Advertisement

Supreme Court ಸರಕಾರಗಳ ಹೊಣೆಗಾರಿಕೆ ನೆನಪಿಸಿದ ಸುಪ್ರೀಂ ತೀರ್ಪು

01:17 AM Aug 03, 2024 | Team Udayavani |

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರಗಳಿಗೆ ಅಧಿಕಾರವಿದೆ ಎನ್ನುವ ಮಹತ್ತರ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ, ಈ ವಿಷಯವಾಗಿ ಕಳೆದ ಹಲವು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಣ ಹಗ್ಗಜಗ್ಗಾಟಕ್ಕೆ ತೆರೆ ಎಳೆದಿದೆ. ಇದೇ ವೇಳೆ ಈ ಐತಿಹಾಸಿಕ ತೀರ್ಪಿನ ಸಂದರ್ಭದಲ್ಲಿ ನ್ಯಾಯಪೀಠ ಕೆಲವು ಮಹತ್ವದ ವಿಷಯಗಳನ್ನು ಪ್ರಸ್ತಾವಿಸಿದ್ದು, ಮೀಸಲಾತಿಯ ಸೌಲಭ್ಯ ನೈಜ ಮತ್ತು ಆರ್ಹ ಫ‌ಲಾನುಭವಿಗಳಿಗಷ್ಟೇ ಲಭ್ಯವಾಗುವುದನ್ನು ಖಾತರಿಪಡಿಸುವ ಹೊಣೆಗಾರಿಕೆ ರಾಜ್ಯ ಸರಕಾರಗಳದ್ದಾಗಿದೆ ಎಂದೂ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.

Advertisement

ಎಸ್‌ಸಿ, ಎಸ್‌ಟಿ ಮೀಸಲಾತಿಯಲ್ಲಿ ಒಳ ಮೀಸಲಾತಿ ನೀಡುವ ಸಂಬಂಧ ಪರ-ವಿರೋಧ ಚರ್ಚೆಗಳು, ಕಾನೂನು ಹೋರಾಟಗಳು ಕಳೆದ ಹಲವು ವರ್ಷಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಲೇ ಬಂದಿವೆ. ಈ ವಿಷಯ­ವಾಗಿ ಸುಪ್ರೀಂ ಕೋರ್ಟ್‌ನ ಏಳು ಸದಸ್ಯರ ಸಾಂವಿಧಾನಿಕ ಪೀಠ ಸುದೀರ್ಘ‌ ವಿಚಾರಣೆ ನಡೆಸಿ ಹಾಲಿ ಜಾರಿಯಲ್ಲಿರುವ ಎಸ್‌ಸಿ, ಎಸ್‌ಟಿ ಮೀಸಲಾತಿ­ಯಲ್ಲಿ ಒಳ ಮೀಸಲಾತಿ ನೀಡಲು ರಾಜ್ಯ ಸರಕಾರಗಳಿಗೆ ಅಧಿಕಾರವಿದೆ ಎಂದು ಗುರುವಾರ 6:1ರ ಬಹುಮತದ ತೀರ್ಪು ನೀಡಿತ್ತು. ಈ ತೀರ್ಪಿನ ಕುರಿತಂತೆ ವಿವಿಧ ರಾಜಕೀಯ ಪಕ್ಷಗಳಿಂದ ಸಾರ್ವತ್ರಿಕ ಶ್ಲಾಘನೆ ವ್ಯಕ್ತವಾಗಿದೆ. ಆದರೆ ಇಲ್ಲಿ ಗಮನಾರ್ಹ ಅಂಶವೆಂ­ದರೆ ಈ ತೀರ್ಪು ನೀಡುವ ವೇಳೆ ಮೀಸಲಾತಿ ವಿಷಯದಲ್ಲಿ ರಾಜ್ಯ ಸರಕಾರ­ಗಳ ಹೊಣೆಗಾರಿಕೆ, ಕಾರ್ಯವ್ಯಾಪ್ತಿ, ಮೀಸಲಾತಿ ನೀತಿ ನಿರೂಪಣೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳ ಕುರಿತಂತೆ ನ್ಯಾಯಪೀಠ­ದಲ್ಲಿನ ನ್ಯಾಯಾಧೀಶರು ಸ್ಪಷ್ಟವಾಗಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿರುವುದು.

ಎಸ್‌ಸಿ, ಎಸ್‌ಟಿ ಮೀಸಲಾತಿ ದಶಕಗಳಿಂದ ಜಾರಿಯಲ್ಲಿದ್ದರೂ ಈ ಜಾತಿ, ಪಂಗಡದೊಳಗಿನ ಹಲವು ಜಾತಿಗಳು ಇನ್ನೂ ತುಳಿತಕ್ಕೊಳಗಾಗಿರುವುದು ಮಾತ್ರವಲ್ಲದೆ ಮೀಸಲಾತಿಯ ಕನಿಷ್ಠ ಸೌಲಭ್ಯವೂ ಈ ಜಾತಿ, ಸಮುದಾಯಗಳಿಗೆ ಲಭಿಸದಿರುವ ಬಗೆಗೆ ಮತ್ತು ಎಸ್‌ಸಿ, ಎಸ್‌ಟಿ ಯವರಾಗಿದ್ದರೂ ಸಾಮಾಜಿಕ ಮತ್ತು ಆರ್ಥಿಕವಾಗಿ ಮುಂದುವರಿದಿರುವವರು ಇಂದಿಗೂ ಈ ಮೀಸಲಾತಿಯ ಸೌಲಭ್ಯದ ಪ್ರಯೋಜನ ಪಡೆಯುತ್ತಿರುವುದರ ಬಗೆಗೆ ನ್ಯಾಯಾಧೀಶರು ರಾಜ್ಯ ಸರಕಾರಗಳ ಗಮನ ಸೆಳೆದಿದ್ದಾರೆ. ಒಳ ಮೀಸಲಾತಿ ಕಲ್ಪಿಸುವ ವೇಳೆ ಈ ವಿಷಯಗಳ ಕುರಿತಂತೆ ಸಮರ್ಪಕ ಅಧ್ಯಯನ ಅಥವಾ ಸಮೀಕ್ಷೆ ಕೈಗೊಂಡು ಸಂಬಂಧಿತ ಜಾತಿ, ಸಮುದಾಯಗಳ ಅರ್ಹರು ಮೀಸಲಾತಿಯಿಂದ ಹೊರಗುಳಿಯದಂತೆ ಮತ್ತು ಜಾತಿ, ಸಮುದಾಯದ ಹೆಸರಿನಲ್ಲಿ ಮುಂದುವರಿದವರೂ ಸೌಲಭ್ಯ ಪಡೆದುಕೊಳ್ಳದಂತೆ ನೋಡಿಕೊಳ್ಳುವುದು ರಾಜ್ಯ ಸರಕಾರಗಳ ಜವಾಬ್ದಾರಿಯಾಗಿದೆ ಎಂದು ಹೇಳಿರುವುದು ಎಸ್‌ಸಿ, ಎಸ್‌ಟಿ ಮೀಸಲಾತಿ ವಿಷಯದಲ್ಲಿ ರಾದ್ಧಾಂತ ಸೃಷ್ಟಿಸುತ್ತಿರುವ ಎಲ್ಲ ಸಮುದಾಯ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳನ್ನು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ.

ಇದಕ್ಕಿಂತಲೂ ಮುಖ್ಯವಾಗಿ ಮೀಸಲಾತಿ ಒಂದೇ ಪೀಳಿಗೆಗೆ ಸೀಮಿತಗೊಳ್ಳಬೇಕು. ಮೀಸಲಾತಿಯ ಸೌಲಭ್ಯದಿಂದ ಉನ್ನತ ಸ್ಥಾನಮಾನ ಪಡೆದು ಅಧಿಕಾರ, ಸಂಪತ್ತು ಗಳಿಸಿದ ಕುಟುಂಬದವರು ಮತ್ತೆಮತ್ತೆ ಮೀಸಲಾತಿಯ ಪ್ರಯೋಜನ ಪಡೆಯದಂತೆ ನೋಡಿಕೊಳ್ಳಬೇಕು. ಇದನ್ನು ಖಚಿತಪಡಿಸಿಕೊಳ್ಳಲು ನಿರ್ದಿಷ್ಟ ಅವಧಿಗೊಮ್ಮೆ ಪರಿಶೀಲನೆ ನಡೆಸಿ ಅರ್ಹರಿಗೆ ಮಾತ್ರವೇ ಮೀಸಲಾತಿ ಸೌಲಭ್ಯ ಲಭಿಸುವಂತೆ ಮಾಡಬೇಕು ಎಂದು ರಾಜ್ಯ ಸರಕಾರಗಳಿಗೆ ನ್ಯಾಯಾಧೀಶರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನ್ಯಾಯಾಧೀಶರ ಈ ಅಭಿಪ್ರಾಯ, ಸೂಚನೆಗಳು ದೇಶದ ನೈಜ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿವೆ. ಸದ್ಯ ದೇಶದಲ್ಲಿ ಜಾರಿಯಲ್ಲಿರುವ ಇಡೀ ಮೀಸಲಾತಿ ವ್ಯವಸ್ಥೆಯ ಮರು ರೂಪಣೆಗೆ ಕಾಲ ಪಕ್ವವಾಗಿದೆ ಎಂಬ ಪರೋಕ್ಷ ಸಂದೇಶವನ್ನು ಸುಪ್ರೀಂ ಕೋರ್ಟ್‌ ನ್ಯಾಯಪೀಠ ತನ್ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ರವಾನಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next