Advertisement
ಸುಗ್ರೀವಾಜ್ಞೆ ಮೂಲಕ ಕಂಬಳಕ್ಕೆ ಅವಕಾಶ ಮಾಡಿಕೊಟ್ಟ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಪೇಟಾ ಸಂಘಟನೆ, ಕಂಬಳಕ್ಕೆ ತಡೆಯಾಜ್ಞೆ ನೀಡಬೇಕು ಎಂದೂ ಕೋರಿತ್ತು. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ತಡೆಯಾಜ್ಞೆ ಕೋರಿಕೆಯನ್ನು ತಿರಸ್ಕರಿಸಿ ವಿಚಾರಣೆಯನ್ನು ನ. 13ಕ್ಕೆ ಮುಂದೂಡಿದೆ. ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆ ವೇಳೆ ಪೇಟಾ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಅಟಾರ್ನಿ ಜನರಲ್‌ಗೆ ಸೂಚಿಸಿದೆ.
Related Articles
Advertisement
ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಪೇಟಾ ಸಂಸ್ಥೆ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿ, ಕಂಬಳ ಕ್ರೀಡೆಗೆ ನೀಡಿರುವ ಅನುಮತಿ ರದ್ದುಗೊಳಿಸಬೇಕು ಮತ್ತು ಅರ್ಜಿ ಇತ್ಯರ್ಥವಾಗುವವರೆಗೆ ಕಂಬಳಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿತ್ತು. ಆದರೆ, ತಡೆಯಾಜ್ಞೆ ಕೋರಿಕೆಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.
ಕಂಬಳ ಪ್ರೇಮಿಗಳಲ್ಲಿ ಹರ್ಷ ಮಂಗಳೂರು: ಕರಾವಳಿ ಸೇರಿದಂತೆ ರಾಜ್ಯದಲ್ಲಿ ಕಂಬಳ ಆಯೋಜನೆಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಕಂಬಳ ಆಯೋಜನೆಗೆ ತಲೆದೋರಿದ್ದ ಆತಂಕ ಸದ್ಯಕ್ಕೆ ದೂರವಾಗಿದೆ. ಜಿಲ್ಲಾ ಕಂಬಳ ಸಮಿತಿ ಈಗಾಗಲೇ ಕಂಬಳ ಆಯೋಜನೆಗೆ ವೇಳಾಪಟ್ಟಿ ಪ್ರಕಟಿಸಿದೆ. ನ.11ರಂದು ಮೂಡಬಿದಿರೆ ಕಡಲಕೆರೆ ನಿಸರ್ಗಧಾಮದಲ್ಲಿ ಮೊದಲ ಕಂಬಳ ನಡೆಯಲಿದೆ. ಆ ಮೂಲಕ ವಿಜಯೋತ್ಸವ ಆಚರಿಸುವುದಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಪೆಟಾದ ಅರ್ಜಿಯನ್ನು ನ.6ರಂದು ಸುಪ್ರೀ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಕಂಬಳ ಆಯೋಜನೆಗೆ ಅನಿಶ್ಚಿತ ಪರಿಸ್ಥಿತಿ ತಲೆದೋರಿತ್ತು. ಕಂಬಳ ನಡೆಸಲು ಅವಕಾಶ ನೀಡಿ ಈಗಾಗಲೇ ರಾಷ್ಟ್ರಪತಿಯವರು ಅಧ್ಯಾದೇಶಕ್ಕೆ ಸಹಿ ಹಾಕಿದ್ದಾರೆ. ಆ.20ರಂದು ಇದರ ಅಧಿಸೂಚನೆಯಾಗಿದ್ದು 2018 ಜ. 20ರವರೆಗೆ ಈ ಅಧ್ಯಾದೇಶ ಊರ್ಜಿತದಲ್ಲಿರುತ್ತದೆ. ಇದರ ನಡುವೆ ಕಂಬಳ ಆಯೋಜನೆಗೆ ಕಾನೂನು ರೂಪಿಸುವ ಮಸೂದೆ ಮತ್ತೆ ವಿಧಾನಸಭೆಯಲ್ಲಿ ಅನುಮೋದನೆಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾಯೊನ್ಮುಖವಾಗಿದ್ದು ಮಸೂದೆಗೆ ಈಗಾಗಲೇ ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗಿ ಅನುಮೋದನೆಗೊಳ್ಳುವ ನಿರೀಕ್ಷೆಯೂ ಇದೆ. ಪ್ರತಿವಾದಿಯಾಗಿ ಪರಿಗಣಿಸಲು ಅರ್ಜಿ
ಪೆಟಾದವರ ಅರ್ಜಿ ವಿಚಾರಣೆ ವೇಳೆ ನಮ್ಮನ್ನೂ ಪ್ರತಿವಾದಿಗಳನ್ನಾಗಿ ಮಾಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಲು ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿ ಮುಂದಾಗಿದೆ. ಈ ಬಗ್ಗೆ ಸಮಿತಿ ಸಂಜಯ್ ಲುಲಿ ಅವರನ್ನು ನ್ಯಾಯವಾದಿಯಾಗಿ ಸಮಿತಿ ನೇಮಿಸಿದ್ದು ಅವರು ಶೀಘ್ರ ಅರ್ಜಿ ಸಲ್ಲಿಸಲಿದ್ದಾರೆ. ಕಂಬಳಕ್ಕೆ ತಡೆಯಾಜ್ಞೆ ನೀಡಲು ನ್ಯಾಯಾಲಯ ನಿರಾಕರಿಸಿರುವುದು ಸಂತಸ ತಂದಿದೆ’ ಎಂದು ಈ ಸಮಿತಿ ಅಧ್ಯಕ್ಷ ಹಾಗೂ ಕಂಬಳದ ಬಗ್ಗೆ ನಿರಂತರ ಕಾನೂನು ಸಮರ ನಡೆಸುತ್ತಿರುವ ಅಶೋಕ್ ರೈ ಅವರು ತಿಳಿಸಿದ್ದಾರೆ. “ಕಂಬಳಕ್ಕೆ ತಡೆಯಾಜ್ಞೆ ದೊರಕದು ಎಂಬ ವಿಶ್ವಾಸ ನಮ್ಮಲಿತ್ತು. ತಡೆ ನೀಡಲು ಸುಪ್ರಿಂಕೋರ್ಟ್ ನಿರಾಕರಿಸಿರುವುದು ಸಂತಸ ತಂದಿದೆ. ಕಂಬಳವನ್ನು ಜಲ್ಲಿಕಟ್ಟುಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಕಂಬಳ ಜಾನಪದ ಕ್ರೀಡೆಯಾಗಿದ್ದು ಇದರಲ್ಲಿ ಧಾರ್ಮಿಕ ಆಚರಣೆಗಳು ಸಮ್ಮಿಲಿತವಾಗಿದೆ’.
-ಬಾರ್ಕೂರು ಶಾಂತಾರಾಮ ಶೆಟ್ಟಿ, ಅಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ