ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧದ ಮಹಾಭಿಯೋಗ ನಿಲುವಳಿಯನ್ನು ರಾಜ್ಯಸಭೆ ಸಭಾಪತಿ ತಿರಸ್ಕರಿಸಿದ ವಿಚಾರ ನ್ಯಾಯಾಂಗ ಕಟಕಟೆಯನ್ನೇರಿದೆ. ಕೇವಲ ಬಾಹ್ಯ ಕಾರಣಗಳನ್ನು ಉಲ್ಲೇಖೀಸಿ ನಿಲುವಳಿ ತಿರಸ್ಕರಿಸಲಾಗಿದ್ದು, ಸಿಜೆಐ ವಿರುದ್ಧ ಸಾಬೀತಾಗಿರುವ ದುರ್ವರ್ತನೆಯ ಆರೋಪ ಇಲ್ಲ ಎಂದು ಸಭಾಪತಿ ಹೇಳಿರುವುದು ಸರಿಯಲ್ಲ ಎಂದು ಆರೋಪಿಸಿ ಕಾಂಗ್ರೆಸ್‌ನ ಇಬ್ಬರು ರಾಜ್ಯಸಭೆ ಸಂಸದರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮಂಗಳವಾರವೇ ಈ ಅರ್ಜಿ ವಿಚಾರಣೆ ನಡೆಯಲಿದೆ. ಅದಕ್ಕಾಗಿ ನ್ಯಾ.ಎ.ಕೆ.ಸಿಕ್ರಿ ಅವರನ್ನೊಳಗೊಂಡ ಐವರು ಸದಸ್ಯರ ಸಾಂವಿಧಾನಿಕ ಪೀಠ ರಚನೆ ಮಾಡಲಾಗಿದೆ. ನ್ಯಾಯಮೂರ್ತಿಗಳಾದ ಎಸ್.ಎ.ಬೋಬೆ, ಎನ್. ವಿ.ರಮಣ, ಅರುಣ್ ಮಿಶ್ರಾ ಮತ್ತು ಎ.ಕೆ.ಗೋಯಲ್ ನ್ಯಾಯಪೀಠದ ಇತರ ಸದಸ್ಯರು. ನ್ಯಾಯಮೂರ್ತಿಗಳ ಹಿರಿತನ ಗಮನಿಸುವುದಾದರೆ ನ್ಯಾ.ಸಿಕ್ರಿ ಆರನೇಯವರು. ಎರಡರಿಂದ ಐದರವರೆಗೆ ಹಿರಿತನ ಹೊಂದಿರುವ ನ್ಯಾಯಮೂರ್ತಿಗಳಾದ ಜೆ.ಚಲಮೇಶ್ವರ್, ರಂಜನ್ ಗೊಗೊಯ್, ಎಂ.ಬಿ.ಲೋಕುರ್, ಕುರಿಯನ್ ಜೋಸೆಫ್ರನ್ನು ದಾಟಿ ನ್ಯಾಯಪೀಠ ರಚಿಸಲಾಗಿದೆ.
ಇದಕ್ಕೂ ಮುನ್ನ ನ್ಯಾ.ಜೆ.ಚಲಮೇಶ್ವರ್ ನೇತೃತ್ವದ ನ್ಯಾಯಪೀಠ ಮುಂದೆ ಅವರು ಅರ್ಜಿಯ ತ್ವರಿತ ವಿಚಾರಣೆಗೆ ಕೋರಿದ್ದು, ಅರ್ಜಿಯನ್ನು ಪರಿಗಣಿಸಬೇಕೋ ಬೇಡವೋ ಎಂದು ಮಂಗಳವಾರ ತೀರ್ಮಾನಿಸುವುದಾಗಿ ನ್ಯಾಯಪೀಠ ಹೇಳಿತ್ತು. ಕಾಂಗ್ರೆಸ್‌ನ ನಾಯಕರಾದ ಪ್ರತಾಪ್ ಸಿಂಗ್ ಬಾಜ್ವಾ ಮತ್ತು ಆಮಿ ಹರ್ಷದ್ ರಾಯ್ ಯಾಕ್ ಅವರೇ ಸಭಾಪತಿ ಎಂ.ವೆಂಕಯ್ಯ ನಾಯ್ಡು ನಿರ್ಣಯದ ವಿರುದ್ಧ ಅರ್ಜಿ ಸಲ್ಲಿಸಿದವರು. ಕೋರ್ಟಲ್ಲಿ ಹಾಜರಿದ್ದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, ಈ ವಿಚಾರನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದ್ದರು.. ಈ ಸಂದರ್ಭದಲ್ಲಿ ನ್ಯಾ.ಜೆ.ಚಲಮೇಶ್ವರ್ ಮತ್ತು ನ್ಯಾ.ಎಸ್.ಕೆ.ಕೌಲ್ ನೇತೃತ್ವದ ಪೀಠ, ತುರ್ತಾಗಿ ವಿಚಾರಣೆ ನಡೆಸಬೇಕಾಗಿದ್ದರೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠಕ್ಕೆ ಅರಿಕೆ ಮಾಡಿಕೊಳ್ಳಿ. ಏಕೆಂದರೆ ಅವರೇ ವಿವಿಧ ನ್ಯಾಯಪೀಠಗಳಿಗೆ ಪ್ರಕರಣ ಹಂಚಿಕೆ ಮಾಡುತ್ತಾರೆ ಎಂದಿದ್ದರು.
ಅದಕ್ಕೆ ಉತ್ತರಿಸಿದ್ದ ಮಾಜಿ ಸಚಿವ ಕಪಿಲ್ ಸಿಬಲ್ ಮತ್ತು ನ್ಯಾಯವಾದಿ ಪ್ರಶಾಂತ್ ಭೂಷಣ್, “ಸಿಜೆಐ ವಿರುದ್ಧವೇ ಪ್ರಕರಣ ಇರುವಾಗ ಅವರ ಮುಂದೆ ಹೇಗೆ ಪ್ರಸ್ತಾಪಿಸಲಿ. ಹೀಗಾಗಿ ಹಿರಿಯ ನ್ಯಾಯಮೂರ್ತಿ ನೇತೃತ್ವದ ಪೀಠದ ಮುಂದೆ ಅರ್ಜಿ ಸಲ್ಲಿಸಲಾಯಿತು’ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಚಲಮೇಶ್ವರ್, ತಾವು ಸದ್ಯದಲ್ಲೇ ಸೇವಾ ನಿವೃತ್ತಿಯಾಗುತ್ತಿದ್ದೇವೆ. ಕೊನೆಗೆ, ಮಂಗಳವಾರ ಈ ಬಗ್ಗೆ ಪರಿಶೀಲಿಸುತ್ತೇವೆ ಎಂದಿದ್ದರು.
ನಿಲುವಳಿ ತಿರಸ್ಕರಿಸಿರುವ ಸಭಾಪತಿ ಕ್ರಮವನ್ನು ಆಕ್ಷೇಪಿಸಿದ್ದ ಸಿಬಲ್, ನೋಟಿಸ್‌ಗೆ 64 ಸದಸ್ಯರ ಸಹಿ ಮತ್ತು ಏಳು ಮಂದಿ ಇತ್ತೀಚೆಗಷ್ಟೇ ನಿವೃತ್ತರಾದ ಸದಸ್ಯರೂ ಸಹಿ ಮಾಡಿದ್ದರು ಎಂದು ವಾದಿಸಿದ್ದರು. ಸಿಜೆಐ ಮಿಶ್ರಾ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ಏಳು ಪಕ್ಷಗಳು ಮಹಾಭಿಯೋಗ ನಿಲುವಳಿಗೆ ನೋಟಿಸ್ ನೀಡಿದ್ದವು. ಸ್ವಾತಂತ್ರ್ಯಾ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ಸಿಜೆಐ ವಿರುದ್ಧ ಇಂಥ ಪ್ರಕ್ರಿಯೆ ನಡೆಸಲು ಪಕ್ಷಗಳು ಮುಂದಾಗಿದ್ದವು. ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕ ರಾಜ್ಯಸಭೆ ಸಭಾಪತಿ ಏ.23ರಂದು ನೋಟಿಸ್ ತಿರಸ್ಕರಿಸಿದ್ದರು.
ನಿಯಮದಲ್ಲೇ ಉಲ್ಲೇಖ
ನ್ಯಾಯಮೂರ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ (ಮಹಾಭಿಯೋಗ) ವೇಳೆ ಸಂಸತ್‌ಗೆ ನೋಟಿಸ್ ನೀಡದೆ ಅದರ ಬಗ್ಗೆ ಸಾರ್ವಜನಿಕವಾಗಿ ಮಾತನಾ ಡು ವಂತಿಲ್ಲ. ಈ ಅಂಶ ರಾಜ್ಯಸಭೆಯ ನಿಯಮ ಗಳಲ್ಲಿಯೇ ಪ್ರಸ್ತಾಪವಾಗಿದೆ ಎಂದು ಹೇಳಿದೆ ಸುಪ್ರೀಂಕೋರ್ಟ್. ನ್ಯಾಯಮೂರ್ತಿಗಳ ವಿರುದ್ಧ ಕ್ರಮ ಕೈಗೊಂಡ ಬಳಿಕ ಸಂಸದರು ಸಾರ್ವಜನಿಕವಾಗಿ ಹೇಳಿಕೆ ನೀಡದಂತೆ ನಿಷೇಧ ಹೇರಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎ.ಕೆ.ಸಿಕ್ರಿ ಮತ್ತು ನ್ಯಾ.ಅಶೋಕ್ ಭೂಷಣ್ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿಯನ್ನು ಜುಲೈ 3ನೇ ವಾರದಲ್ಲಿ ಕೈಗೆತ್ತಿಕೊಳ್ಳುವುದಾಗಿ ಹೇಳಿತು.
ರಾಜ್ಯಸಭೆ ಸಭಾಪತಿ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದ ಬಳಿ ಕವೇ ಪ್ರತಿಪಕ್ಷಗಳು ಸಲ್ಲಿಸಿದ್ದ ಮಹಾಭಿ ಯೋಗ ನಿಲುವಳಿಯನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್‌ನ ಇಬ್ಬರು ಸಂಸದರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಯಾವ ಮಹತ್ವವೂ ಇಲ್ಲ.
ಅಮನ್ ಸಿನ್ಹಾ, ಬಿಜೆಪಿ ನಾಯಕ