ನವದೆಹಲಿ:2016ರಲ್ಲಿ ನೂರು ಬಿಲಿಯನ್ ಡಾಲರ್ ವಹಿವಾಟಿನ ಸಾಫ್ಟ್ ವೇರ್ ದಿಗ್ಗಜ ಟಾಟಾ ಗ್ರೂಪ್ ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಯನ್ನು ವಜಾಗೊಳಿಸಿರುವ ಕ್ರಮವನ್ನು ಸುಪ್ರೀಂಕೋರ್ಟ್ ಶುಕ್ರವಾರ(ಮಾರ್ಚ್ 26) ಎತ್ತಿಹಿಡಿದಿದೆ. ಇದರಿಂದ ಕಾನೂನು ಹೋರಾಟದಲ್ಲಿ ಟಾಟಾ ಸನ್ಸ್ ಗೆ ಬಹುದೊಡ್ಡ ಜಯ ಸಿಕ್ಕಂತಾಗಿದೆ.
ಟಾಟಾ ಗ್ರೂಪ್ ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಯನ್ನು ವಜಾಗೊಳಿಸಿರುವುದು ಸಮಂಜಸವಲ್ಲ, ಪುನಃ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳಬೇಕೆಂದು ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯೂನಲ್ ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ ಎಂದು ವರದಿ ತಿಳಿಸಿದೆ.
ಸುಪ್ರೀಂಕೋರ್ಟ್ ಚೀಫ್ ಜಸ್ಟೀಸ್ ಎಸ್ ಎ ಬೋಬ್ಡೆ ನೇತೃತ್ವದ ಪೀಠ, ಸೈರಸ್ ಮಿಸ್ತ್ರಿಯನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿರುವ ಕ್ರಮ ಸರಿ ಎಂದಿದೆ. ಕಾನೂನು ದೃಷ್ಟಿಯಿಂದ ಟಾಟಾ ಗ್ರೂಪ್ ನಿರ್ಧಾರ ಸೂಕ್ತವಾಗಿದೆ ಎಂದು ಪೀಠ ಅಭಿಪ್ರಾಯವ್ಯಕ್ತಪಡಿಸಿದೆ.
ಸೈರಸ್ ಮಿಸ್ತ್ರಿಯನ್ನು ಮತ್ತೆ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು 2019ರ ಡಿಸೆಂಬರ್ 18ರಂದು ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯೂನಲ್ ನೀಡಿದ್ದ ಆದೇಶವನ್ನು ಟಾಟಾ ಗ್ರೂಪ್ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಡಿಸೆಂಬರ್ 17ರಂದು ತೀರ್ಪನ್ನು ಕಾಯ್ದಿರಿಸಿತ್ತು.
2012ರಲ್ಲಿ ಟಾಟಾ ಸನ್ಸ್ ನಿಂದ ರತನ್ ಟಾಟಾ ಅಧ್ಯಕ್ಷ ಹುದ್ದೆಯನ್ನು ತ್ಯಜಿಸಿದ್ದ ನಂತರ ಸೈರಸ್ ಮಿಸ್ತ್ರಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ನಾಲ್ಕು ವರ್ಷಗಳ ನಂತರ ನಾಟಕೀಯ ಬೆಳವಣಿಗೆಯಲ್ಲಿ ಮಿಸ್ತ್ರಿಯನ್ನು ಕಂಪನಿ ವಜಾಗೊಳಿಸಿತ್ತು. ಬಳಿಕ ಮಿಸ್ಟ್ರಿ ಮತ್ತು ಟಾಟಾ ನಡುವೆ ಘರ್ಷಣೆಗೆ ಕಾರಣವಾಗಿತ್ತು ಎಂದು ವರದಿ ತಿಳಿಸಿದೆ.