Advertisement

ಆಧಾರ್‌ಗೆ ಸಂವಿಧಾನದ ರಕ್ಷೆ

06:00 AM Sep 27, 2018 | Team Udayavani |

ಹೊಸದಿಲ್ಲಿ: ಕೆಲವು ಷರತ್ತುಗಳನ್ನೊಳಗೊಂಡಂತೆ “ಆಧಾರ್‌’ಗೆ ನೀಡಲಾಗಿದ್ದ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌, ಈ ಬಗ್ಗೆ ಹಲವಾರು ದಿನಗಳಿಂದ ಎದ್ದಿದ್ದ ಗೊಂದಲಗಳು ಹಾಗೂ ಚರ್ಚೆಗಳಿಗೆ ತೆರೆ ಎಳೆದಿದೆ. ಶ್ರೇಷ್ಠ ಎನಿಸುವುದಕ್ಕಿಂತಲೂ “ವಿಶಿಷ್ಟ’ ಎನಿಸುವುದು ಉತ್ತಮ ಎಂದೂ ಪೀಠ ಅಭಿಪ್ರಾಯಪಟ್ಟಿದೆ.

Advertisement

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾ| ದೀಪಕ್‌ ಮಿಶ್ರಾ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠ 4:1 ಬಹುಮತದ ಆಧಾರದಲ್ಲಿ ಆಧಾರ್‌ ಕಾರ್ಡ್‌ಗೆ ನೀಡಲಾಗಿರುವ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿಯುವ ಐತಿಹಾಸಿಕ ತೀರ್ಪು ನೀಡಿದೆ. ಜತೆಗೆ ಆಧಾರ್‌ ಸಂಖ್ಯೆಯ ಬಳಕೆ ಎಲ್ಲಿ ಬೇಕು, ಎಲ್ಲಿ ಬೇಡ ಎಂಬ ವಿಚಾರಗಳನ್ನು ಸ್ಪಷ್ಟವಾಗಿ ವರ್ಗೀಕರಿಸಲಾಗಿದೆ. ಅಲ್ಲದೆ ಈ ಆಧಾರ್‌ ಕಾಯ್ದೆಯನ್ನು ಹಣಕಾಸು ಮಸೂದೆ ರೂಪದಲ್ಲಿ ಮಂಡಿಸಿ ಅನುಮೋದನೆ ಪಡೆದಿರುವ ಕೇಂದ್ರ ಸರಕಾರದ ಕ್ರಮದಲ್ಲೂ ತಪ್ಪೇನಿಲ್ಲ ಎಂದು ಹೇಳಿದೆ. 

ರಾಜ್ಯದ ನಿವೃತ್ತ ನ್ಯಾಯಮೂರ್ತಿ ಕೆ.ಎಸ್‌.ಪುಟ್ಟಸ್ವಾಮಿ ಸಹಿತ ಒಟ್ಟು 27 ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇತ್ಯರ್ಥ ಮಾಡಿದೆ. ಈ ಮಧ್ಯೆ ಹಣಕಾಸು ಕಾಯ್ದೆಯಾಗಿ ಅನುಮೋದನೆ ಪಡೆದ ಕೇಂದ್ರ ಸರಕಾರದ ಕ್ರಮಕ್ಕೆ ಪೀಠದಲ್ಲಿದ್ದ ನ್ಯಾ| ಚಂದ್ರಚೂಡ್‌ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನೇ ಎತ್ತಿಕೊಂಡು ಏಳು ಮಂದಿ ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಮುಂದೆ ಹೋಗಲು ಕಾಂಗ್ರೆಸ್‌ ನಿರ್ಧರಿಸಿದೆ. 

ತೀರ್ಪಿನಂತೆ ಎಲ್ಲ ಸರಕಾರಿ ಯೋಜನೆಗಳಿಗೆ, ಸವಲತ್ತುಗಳಿಗೆ, ಸಹಾಯ ಧನಗಳಿಗೆ, ಆದಾಯ ತೆರಿಗೆ ಸಲ್ಲಿಕೆಯಂಥ ಸರಕಾರಿ ಸೇವೆಗಳಿಗೆ ಆಧಾರ್‌ ಕಾರ್ಡ್‌ ಸಂಖ್ಯೆ ಕಡ್ಡಾಯವಾಗಲಿದೆ. ನೀಟ್‌, ಸಿಬಿಎಸ್‌ಇ, ಯುಜಿಸಿ ವತಿಯಿಂದ ನಡೆಸಲಾಗುವ ಪರೀಕ್ಷೆಗಳಿಗೆ ಆಧಾರ್‌ ಬೇಕಿಲ್ಲ. ಆದರೆ ಅಕ್ರಮ ವಲಸಿಗರಿಗೆ ಆಧಾರ್‌ ಕಾರ್ಡ್‌ ಕೊಡಬಾರದೆಂದು ಎಂದು ನ್ಯಾಯಪೀಠ ತಿಳಿಸಿದೆ. 

ಡಿಜಿಟಲ್‌ ಆರ್ಥಿಕತೆಯ ಸಂಕೇತ “ಆಧಾರ್‌’
“ಆಧಾರ್‌ ಎಂಬುದು ಈಗ ಮನೆಮಾತಾಗಿದೆ. ಅದರ ಉಪಯೋಗ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಹಾಗಾಗಿ ಆಧಾರ್‌ ಎಂಬ ಪದ ಈಗ ಕೇವಲ ನಿಘಂಟುವಿನ ಅರ್ಥವಾಗಿ ಉಳಿದಿಲ್ಲ. ಬದಲಿಗೆ ಪ್ರತಿ ವ್ಯಕ್ತಿಗೆ ಡಿಜಿಟಲ್‌ ಆರ್ಥಿಕತೆಯ ಸಂಕೇತವಾಗಿ ಪರಿಗಣಿಸಲ್ಪಟ್ಟಿದೆ’ ಎಂದು ಕೋರ್ಟ್‌ ಆಧಾರ್‌ ಕಾರ್ಡ್‌ ಯೋಜನೆಯನ್ನು ಹಾಡಿಹೊಗಳಿದೆ.

Advertisement

ಪರಿಕಲ್ಪನೆಗೆ ಜಯ: ರಾಹುಲ್‌
ಆಧಾರ್‌ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, “ಆಧಾರ್‌ ಕಾರ್ಡ್‌ ಯೋಜನೆ ಕಾಂಗ್ರೆಸ್‌ ಪಾಲಿಗೆ ಸಬಲೀಕರಣದ ಮಾರ್ಗ ವಾಗಿದ್ದರೆ, ಬಿಜೆಪಿ ಪಾಲಿಗೆ ಅದು ದಬ್ಟಾಳಿಕೆಯ ಮಾರ್ಗವಾಗಿತ್ತು. ಆದರೆ ಆಧಾರ್‌ ಬಗ್ಗೆ ಕಾಂಗ್ರೆಸ್‌ ಹೊಂದಿದ್ದ ದೃಷ್ಟಿಕೋನವನ್ನು ಪುಷ್ಟೀಕರಿಸುವಂಥ ತೀರ್ಪು ನೀಡಿದ್ದಕ್ಕೆ ಸುಪ್ರೀಂ ಕೋರ್ಟ್‌ಗೆ ಕಾಂಗ್ರೆಸ್‌ ಆಭಾರಿಯಾಗಿದೆ’ ಎಂದಿದ್ದಾರೆ. 

ಐತಿಹಾಸಿಕ ತೀರ್ಪು: ಜೇಟ್ಲಿ
ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸಿರುವ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಸರಕಾರಿ ಯೋಜನೆಗಳ ಸವಲತ್ತು¤ಗಳು ಯಾವುದೇ ಮಧ್ಯವರ್ತಿಗಳ ಹಂಗಿಲ್ಲದೆ ಫ‌ಲಾನುಭವಿಗಳಿಗೆ ನೇರವಾಗಿ ಸಂದಾಯವಾಗಲು ಆಧಾರ್‌ ಸಹಾಯ ಮಾಡಿದೆ. ಇದರಿಂದ ಸರಕಾರಕ್ಕೆ ವಾರ್ಷಿಕ 90 ಕೋಟಿ ರೂ. ಉಳಿತಾಯವಾಗಿದೆ. ಹೀಗಾಗಿ ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆ ನೀಡಿರುವ ಸು. ಕೋರ್ಟ್‌ನ ತೀರ್ಪು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ.

ಭಾರತದ ಸರ್ವೋಚ್ಚ ನ್ಯಾಯಾಲಯದ ಸೂಕ್ಷ್ಮ ಪರಿಶೀಲನೆಯ ಅನಂತರ ಆಧಾರ್‌ಗೆ ಅನುಮೋದನೆ ಸಿಕ್ಕಿದೆ. ಪ್ರಜಾಪ್ರಭುತ್ವ ಶೈಲಿಯ ಚರ್ಚೆಗಳ ಮೂಲಕ ನಾವು ಒಟ್ಟಾರೆಯಾಗಿ ಆಧಾರ್‌ ಎಂಬ ಶಕ್ತಿಶಾಲಿ ವ್ಯವಸ್ಥೆಯನ್ನು ರೂಪಿಸಿರುವ ಬಗ್ಗೆ ಹೆಮ್ಮೆಯಿದೆ.
ನಂದನ್‌ ನಿಲೇಕಣಿ, ಯುಐಡಿಎಐ ಅಧ್ಯಕ್ಷ

ಯಾವ ಸೇವೆಗಳಿಗೆ ಆಧಾರ್‌ ಬೇಕು?
ಪಾನ್‌ ಕಾರ್ಡ್‌
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ
ಎಲ್ಲ ಸರಕಾರಿ ಯೋಜನೆಗಳು, ಸಹಾಯಧನಗಳು

ಯಾವ ಸೇವೆಗಳಿಗೆ ಆಧಾರ್‌ ಬೇಡ?
ಬ್ಯಾಂಕ್‌ ಖಾತೆಗಳು
 ಟೆಲಿಕಾಂ ಸೇವೆಗಳು
ಮೊಬೈಲ್‌ ಸಿಮ್‌ ಕಾರ್ಡ್‌
ಸಿಬಿಎಸ್‌ಇ, ನೀಟ್‌, ಯುಜಿಸಿ ಪರೀಕ್ಷೆಗಳು
ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ
ಮಕ್ಕಳಿಗೆ ಸಿಗಬೇಕಾದ ಸವಲತ್ತುಗಳು

Advertisement

Udayavani is now on Telegram. Click here to join our channel and stay updated with the latest news.

Next