರಿಂದ ಸಿಕ್ಕಿತು. ಸೂರಜ್‌ಗೌಡ ಅವರ ಕಥೆ ಆಗಿದ್ದರಿಂದ, ಅವರೂ ಸ್ಕ್ರಿಪ್ಟ್ನಲ್ಲಿ ತೊಡಗಿದ್ದರಿಂದ ಚಿತ್ರದ ಪ್ರತಿಯೊಂದು ಸೀನ್ ಬಗ್ಗೆಯೂ ಗೊತ್ತಿತ್ತು. ಕೊನೆಗೆ, ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಸೂರಜ್‌ಗೌಡ ಅವರೇ ಆ್ಯಕ್ಷನ್-ಕಟ್ ಹೇಳ್ಳೋಕೆ ಮುಂದಾದರು. ಹದಿನೈದು ದಿನಗಳ ಬಳಿಕ ನಿರ್ದೇಶಕ ಸುಮನ್ ಜಾದುಗಾರ್ ಬಂದು ಚಿತ್ರದ ಔಟ್‌ಪುಟ್ ನೋಡಿದಾಗ, ಖುಷಿಪಟ್ಟು, ಇದನ್ನು ಸೂರಜ್‌ಗೌಡ ಅವರೇ ಮುಂದುವರೆಸಲಿ, ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ ಅಂತ ಪ್ರೋತ್ಸಾಹಿಸಿದ್ದಾರೆ. ಹಾಗಾಗಿ, ಸೂರಜ್‌ಗೌಡ ಅವರೇ ಚಿತ್ರವನ್ನು ನಿರ್ದೇಶಿಸುವಂತಾಗಿದೆ. ನಿರ್ದೇಶನ ಕುರಿತು ಹೇಳುವ ಸೂರಜ್‌ಗೌಡ, “ಮೊದಲ ಸಲ ನಿರ್ದೇಶನ ಮಾಡಿದ್ದೇನೆ. ಹಾಗಂತ ಯಾವುದೇ ಯೋಚನೆ ಇರಲಿಲ್ಲ. ಸಿನಿಮಾ ಬಗ್ಗೆ ತಿಳಿದಿತ್ತು. ಫಿಲ್ಮ್ ಮೇಕಿಂಗ್ ಹೇಗೆ ಅನ್ನುವುದು ಗೊತ್ತಿತ್ತು. ಸ್ಕ್ರಿಪ್ಟ್ ನನ್ನದೇ ಆಗಿದ್ದರಿಂದ ಅನಿವಾರ್ಯವಾಗಿ ಆ್ಯಕ್ಷನ್-ಕಟ್ ಹೇಳಬೇಕಾಯಿತು. ಕೆಲಸ ಸಾರ್ಥಕ ಎನಿಸಿದೆ. ಎಲ್ಲರಿಗೂ ಚಿತ್ರದ ಮೇಲೆ ನಂಬಿಕೆಯೂ ಬಂದಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ. ಧನ್ಯಾ ರಾಮ್‌ಕುಮಾರ್ ಅವರು ತುಂಬಾನೇ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾ ನೋಡಿದವರು ಅವರ ಮೊದಲ ಚಿತ್ರವಿದು ಎಂದು ಹೇಳುವುದಿಲ್ಲ. ಅವರಿಗಿಲ್ಲಿ ನಟನೆಗೆ ಸಾಕಷ್ಟು ಸ್ಕೋಪ್ ಇದೆ. ಕಷ್ಟಪಟ್ಟು ಎನ್ನುವುದಕ್ಕಿಂತ ಇಷ್ಟಪಟ್ಟು ಚಿತ್ರ ಮಾಡಿದ್ದೇವೆ. ಒಳ್ಳೆಯ ಟೀಮ್ ಜೊತೆಗಿತ್ತು. ಹಾಗಾಗಿ ಎಲ್ಲೂ ಸಮಸ್ಯೆ ಆಗಿಲ್ಲ’ ಎನ್ನುವ ಸೂರಜ್ ಗೌಡ, ಏಪ್ರಿಲ್ 24ರಂದು ಡಾ.ರಾಜಕುಮಾರ್ ಅವರ ಹುಟ್ಟುಹಬ್ಬಕ್ಕೆ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ಆ ಬಗ್ಗೆ ಚರ್ಚೆ ನಡೆಯುತ್ತಿದೆ’ ಎನ್ನುತ್ತಾರೆ.