ರಾಯಚೂರು: ರಾಜೀನಾಮೆ ನೀಡಿದ 15 ಶಾಸಕರನ್ನು ಅನರ್ಹಗೊಳಿಸಿದ ಸುಪ್ರೀಂ ಕೋರ್ಟ್ ನಿರ್ಧಾರ ಸ್ವಾಗತಾರ್ಹ. ಸರ್ಕಾರ ಬೀಳಿಸಬೇಕು ಎಂಬ ದುರುದ್ದೇಶದಿಂದ ಈ ಕೃತ್ಯ ಎಸಗಿದ ಅವರಿಗೆ ತಕ್ಕ ಪಾಠವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಟೀಕಿಸಿದರು.
ನಗರದ ವಿಐಪಿ ಅತಿಥಿ ಗೃಹದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೀರ್ಪನ್ನು ಸಂಪೂರ್ಣವಾಗಿ ಓದಿಲ್ಲ. ಆದರೆ, ಮೆಲ್ನೋಟಕ್ಕೆ ಕಂಡು ಬಂದ ಅಂಶದ ಪ್ರಕಾರ ಸುಪ್ರೀಂ ಕೋರ್ಟ್ ಆದೇಶ ಸ್ವಾಗತಿಸುತ್ತೇನೆ. ಅತೃಪ್ತ ಶಾಸಕರು ಅನರ್ಹರು ಎಂಬ ಸ್ಪೀಕರ್ ಆದೇಶಕ್ಕೆ ನ್ಯಾಯಾಲಯ ಮನ್ನಣೆ ನೀಡಿದೆ ಎಂದರು.
ನ್ಯಾಯಾಲಯ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಅವರು ಸ್ಪರ್ಧಿಸಲಿ. ರಾಜ್ಯದ ಮತದಾರರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಅನರ್ಹ ಶಾಸಕರಿಗೂ ನಮಗೂ ಸಂಬಂಧವಿಲ್ಲ ಎನ್ನುತ್ತಿದ್ದ ಬಿಜೆಪಿ ನಾಯಕರಿಗೆ ನೈತಿಕತೆ ಇದ್ದರೆ ಅನರ್ಹರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು. ಟಿಕೆಟ್ ನೀಡಿದರೆ ಸಂವಿಧಾನ ಬಾಹಿರ ಕೃತ್ಯ ಎಸಗಿದಂತಾಗುತ್ತದೆ. ಅಮಿತ್ ಶಾ, ಬಿಎಸ್ ವೈ ಆಪರೇಶನ್ ಮಾಡಿಸಿದಂತಾಗುತ್ತದೆ ಎಂದರು.
ದೇಶದಲ್ಲಿ ಪಕ್ಷಾಂತರ ಕಾಯ್ದೆ ಸುಧಾರಣೆಯಾಗಬೇಕು. ಇದು ಎಲ್ಲ ಪಕ್ಷಗಳಿಗೂ ಪಾಠವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದೇ ಕಾನೂನು ಬಾಹಿರವಾಗಿ. ಅದನ್ನು ವಜಾಗೊಳಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು. ಇಂಥ ಅನೈತಿಕ ಸರ್ಕಾರದ ಹೊಣೆ ಹೊತ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಲಿ ಎಂದು ತಾಕೀತು ಮಾಡಿದರು. ಅನರ್ಹರಾಗಲಿ, ಅವರ ಕುಟುಂಬದವರಾಗಲಿ ಪಕ್ಷಕ್ಕೆ ಹಿಂದುರಿಗಿದರೆ ಸೇರಿಸಿಕೊಳ್ಳುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನೂ ಅತ್ತ ಮಸ್ಕಿಯಲ್ಲಿ ಅನರ್ಹ ಶಾಸಕರಿಗೆ ಮರುಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಪ್ರತಾಪಗೌಡ ಪಾಟೀಲ ಬೆಂಬಲಿಗರಿಂದ ಮಸ್ಕಿಯ ಭ್ರಮಾರಂಭ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.