ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಉದ್ಘಾಟನೆ ಮತ್ತು ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಲ್ಲಿನ ವಿದ್ಯಾರ್ಥಿನಿಯರು ಪ್ರದರ್ಶಿಸಿದ ಸುರ ಪಾರಿಜಾತ ಯಕ್ಷಗಾನ ಕಲಾಸಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಸುಜಯೀಂದ್ರ ಹಂದೆಯವರ ನಿರ್ದೇಶನದಲ್ಲಿ ಮೂಡಿಬಂದ ಈ ಯಕ್ಷ ಪ್ರದರ್ಶನ ವಿದ್ಯಾರ್ಥಿಗಳಲ್ಲಿನ ರಂಗ ಪ್ರತಿಭೆಯನ್ನು ಹೊರಹೊಮ್ಮಿಸುವಲ್ಲಿ ಸಹಾಯವಾಯಿತು.
ಇಂದ್ರನ ಸುರಲೋಕದ ಮೇಲೆ ದಾಳಿ ಮಾಡಿ ಅಲ್ಲಿನ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲು ಭೌಮಾಸುರನ ನೇತೃತ್ವದಲ್ಲಿ ರಾಕ್ಷಸರು ನಿಶ್ಚಯಿಸಿ ದೇವಲೋಕದ ಮೇಲೆ ದಾಳಿಯಿಡುತ್ತಾರೆ. ಅಂತಿಮವಾಗಿ ದೇವೇಂದ್ರ ಮತ್ತು ದೇವತೆಗಳು ಕೃಷ್ಣನ ಮೊರೆ ಹೋಗಿ ರಕ್ಷಿಸಲು ಬೇಡಿಕೊಳ್ಳುತ್ತಾರೆ. ಹಾಗೆ ಯುದ್ಧಕ್ಕೆ ಹೊರಟು ನಿಂತ ಕೃಷ್ಣನ ಬಳಿ ಸತ್ಯಭಾಮೆ ತಾನೂ ಬರುವುದಾಗಿ ಹೇಳುತ್ತಾಳೆ. ಕೃಷ್ಣ ಜೊತೆಯಲ್ಲಿ ಅವಳನ್ನು ಕರೆದೊಯ್ಯುತ್ತಾನೆ. ಯುದ್ಧದಲ್ಲಿ ನರಕಾಸುರ ಮೋಕ್ಷ ಹೊಂದುತ್ತಾನೆ. ಮರಳಿ ಬರುವಾಗ ದೇವಲೋಕದ ಪಾರಿಜಾತ ಗಿಡವನ್ನು ಸತ್ಯಭಾಮೆ ನೆನಪಿಗಾಗಿ ಕೃಷ್ಣನ ನಿರಾಕರಣೆಯ ನಡುವೆಯೂ ಭೂಲೋಕಕ್ಕೆ ತರಲು ಇಚ್ಚಿಸುತ್ತಾಳೆ. ದೇವೇಂದ್ರ ಅದನ್ನು ತಡೆದಾಗ ಅವನೊಂದಿಗೆ ಸತ್ಯಭಾಮೆ ಯುದ್ಧಕ್ಕೆ ನಿಲ್ಲುತ್ತಾಳೆ. ಅಂತಿಮವಾಗಿ ಕೃಷ್ಣನ ಅಣತಿಯಂತೆ ದ್ವಾಪರ ಯುಗದ ಅಂತ್ಯದವರೆಗೆ ಸುರ ಪಾರಿಜಾತವನ್ನು ಭೂಮಿಗೆ ಕೊಂಡೊಯ್ಯುವಲ್ಲಿಗೆ ಕತೆಗೆ ತೆರೆ ಬೀಳುತ್ತದೆ.
ದೇವೇಂದ್ರನಾಗಿ ಕುಂಕುಮ್‌ರ ಸಾತ್ವಿಕ ಅಭಿನಯ, ಭೌಮಾಸುರನಾಗಿ ವೈಷ್ಣವಿಯ ಹಾವಭಾವ ಮೆಚ್ಚುಗೆ ಗಳಿಸಿತು. ಕೃಷ್ಣನಾಗಿ ಅಭಿನಯಿಸಿದ್ದ ಶ್ರೀನಿಧಿ ಮತ್ತು ಸತ್ಯಭಾಮೆಯಾಗಿ ಅಭಿನಯಿಸಿದ್ದ ಭುವನ ಕಾರಂತ ಆಕರ್ಷಕ ಪ್ರದರ್ಶನದಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಉಳಿದಂತೆ ಅಗ್ನಿಯಾಗಿ ಶ್ರೀಲತಾ, ವಾಯುವಾಗಿ ಶ್ರೀರಕ್ಷಾ, ವರುಣನಾಗಿ ಹರ್ಷಿತಾ, ನಿರುಥಿಯಾಗಿ ಕವಿತಾ, ಯಮನಾಗಿ ಸುಖೀತಾ, ಕುಬೇರನಾಗಿ ನಿಶಾ, ಚಂಡಾಸುರನಾಗಿ ಶೈಲಾ, ಶಂಖಾಸುರನಾಗಿ ದೀಕ್ಷಿತಾ, ಶರಭಾಸುರನಾಗಿ ರಶ್ಮಿತಾ, ಚಕ್ಸೂರಾಸುರನಾಗಿ ಕೀರ್ತಿ, ಪೀಠಾಸುರನಾಗಿ ಮೋನಿಷಾ, ಮೂಷಿಕಾಸುರನಾಗಿ ಗೌತಮಿ, ಮುರಾಸುರನಾಗಿ ವಿಜಯಲಕ್ಷೀ ಅಭಿನಯಿಸಿದರು.
ಕೃಷ್ಣ – ಸತ್ಯಭಾಮೆಯರ ಸಂವಾದಕ್ಕೆ ಸಾಮಾನ್ಯ ಕುಟುಂಬಗಳಲ್ಲಿ ನಡೆಯುವ ರಮ್ಯ ವಿಚಾರದ ಮಾತುಕತೆಯನ್ನು ಬಳಸಿದ್ದು ಮಂದಹಾಸ ಮೂಡಿಸಿತು. ಭಾಗವತಿಕೆಯಲ್ಲಿ ಸುಜಯೀಂದ್ರ ಹಂದೆ, ಚಂಡೆಯಲ್ಲಿ ಶಿವಾನಂದ ಕೋಟ ಮತ್ತು ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ ಸಹಕರಿಸಿದರು. ಒಂದೂವರೆ ಗಂಟೆಯ ಈ ಪ್ರದರ್ಶನದಲ್ಲಿ ಮಕ್ಕಳ ಉತ್ಸಾಹ ಇಡೀ ಯಕ್ಷಗಾನವನ್ನು ನೋಡಿಸಿಕೊಂಡು ಹೋಗುವಂತೆ ಮಾಡಿತ್ತು. ಹದಿನೇಳು ವಿದ್ಯಾರ್ಥಿನಿಯರೇ ಈ ಬಾರಿ ಭಾಗವಹಿಸಿದ್ದು ವಿಶೇಷವಾಗಿತ್ತು.
– ನರೇಂದ್ರ ಎಸ್. ಗಂಗೊಳ್ಳಿ