ನವದೆಹಲಿ: ಸುದೀರ್ಘ 4ಗಂಟೆಗಳ ಕಾಲ ಫ್ರಾನ್ಸ್ ಜತೆಗಿನ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಬುಧವಾರ ತೀರ್ಪನ್ನು ಕಾಯ್ದಿರಿಸಿದೆ.
ರಫೇಲ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆ ಅಥವಾ ಬೇಡವೇ ಎಂಬ ಆದೇಶವನ್ನು ಕಾಯ್ದಿರಿಸಿದೆ.
ಅಷ್ಟೇ ಅಲ್ಲ ಯುದ್ಧ ವಿಮಾನದ ದರದ ವಿವರದ ಬಗ್ಗೆ ಈಗ ಚರ್ಚಿಸುವುದು ಬೇಡ. ಅರ್ಜಿದಾರರಿಗೆ ಈ ಹಂತದಲ್ಲಿ ಸರ್ಕಾರ ಯುದ್ಧ ವಿಮಾನದ ಬೆಲೆಯ ಮಾಹಿತಿಯನ್ನು ಹಂಚಿಕೊಳ್ಳಬೇಕಾದ ಅಗತ್ಯವಿಲ್ಲ. ರಫೇಲ್ ಡೀಲ್ ಕುರಿತು ಕೋರ್ಟ್ ನಿರ್ಧಾರ ತೆಗೆದುಕೊಂಡ ನಂತರ ಬೆಲೆ ಬಗ್ಗೆ ಸಾರ್ವಜನಿಕ ವಲಯಕ್ಕೆ ನೀಡಬೇಕೆ ಬೇಡವೇ ಚರ್ಚೆಯ ಬಗ್ಗೆ ನಿಲುವು ತೆಗೆದುಕೊಳ್ಳಲು ನಿರ್ದೇಶನ ನೀಡುವುದಾಗಿ ತಿಳಿಸಿದೆ.
ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಸೂಕ್ತ ಕ್ರಮ ಅನುಸರಿಸಲಾಗಿದೆಯೇ ಎಂಬುದನ್ನು ನಿರ್ಧರಿಸುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿಗಳ ವಿವರಣೆಯನ್ನು ಸುಪ್ರೀಂ ಪೀಠ ಪಡೆದಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಎಸ್ ಕೆ ಕೌಲ್ ಮತ್ತು ಕೆಎಂ ಜೋಸೆಫ್ ನೇತೃತ್ವದ ತ್ರಿಸದಸ್ಯ ಪೀಠ ನಡೆಸಿದ ವಿಚಾರಣೆ ವೇಳೆ, ನಮಗೆ ರಕ್ಷಣಾ ಸಚಿವಾಲಯದವರ ಅಗತ್ಯವಿಲ್ಲ. ಖರೀದಿಗೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಯ ಅಧಿಕಾರಿಗಳ ವಿವರಣೆ ಬೇಕು ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರಿಗೆ ಸೂಚನೆ ನೀಡಿತ್ತು.
ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಇಂದು ಏರ್ ಮಾರ್ಷಲ್ ವಿಆರ್ ಚೌಧರಿ ಮತ್ತು ಇಬ್ಬರು ಹಿರಿಯ ಅಧಿಕಾರಿಗಳು ತ್ರಿಸದಸ್ಯ ಪೀಠಕ್ಕೆ ವಿವರಣೆ ನೀಡಿದ್ದರು. ಫ್ರಾನ್ಸ್ ನ ಡಸ್ಸಾಲ್ಟ್ ಕಂಪನಿ ಜೊತೆ 36 ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ಹೇಗೆ ನಿರ್ಧಾರ ಕೈಗೊಳ್ಳಲಾಯಿತು ಎಂಬ ಬಗ್ಗೆ ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟ್ ಗೆ ವಿವರ ನೀಡಿತ್ತು. ಯುದ್ಧ ವಿಮಾನದ ಬೆಲೆ ಕುರಿತ ಮಾಹಿತಿಯನ್ನೂ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ಸಲ್ಲಿಸಿತ್ತು.