ಅಯೋಧ್ಯೆ ಜಮೀನು ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಐತಿಹಾಸಿಕ ಮತ್ತು ಸಾಧನೆ ಎಂದು ಹಿರಿಯ ಸಂವಿಧಾನ ತಜ್ಞ ಕೆ.ಎನ್. ಭಟ್ ಬಣ್ಣಿಸಿದ್ದಾರೆ.
ಶತಮಾನಗಳ ಕಾಲ ನಡೆದುಕೊಂಡು ಬಂದಿದ್ದ ವಿವಾದವನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಪರಿಹರಿಸಿ ಸರಿಯಾದ ತೀರ್ಪು ನೀಡಿದೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ “ಉದಯವಾಣಿ’ ಜತೆಗೆ ಮಾತನಾಡಿದ ಅವರು, ಇಂಥ ಒಂದು ತೀರ್ಪು ಹಿಂದೆಯೇ ಬರಬೇಕಾಗಿತ್ತು ಎಂದು ಭಟ್ ಅಭಿಪ್ರಾಯ ಪಟ್ಟಿದ್ದಾರೆ. ನ್ಯಾಯಾಂಗದ ಮೂಲಕ ಇಂಥ ವಿಚಾರ ಬಗೆಹರಿದದ್ದು ಸ್ತುತ್ಯರ್ಹ ವಿಚಾರ.
ರಾಮನ ಬಗ್ಗೆ ಜನರಲ್ಲಿ ವಿಶೇಷ ಭಾವನೆ ಇದೆ. ಹೀಗಾಗಿ ಜನ್ಮಸ್ಥಾನಕ್ಕೆ ಸಂಬಂಧಿಸಿದಂತೆ ಇರುವ ವಿಚಾರ ಕೂಡ ಮಹತ್ವದ್ದಾಗಿದೆ. ಸಾಂವಿಧಾನಿಕ ಪೀಠ ನೀಡಿದ ತೀರ್ಪಿನಿಂದ ಜನ್ಮಸ್ಥಾನದ ಬಗ್ಗೆ ಜನರು ನಂಬಿಕೊಂಡು ಬಂದಿರುವ ಅಂಶ ಮತ್ತಷ್ಟು ದೃಢವಾಗಿದೆ ಎಂದು ಅವರು ಹೇಳಿದ್ದಾರೆ. ಹಲವು ಸಂದರ್ಭಗಳಲ್ಲಿ ಈ ವಿವಾದ ಬಗೆ ಹರಿಯಬಾರದು ಎಂಬ ಅಂಶಗಳೇ ಪ್ರಭಾವ ಬೀರಿದ್ದವು ಎಂದರು.
ರಾಜಕೀಯ ದೃಢತೆ: ಶತಮಾನ ಕಾಲದ ವ್ಯಾಜ್ಯ ಬಗೆಹರಿಸಲು ನ್ಯಾಯಾಂಗ ಉತ್ಸಾಹ ಇದ್ದರೂ, ದೇಶದಲ್ಲಿ ಅದಕ್ಕೆ ಪೂರಕವಾಗಿರುವ ಅಂಶಗಳು ಇದುವರೆಗೆ ಇರಲಿಲ್ಲ. ಹೀಗಾಗಿ ಕ್ಷಿಪ್ರಗತಿಯಲ್ಲಿ ತೀರ್ಪು ಪ್ರಕಟವಾಗಿರಲಿಲ್ಲ. ಸದ್ಯ ಇರುವ ಸರಕಾರ ವಿವಾದ ಪರಿಹಾರವಾಗಿ ತಾರ್ಕಿಕ ಅಂತ್ಯ ಕಾಣಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡಿದೆ. ಅದರಿಂದಾಗಿ ನ್ಯಾಯಾಂಗ ಕೂಡ ಸರಿಯಾದ ರೀತಿಯಲ್ಲಿ ಸ್ಪಂದಿಸಿ ಕೆಲಸ ಮಾಡಿತು ಎಂದು ಹೇಳಿದ್ದಾರೆ.
ತಿರಸ್ಕೃತವಾಗಿಲ್ಲ: 2010ರಲ್ಲಿ ಅಯೋಧ್ಯೆ ವಿಚಾರದಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಲಿಲ್ಲ. ಆದರೆ 2.77 ಎಕರೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ ನೀಡಿದ್ದು ಸರಿಯಾಗಿಲ್ಲ ಎಂದು ಹೇಳಿದೆ.
ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನವರಾಗಿರುವ ಕೆ.ಎನ್. ಭಟ್ 2010ರಲ್ಲಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ರಾಮ ಲಲ್ಲಾ ವಿರಾಜಮಾನ್ ಪರ ವಾದ ಮಂಡಿಸಿದ್ದರು. ಸದ್ಯ ಕೇಂದ್ರ ಸಚಿವರಾಗಿರುವ ರವಿಶಂಕರ ಪ್ರಸಾದ್ ಕೂಡ ಅವರ ಜತೆಗೂಡಿ ವಾದ ಮಂಡಿಸಿದ್ದರು.