Advertisement

ಕಾವೇರಿ ವಿವಾದ: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

06:00 AM Apr 03, 2018 | Team Udayavani |

ಹೊಸದಿಲ್ಲಿ: ಕಾವೇರಿ ಜಲ ನಿರ್ವಹಣ ಮಂಡಳಿ ರಚಿಸದ ಕೇಂದ್ರದ ವಿರುದ್ಧ ತಮಿಳುನಾಡು ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ. ಮುಖ್ಯ ನ್ಯಾಯ ಮೂರ್ತಿ ದೀಪಕ್‌ ಮಿಶ್ರಾ, ನ್ಯಾಯ ಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌, ಡಿ.ವೈ. ಚಂದ್ರ ಚೂಡ್‌ ಅವರನ್ನೊಳ ಗೊಂಡ ನ್ಯಾಯ ಪೀಠ ವಿಚಾರಣೆಯನ್ನು ಎ. 9ಕ್ಕೆ  ನಿಗದಿಪಡಿಸಿದೆ.

Advertisement

ನೀರು ಪಡೆಯಲು ತಮಿಳುನಾಡು ಅನುಭವಿಸುತ್ತಿರುವ ಸಂಕಷ್ಟ ನಮಗೆ ಅರ್ಥವಾಗುತ್ತದೆ. ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ನ್ಯಾಯಪೀಠ ಹೇಳಿದೆ. ಫೆ. 16ರಂದು ಸುಪ್ರೀಂ ಕೋರ್ಟ್‌ ನಿರ್ದೇಶಿಸಿದಂತೆ ಆರು ವಾರ ಗಳೊಳಗೆ ಕಾವೇರಿ ಜಲ ನಿರ್ವಹಣ ಮಂಡಳಿ ಮತ್ತು ಕಾವೇರಿ ಜಲ ನಿಯಂತ್ರಣ ಸಮಿತಿ ರಚಿಸಲು ಕೇಂದ್ರ ವಿಫ‌ಲವಾಗಿದೆ ಎಂದು ತಮಿಳು ನಾಡು ಸರಕಾರ ತನ್ನ ಅರ್ಜಿಯಲ್ಲಿ ದೂರಿದೆ. ಕೇಂದ್ರ ಸರಕಾರವೂ ತೀರ್ಪಿನಲ್ಲಿ “ಸ್ಕೀಮ್‌’ ಎಂಬುದರ ಉಲ್ಲೇಖದ ಬಗ್ಗೆ ಸ್ಪಷ್ಟತೆ ಕೋರಿ ಶನಿವಾರ ಮರುಪರಿಶೀಲನೆ ಅರ್ಜಿ ಸಲ್ಲಿಸಿತ್ತು.

ಲೋಕಸಭೆಯಲ್ಲಿ ಕಾವೇರಿ ಗದ್ದಲ: ಲೋಕಸಭೆ ಅಧಿವೇಶನ ಆರಂಭ ವಾದಾಗಿನಿಂದಲೂ ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ತಮಿಳುನಾಡು ಎಐಎಡಿಎಂಕೆ ಸಂಸದರು ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರವೂ ಇದು ಮುಂದುವರಿದಿದೆ. ತಮಿಳುನಾಡು ಸಂಸದರು ಲೋಕಸಭೆಯಲ್ಲಿ ದಿನ ವೆಲ್ಲ ಗದ್ದಲವೆಬ್ಬಿಸಿದ್ದರಿಂದ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.

ತಮಿಳುನಾಡಿನಲ್ಲಿ ಪ್ರತಿಭಟನೆ ತೀವ್ರ: ಕಾವೇರಿ ವಿಚಾರದಲ್ಲಿ ತಮಿಳು ನಾಡಿನಲ್ಲಿ ಪ್ರತಿಭಟನೆ ತೀವ್ರ ಗೊಂಡಿದ್ದು, ಇಬ್ಬರು ಡಿಎಂಕೆ ಕಾರ್ಯ ಕರ್ತರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ಕೊಯಮತ್ತೂರಿನಲ್ಲಿ ನಡೆದಿದೆ. ಡಿಎಂಕೆ ಹಾಗೂ ಇತರ ತಮಿಳು ಪರ ಸಂಘಟನೆಗಳು ಚೆನ್ನೈ, ತಿರುವಾರೂರು  ಮತ್ತು ಮಧುರೈ ಸಹಿತ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದವು.

ಕೋರ್ಟ್‌ ಸ್ಕೀಂ ಮಾಡಿ ಎಂದಿದೆ: ಸಿಎಂ
ಕಾವೇರಿ ಜಲ ನಿರ್ವಹಣ ಮಂಡಳಿ ರಚನೆ ಸಂಬಂಧ ರಾಜ್ಯ ಬಂದ್‌ ಮಾಡುವ ಮೂಲಕ ತಮಿಳುನಾಡು ಒತ್ತಡತಂತ್ರ ಅನುಸರಿಸುತ್ತಿದೆ. ಜಲ ನಿರ್ವಹಣ ಮಂಡಳಿ ರಚನೆಗೆ ನ್ಯಾಯಾಲಯ ಆದೇಶ ನೀಡಿಲ್ಲ. ಬದಲಿಗೆ ಸ್ಕೀಂ ಮಾಡಿ ಎಂದು ಹೇಳಿದೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಮೈಸೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮೇಕೆದಾಟು ಯೋಜನೆ ಮಾಡಲು ಕರ್ನಾಟಕ ಸರಕಾರ ಈಗಲೂ ಬದ್ಧವಾಗಿದೆ. ಈ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಹ ತಯಾರಿಸಿ ಕಳುಹಿಸಲಾಗಿದೆ. ಕೇಂದ್ರ ಸರಕಾರ ಅನುಮತಿ ನೀಡಿದ ಕೂಡಲೇ ಮೇಕೆದಾಟು ಯೋಜನೆಗೆ ಚಾಲನೆ ನೀಡಲಾಗುವುದು ಎಂದಿದ್ದಾರೆ.

Advertisement

ಕಾವೇರಿ ಜಲ ನಿರ್ವಹಣ ಪ್ರಾಧಿಕಾರ ರಚನೆ ವಿಚಾರದಲ್ಲಿ ಕೇಂದ್ರ ಸರ ಕಾರ ಉದ್ದೇಶಪೂರ್ವಕ ವಿಳಂಬ ಮಾಡುತ್ತಿಲ್ಲ. ಸೂಕ್ತ ಯೋಜನೆ ರೂಪಿಸಲು ಮುಂದಾಗಿದೆ. ಹೀಗಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಪಾಯ ಎದು ರಾಗುವ ಸಾಧ್ಯತೆ ಇಲ್ಲ.
– ಡಾ|ಬಿ.ವಿ. ಆಚಾರ್ಯ,  ಮಾಜಿ ಅಡ್ವೊಕೇಟ್‌ ಜನರಲ್‌

Advertisement

Udayavani is now on Telegram. Click here to join our channel and stay updated with the latest news.

Next