Advertisement

ತ್ರಿವಳಿ ತಲಾಖ್‌ ವಿವಾದ: ಇಂದು ಸುಪ್ರೀಂ ತೀರ್ಪು

08:20 AM Aug 22, 2017 | Karthik A |

ಹೊಸದಿಲ್ಲಿ: ಮುಸ್ಲಿಂ ಸಮುದಾಯದಲ್ಲಿರುವ ವಿವಾದಿತ ‘ತ್ರಿವಳಿ ತಲಾಖ್‌’ ಪದ್ಧತಿ ಕುರಿತು ಸುಪ್ರೀಂ ಕೋರ್ಟ್‌ ಮಂಗಳವಾರ ತೀರ್ಪು ನೀಡಲಿದೆ. ಈ ಕುರಿತು ಬೇಸಗೆ ರಜೆಯಲ್ಲಿ ಆರು ದಿನ ನಿರಂತರ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ನೇತೃತ್ವದ ಪಂಚ ಸದಸ್ಯ ಪೀಠವು, ಮೇ 18ರಂದು ತೀರ್ಪನ್ನು ಕಾಯ್ದಿರಿಸಿತ್ತು.

Advertisement

ಈ ವಿಚಾರಣೆಯು ಬಹುಪತ್ನಿತ್ವಕ್ಕೆ ಸಂಬಂಧಿಸಿಲ್ಲ. ‘ತ್ರಿವಳಿ ತಲಾಖ್‌ ಪದ್ಧತಿಯು ಮುಸ್ಲಿಂ ಧರ್ಮೀಯರಿಗೆ ಜಾರಿಗೊಳಿಸಬಹುದಾದ ಮೂಲಭೂತ ಹಕ್ಕಿನ ಭಾಗವೇ’ ಎಂಬುದನ್ನಷ್ಟೇ ಪರಿಶೀಲಿಸಲಾಗುವುದೆಂದು ಸುಪ್ರೀಂ ಕೋರ್ಟ್‌ ವಿಚಾರಣೆ ವೇಳೆ ಸ್ಪಷ್ಟಪಡಿಸಿತ್ತು. ತ್ರಿವಳಿ ತಲಾಖ್‌ ಕುರಿತು 7 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ ಮುಸ್ಲಿಂ ಮಹಿಳೆಯರು ಸಲ್ಲಿಸಿದ್ದ ಐದು ಪ್ರತ್ಯೇಕ ಅರ್ಜಿಗಳೂ ಸೇರಿವೆ. ಈ ಪದ್ಧತಿ ‘ಅಸಾಂವಿಧಾನಿಕ’ ಎಂದು ಅರ್ಜಿದಾರರು ವಾದಿಸಿದ್ದರು. ಈ ಕುರಿತು ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಭಿನ್ನ ಧರ್ಮಗಳ ನ್ಯಾಯಮೂರ್ತಿಗಳು (ನ್ಯಾ| ಕುರಿಯನ್‌ ಜೋಸೆಫ್, ನ್ಯಾ| ಆರ್‌.ಎಫ್. ನಾರಿಮನ್‌, ನ್ಯಾ| ಯು.ಯು. ಲಲಿತ್‌,  ನ್ಯಾ| ಎಸ್‌.ಅಬ್ದುಲ್‌ ನಜೀರ್‌) ಇರುವ ಪಂಚ ಸದಸ್ಯರ ಪೀಠವನ್ನು ರಚಿಸಲಾಗಿತ್ತು.

ತ್ರಿವಳಿ ತಲಾಖ್‌ : ನ್ಯಾಯದ ನಿರೀಕ್ಷೆಯಲ್ಲಿ…
ಇಡೀ ದೇಶದಲ್ಲೇ ಚರ್ಚೆಗೆ ಕಾರಣವಾಗಿರುವ ತ್ರಿವಳಿ ತಲಾಖ್‌ ಬಗ್ಗೆ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಂವಿಧಾನ ಪೀಠ ತೀರ್ಪು ನೀಡಲು ಸಿದ್ಧವಾಗಿದೆ. ಮಂಗಳವಾರ ನೀಡುವ ತೀರ್ಪು ಇಡೀ ದೇಶವಷ್ಟೇ ಅಲ್ಲ, ಇಡೀ ಜಗತ್ತಿಗೆ ಮಾದರಿಯಾಗಿ ನಿಲ್ಲಲಿದೆ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಕಾರಣ ತೀರ್ಪು ನೀಡುತ್ತಿರುವ ವಿಷಯ. ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೆಹರ್‌ ನೇತೃತ್ವದ ನ್ಯಾಯಪೀಠ ತೀರ್ಪು ನೀಡುವಾಗ ಯಾವ ವಿಷಯಗಳ ಬಗ್ಗೆ ಗಮನಹರಿಸಬಹುದು, ವಿಚಾರಣೆ ವೇಳೆ ಯಾವ್ಯಾವ ವಿಚಾರ ಚರ್ಚೆಗೆ ಬಂತು ಎಂಬ ಬಗ್ಗೆ ಪುಟ್ಟ ನೋಟ.

ತಲಾಖ್‌- ಎ- ಬಿದ್ದತ್‌
ಇದು ಒಂದೇ ಬಾರಿಗೆ ನೀಡುವ ವಿಚ್ಛೇದನ. ಕೋರ್ಟ್‌ ಏಳು ದಿನಗಳ ವಿಚಾರಣೆ ಅವಧಿಯಲ್ಲಿ ಈ ಬಗ್ಗೆಯೇ ಹೆಚ್ಚು ಗಮನ ಹರಿಸಿತ್ತು. ಉಮರ್‌ ಖರೀಫ‌ ಪರಿಚಯಿಸಿದ ಈ ಪದದ ಬಗ್ಗೆ ಕುರಾನ್‌ನಲ್ಲಿ ಬಳಕೆ ಮಾಡಲಾಗಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಯಿತು. ಆದರೆ ಕುರಾನ್‌ನಲ್ಲಿ ಎಲ್ಲೂ ಈ ಬಗ್ಗೆ ಉಲ್ಲೇಖವಿಲ್ಲ ಎಂದು ಗೊತ್ತಾದ ಮೇಲೆ, ವಕೀಲ ಕಪಿಲ್‌ ಸಿಬಲ್‌ ವಿವಿಧ ಇಸ್ಲಾಮಿಕ್‌ ವಿಧಿ ವಿಧಾನಗಳಲ್ಲಿ ಇದರ ಬಳಕೆ ಇದೆ ಎಂದು ವಾದಿಸಿದರು. ಆದರೂ ಕಡೇ ದಿನದ ವಿಚಾರಣೆ ವೇಳೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕುರಾನ್‌ನಲ್ಲಿ ಉಲ್ಲೇಖವಿಲ್ಲ ಎಂದು ಒಪ್ಪಿಕೊಂಡಿತು. ಅಲ್ಲದೆ ಇದೊಂದು ಒಪ್ಪಿತವಲ್ಲದ ಹಾಗೂ ಪಾಪಕ್ಕೆ ಸಮನಾದದ್ದು ಎಂದೂ ಹೇಳಿತು. ಆಗ ನ್ಯಾ| ಜೋಸೆಫ್ ಅವರು ದೇವರ ಕಣ್ಣಿನಲ್ಲಿ ಪಾಪವೆಂದು ಕಂಡದ್ದು, ಜನರ ದೃಷ್ಟಿಯಲ್ಲಿ ಕಾನೂನಂತೆ ಕಾಣಿಸಬಹುದೇ ಎಂಬ ಪ್ರಶ್ನೆ ಹಾಕಿದರು. 

ತಲಾಖ್‌ -ಎ -ಹಸನ್‌ ಮತ್ತು ಎಹ್ಸಾನ್‌
ಡೈವೋರ್ಸ್‌ ನೀಡುವ ಮುನ್ನ ಸಂಧಾನ ಮತ್ತು ಮಧ್ಯಸ್ಥಿಕೆಗೆ ನೀಡಲಾಗುವ ಅವಧಿ. ಐದನೇ ದಿನದ ವಿಚಾರಣೆ ವೇಳೆ ಸ್ವತಃ ಸಿಜೆಐ ಅವರೇ ಕುರಾನ್‌ನಲ್ಲಿ ಈ ಎರಡು ಪದಗಳ ಬಳಕೆ ಇರುವ ಬಗ್ಗೆ ಓದಿ ತಿಳಿಸುತ್ತಾರೆ. ನಂತರ ಅರ್ಜಿದಾರರ ಪರ ವಕೀಲರಾದ ವಿವಿ ಗಿರಿ ಅವರೂ ಹೌದು ಎನ್ನುತ್ತಾರೆ. ಶಯರಾ ಬಾನೋ ಅವರ ವಕೀಲರು ಮತ್ತು ಕಪಿಲ್‌ ಸಿಬಲ್‌ ಕೂಡ ಕುರಾನ್‌ನಲ್ಲಿ ಪ್ರಸ್ತಾಪವಿರುವ ಬಗ್ಗೆ ಒಪ್ಪಿಕೊಳ್ಳುತ್ತಾರೆ.

Advertisement

ಇಸ್ಲಾಮಿಕ್‌
ಮೊದಲನೇ ದಿನದ ವಿಚಾರಣೆ ವೇಳೆಯೇ ಸಿಜೆಐ ಜೆ.ಎಸ್‌. ಖೆಹರ್‌ ಅವರೇ ವಿಚಾರವೊಂದನ್ನು ಸ್ಪಷ್ಟವಾಗಿ ಹೇಳುತ್ತಾರೆ ; ಈ ವಿಚಾರಣೆ ಕೇವಲ ತಲಾಖ್‌ ಕುರಿತಾದದ್ದೇ ಹೊರತು ಇಸ್ಲಾಮಿಕ್‌ ಕಾನೂನಿನ ಕುರಿತಾಗಿ ಅಲ್ಲ. ಆದರೆ ಎಲ್ಲ ಐವರು ನ್ಯಾಯಮೂರ್ತಿಗಳೂ ಏಳು ದಿನದ ವಿಚಾರಣೆಯಲ್ಲಿ ಇಸ್ಲಾಮಿಕ್‌ ಪದದ ಅರ್ಥ ಹುಡುಕಲು ಯತ್ನಿಸುತ್ತಾರೆ. ಇಸ್ಲಾಮಿಕ್‌ ಪದ ಕುರಾನ್‌ನಿಂದ ಬಂದಧ್ದೋ ಅಥವಾ ಹದೀಸ್‌ನಿಂದ (ಪ್ರವಾದಿ ಮಹಮ್ಮದ್‌ ಅನುಸರಿಸಿಕೊಂಡು ಬಂದ ವಿಧಾನ) ಬಂದಧ್ದೋ ಎಂದೂ ಕೇಳುತ್ತಾರೆ. 

ವ್ಯಾಪ್ತಿ
ಕಪಿಲ್‌ ಸಿಬಲ್‌ ಕೋರ್ಟ್‌ಗೆ ಈ ವಿಷಯ ಬಗೆಹರಿಸುವ ಅಧಿಕಾರವಿಲ್ಲ ಎಂದು ವಾದಿಸುತ್ತಾರೆ. ಇದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಇರುವ ಅಧಿಕಾರ ಮಾತ್ರ ಎಂದು ಹೇಳುತ್ತಾರೆ. ಆದರೆ ಇದಕ್ಕೆ ಒಪ್ಪದ ಇಂದಿರಾ ಜೈಸಿಂಗ್‌, ಸುಪ್ರೀಂಕೋರ್ಟ್‌ಗೆ ಈ ವಿಷಯದ ಕುರಿತಂತೆ ವಾದ ಮಾಡುವ ಹಕ್ಕಿದೆ ಎಂದು ಹೇಳುತ್ತಾರೆ. 

ಮಹಿಳೆ
ಇಡೀ ವಿಚಾರಣೆಯಲ್ಲಿ ಮಹಿಳೆ ಮತ್ತು ಆಕೆಯ ಸ್ಥಾನಮಾನದ ಬಗ್ಗೆ ಚರ್ಚೆಯಾಗಿದೆ. ಎಜಿ ಮುಕುಲ್‌ ರೋಹ್ಟಗಿ ಮಹಿಳೆಯರು ಅದರಲ್ಲೂ ಮುಸ್ಲಿಂ ಮಹಿಳೆಯರು ಅಲ್ಪಸಂಖ್ಯಾಕರಲ್ಲೇ ಅಲ್ಪಸಂಖ್ಯಾತರಾಗಿದ್ದಾರೆ ಎಂದು ಹೇಳುತ್ತಾರೆ. ಇಂದಿರಾ ಜೈಸಿಂಗ್‌ ಕೂಡ ಇದಕ್ಕೆ ದನಿಗೂಡಿಸುತ್ತಾರೆ. ಕಪಿಲ್‌ ಸಿಬಲ್‌ ಮಧ್ಯ ಪ್ರವೇಶಿಸಿ ಮುಸ್ಲಿಂ ಮಹಿಳೆಯರೂ ತ್ರಿವಳಿ ತಲಾಖ್‌ ಅನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದಾಗ, ಕೋರ್ಟ್‌ನಲ್ಲಿದ್ದ ಮುಸ್ಲಿಂ ಮಹಿಳೆಯರು ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಕಡೇ ದಿನದ ವಿಚಾರಣೆಯಲ್ಲಿ ಮದುವೆ ವೇಳೆಯಲ್ಲೇ ತ್ರಿವಳಿ ತಲಾಖ್‌ ಬಗ್ಗೆ ಒಪ್ಪಂದವೊಂದನ್ನು ಮಾಡಿಸಲಾಗುವುದು ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕೋರ್ಟ್‌ಗೆ ಹೇಳುತ್ತದೆ. 

ಡೈವೋರ್ಸ್‌
ಇಡೀ ವಿಚಾರಣೆಯ ಕೇಂದ್ರ ಬಿಂದು ಇದೇ ಆಗಿದೆ. ವಕೀಲರಾದ ಇಂದಿರಾ ಜೈಸಿಂಗ್‌ ಅವರು, ತ್ರಿವಳಿ ತಲಾಖ್‌ ಎಂಬುದು ಪುರುಷರಿಗೆ ನೀಡಿದ ಹೆಚ್ಚುವರಿ ಕಾನೂನಿನ ಬಲ ಎನ್ನುತ್ತಾರೆ. ಆದರೆ ಮಹಿಳೆಗೆ ಮಾತ್ರ ಖುಲಾಗೆ (ಡೈವೋರ್ಸ್‌) ಸೀಮಿತ ಮಾಡಲಾಗಿದೆ ಎಂದು ಹೇಳುತ್ತಾರೆ. ನ್ಯಾ. ಜೋಸೆಫ್ ಅವರು, ಒಂದೊಮ್ಮೆ ಕೋರ್ಟ್‌ ತ್ರಿವಳಿ ತಲಾಖ್‌ ನಿಷೇಧಿಸಿದರೆ ಆಗ ಡೈವೋರ್ಸ್‌ಗೆ ಮಾರ್ಗವಿದೆಯೇ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಕಪಿಲ್‌ ಸಿಬಲ್‌, ತ್ರಿವಳಿ ತಲಾಖ್‌ ಅನ್ನು ಮುಸ್ಲಿಮರಲ್ಲಿ ಶೇ.0.37 ಮಂದಿಯಷ್ಟೇ ಉಪಯೋಗಿಸುತ್ತಾರೆ. ಉಳಿದವರು ಡೈವೋರ್ಸ್‌ನ ಬೇರೆ ವಿಧಾನಗಳ ಬಳಕೆ ಮಾಡುತ್ತಾರೆ ಎಂಬ ಉತ್ತರ ಕೊಡುತ್ತಾರೆ. 

ಲೆಜಿಸ್ಲೆಚರ್‌
ಕೇಂದ್ರ ಸರಕಾರದ ಪರ ಹಾಜರಾಗಿದ್ದ ಆಗಿನ ಅಟಾರ್ನಿ ಜನರಲ್‌ ಮುಕುಲ್‌ ರೋಹ್ಟಗಿ ಅವರು, ಮುಸ್ಲಿಮರಲ್ಲಿ ಇರುವ ತಲಾಖ್‌ ಪದ್ಧತಿಯನ್ನು ತೆಗೆದು, ಇತರೆ ಧರ್ಮದಲ್ಲಿ ಇರುವಂತೆಯೇ ಕಾನೂನಿನ ಬಲ ನೀಡುವಂತೆ ವಾದಿಸುತ್ತಾರೆ. ಕೋರ್ಟ್‌ ಕೂಡ 1937ರಲ್ಲಿ ರಚನೆಯಾದ ಶರಿಯತ್‌ ಅಪ್ಲಿಕೇಶನ್‌ ಆ್ಯಕ್ಟ್‌ನಲ್ಲಿ ಇದೆಯೇ ಎಂದು ಪರಿಶೀಲಿಸಿ, ಕಡೆಗೆ ಇದೆ ಎಂದು ಒಪ್ಪಿಕೊಳ್ಳುತ್ತದೆ. 

ಖುಲಾ
ಇದು ವಿಚ್ಛೇದನ ನೀಡಲು ಮಹಿಳೆಯರಿಗಷ್ಟೇ ಇರುವ ಅವಕಾಶ. ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಖುಲಾ ಪದ್ಧತಿ ಸಾಕೇ ಎಂಬ ಬಗ್ಗೆಯೂ ಕೋರ್ಟ್‌ ಪರಿಶೀಲನೆ ನಡೆಸಿದೆ. ಆದರೆ, ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿಯ ವಕೀಲರು, ‘ಖುಲಾ ಇರುವುದು ಕೇವಲ ಕಾಗದದಲ್ಲಷ್ಟೆ. ಸಾಮಾಜಿಕ ಒತ್ತಡದಿಂದಾಗಿ ಮಹಿಳೆಯರು ಈ ಪದ್ಧತಿಯನ್ನು ಅನುಸರಿಸಲು ಹೆದರುತ್ತಾರೆ’ ಎಂದರು. ಅದಕ್ಕೆ ಪ್ರತಿಯಾಗಿ ಮಾತನಾಡಿದ ಸಲ್ಮಾನ್‌ ಖುರ್ಷಿದ್‌, ‘ಖಾಜಿಯನ್ನು ಭೇಟಿಯಾದ ಬೆನ್ನಲ್ಲೇ ವಿಚ್ಛೇದನಕ್ಕೆ ಸೂಕ್ತ ಕಾರಣ ನೀಡಿದರೆ ಆ ಮಹಿಳೆ ಖುಲಾವನ್ನು ಬಳಸಿಕೊಳ್ಳುವ ಅವಕಾಶವಿದೆ’ ಎಂದರು.

ಮುಸ್ಲಿಂ ವಿವಾಹ ಕಾಯ್ದೆ 1939
ಮುಸ್ಲಿಂ ಮಹಿಳೆಯರಿಗೆ ಕೆಲವು ಕಾರಣಗಳನ್ನು ಹೇಳಿ ತನ್ನ ಪತಿಗೆ ವಿಚ್ಛೇದನ ನೀಡುವ ಹಕ್ಕು ಇದೊಂದೇ ಕಾಯ್ದೆಯಲ್ಲಿ ಇರುವ ಕಾರಣ ಈ ಕಾಯ್ದೆ ಚರ್ಚೆಗೆ ಬಂತು. ಪುರುಷರಿಗಷ್ಟೇ ತತ್‌ಕ್ಷಣ ತಲಾಖ್‌ ನೀಡುವ ಅವಕಾಶವಿದೆ. ಆದರೆ, ಮಹಿಳೆಯನಿಗೆ ಅಂಥ ಅವಕಾಶವಿಲ್ಲ ಎಂದು ವಕೀಲ ಅಮಿತ್‌ ಸಿಂಗ್‌ ವಾದಿಸಿದ್ದರು. ನ್ಯಾಯವಾದಿ ಇಂದಿರಾ ಜೈಸಿಂಗ್‌ ಅವರು ತತ್‌ಕ್ಷಣವೇ ತ್ರಿವಳಿ ತಲಾಖ್‌ ಕ್ರಮ ರದ್ದುಗೊಳಿಸುವಂತೆ ಹೇಳಿದರು.

ವಿಶೇಷ ವಿವಾಹ ಕಾಯ್ದೆ
ಇದು ಎರಡು ಭಿನ್ನ ಧರ್ಮಗಳಿಗೆ ಸೇರಿದವರು ವಿವಾಹವಾಗಲು ಇರುವಂಥ ಕಾಯ್ದೆ. ಈ ಕಾಯ್ದೆಯನ್ನು ಪ್ರಸ್ತಾಪಿಸಿದ್ದ ಕಪಿಲ್‌ ಸಿಬಲ್‌, ‘ಯಾವ ಮುಸ್ಲಿಂ ಹೆಣ್ಣು ಮಗಳಿಗೆ ತ್ರಿವಳಿ ತಲಾಖ್‌ನ ಹಿಂಸೆಯಿಂದ ಹೊರಬರಬೇಕು ಎಂದನಿಸುತ್ತದೋ, ಆಕೆ ಈ ಕಾಯ್ದೆಯನ್ವಯ ವಿವಾಹ ಆಗಬಹುದಲ್ಲವೇ’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಇಂದಿರಾ ಜೈಸಿಂಗ್‌, ‘ಇದು ಮಹಿಳೆಯರನ್ನು ಧಾರ್ಮಿಕ ವ್ಯವಸ್ಥೆಯಿಂದಲೇ ಹೊರನೂಕುವ ಯತ್ನ. ಇದರ ಬದಲು, ಆಕೆಗೆ ತನ್ನ ಧರ್ಮದಲ್ಲೇ ಇದ್ದು ಕೊಂಡು, ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾದ ಪದ್ಧತಿಯಿಂದ ಹೊರಬರುವಂತೆ ಮಾಡಬೇಕಿದೆ,’ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next