ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅಲ್ಲಿಯ ಸಂಸ್ಥೆಗಳ ಕುರಿತು ಗೌರವಕ್ಕೆ ಚ್ಯುತಿ ತರುವ ಹೇಳಿಕೆ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸೋಮನಾಥ್ ನಾಯಕ್ ಅವರ ಮನವಿಯನ್ನು ತಿರಸ್ಕರಿಸಿ, ಅವರ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದೆ.
ಈ ಹಿಂದೆ ಬೆಳ್ತಂಗಡಿ ಸಿವಿಲ್ ನ್ಯಾಯಾಲಯವು ಸೋಮನಾಥ ನಾಯಕ್ ಮತ್ತು ಇತರ ಐವರ ವಿರುದ್ಧ ಪ್ರತಿಬಂಧಕಾಜ್ಞೆ ಮಾಡಿತ್ತು. ಆದರೂ ನ್ಯಾಯಾಲಯದ ಆದೇಶಕ್ಕೆ ಗೌರವ ನೀಡದೆ ಸೋಮನಾಥ ನಾಯಕ್ ಸುಳ್ಳು ಆರೋಪಗಳನ್ನು ಹೆಗ್ಗಡೆಯವರ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಮಾಡುತ್ತಲೇ ಇದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸೋಮನಾಥ ನಾಯಕ್ ದೋಷಿ ಎಂದು ಪರಿಗಣಿಸಿದ ನ್ಯಾಯಾಲಯವು ಅವರಿಗೆ 3 ತಿಂಗಳ ಸಜೆಯಲ್ಲದೆ, ಕ್ಷೇತ್ರಕ್ಕೆ 4.5 ಲಕ್ಷ ರೂ. ಪರಿಹಾರವನ್ನು ನೀಡಬೇಕು ಎಂದು ಆದೇಶಿಸಿ ನಾಯಕ್ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.
ಆದೇಶದ ವಿರುದ್ಧ ಸೋಮನಾಥ ನಾಯಕ್ ಅಪೀಲು ಸಲ್ಲಿಸಿದ್ದರು. ಆದರೆ ಅಪರ ನ್ಯಾಯಾಲಯವು ತನಿಖಾ ನ್ಯಾಯಾಲಯವು ನೀಡಿದ ಶಿಕ್ಷೆಯನ್ನು ಎತ್ತಿ ಹಿಡಿದು ಅಪೀಲು ವಜಾ ಮಾಡಿತ್ತು. ಬಳಿಕ ಬೆಳ್ತಂಗಡಿಯ ಹೆಚ್ಚುವರಿ ನ್ಯಾಯಾಲಯವೂ ಸೋಮನಾಥ ನಾಯಕ್ ವಿರುದ್ಧ ಬಂಧನದ ವಾರಂಟ್ ಹೊರಡಿಸಿ 3 ತಿಂಗಳ ಸೆರೆಮನೆವಾಸಕ್ಕೆ ಕಳುಹಿಸು ವಂತೆ ಆದೇಶಿಸಿತ್ತು.
ಈ ಮೇಲಿನ ಆದೇಶಗಳ ವಿರುದ್ಧ ಸೋಮನಾಥ ನಾಯಕ್ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಉಚ್ಚ ನ್ಯಾಯಾ ಲಯವು ಕೆ. ಸೋಮನಾಥ ನಾಯಕ್ ಅವರ ರಿಟ್ ಅರ್ಜಿಯನ್ನು ತಿರಸ್ಕರಿಸಿ ಅವರ ಬಂಧನಕ್ಕೆ ಹಸುರು ನಿಶಾನೆ ನೀಡಿತ್ತು. ಈ ಆದೇಶದ ವಿರುದ್ಧ ಸೋಮ ನಾಥ್ ನಾಯಕ್ ಸರ್ವೋಚ್ಚ ನ್ಯಾಯಾಲಯ ದಲ್ಲಿ ಅರ್ಜಿ ಸಲ್ಲಿಸಿದ್ದರು.
19-10-2022ರಂದು ಎರಡೂ ಕಡೆಯ ವಾದಗಳನ್ನು ಆಲಿಸಿದ ಸರ್ವೋಚ್ಚ ನ್ಯಾಯಾ ಲಯವು ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಬೆಳ್ತಂಗಡಿಯ ನ್ಯಾಯಾಲ ಯಗಳು ನೀಡಿದ ತೀರ್ಪುಗಳಿಗೆ ತಾನು ಮಧ್ಯಪ್ರವೇಶಿಸುವ ಯಾವುದೇ ಕಾರಣಗಳು ಕಂಡುಬರುವುದಿಲ್ಲ. ನ್ಯಾಯಾಲಯದ ಪ್ರತಿಬಂಧಕಾಜ್ಞೆ ಊರ್ಜಿತದಲ್ಲಿದ್ದರೂ ಅರ್ಜಿದಾರ ಪದೇ ಪದೆ ನ್ಯಾಯಾಲಯದ ಆಜ್ಞೆಯನ್ನು ಉಲ್ಲಂಘಿಸಿರುವುದು ರುಜುವಾತಾಗಿದೆ ಎಂದು ಅಭಿಪ್ರಾಯ ಪಟ್ಟಿತಲ್ಲದೆ ಕೆ. ಸೋಮನಾಥ ನಾಯಕ್ ಅವರ ಅರ್ಜಿಯನ್ನು ವಜಾಗೊಳಿಸಿ ತೀರ್ಪಿತ್ತಿದೆ.
ನ್ಯಾಯಾಲಯದಲ್ಲಿ ಶ್ರೀ ಕ್ಷೇತ್ರವನ್ನು ದಿಲ್ಲಿಯ ಹಿರಿಯ ನ್ಯಾಯವಾದಿ ಕೆ.ವಿ. ವಿಶ್ವನಾಥನ್, ವಿ.ಎನ್. ರಘುಪತಿ, ಕೆ. ಚಂದ್ರನಾಥ ಆರಿಗ, ಬೆಂಗಳೂರು ಮತ್ತು ಬೆಳ್ತಂಗಡಿಯ ರತ್ನವರ್ಮ ಬುಣ್ಣು ಅವರ ತಂಡ ಪ್ರತಿನಿಧಿಸಿತ್ತು.