ನವದೆಹಲಿ: ದೇಶದಲ್ಲಿನ ಧಾರ್ಮಿಕ ಮತಾಂತರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಬುಧವಾರ (ಸೆಪ್ಟೆಂಬರ್ 06) ನಿರಾಕರಿಸಿದೆ.
ಇದನ್ನೂ ಓದಿ:Panaji: ಬಾರ್ಜ್ ನ ಮುಂಭಾಗದ ಕಬ್ಬಿಣದ ತಗಡು ಮುರಿದು ಬಿದ್ದು ಪ್ರಯಾಣಿಕರ ಪರದಾಟ
“ಈ ವಿಚಾರದಲ್ಲಿ ನ್ಯಾಯಾಲಯ ಏಕೆ ಮಧ್ಯಪ್ರವೇಶಿಸಬೇಕು? ನ್ಯಾಯಾಲಯ ಸರ್ಕಾರಕ್ಕೆ ಹೇಗೆ ರಿಟ್ ಜಾರಿಗೊಳಿಸಲು ಸಾಧ್ಯ ಎಂದು ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ಜಸ್ಟೀಸ್ ಜೆ.ಬಿ.ಪರ್ಡಿವಾಲಾ , ಜಸ್ಟೀಸ್ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಪ್ರಶ್ನಿಸಿದೆ.
ದೇಶದಲ್ಲಿ ಹಿಂದೂಗಳು ಮತ್ತು ಅಲ್ಪಸಂಖ್ಯತ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಮತಾಂತರಗೊಳಿಸುತ್ತಿದ್ದಾರೆ ಎಂದು ಕರ್ನಾಟಕ ಮೂಲದ ಪಿಐಎಲ್ ಅರ್ಜಿದಾರ ಜೇರೋಮ್ ಆನ್ಟು ಅವರ ಪರ ವಕೀಲರು ಸುಪ್ರೀಂ ಪೀಠಕ್ಕೆ ತಿಳಿಸಿದ್ದರು.
ಒಂದು ವೇಳೆ ಈ ಸಮಸ್ಯೆ ಇನ್ನೂ ಜೀವಂತವಾಗಿದ್ದರೆ ಮತ್ತು ಈ ವಿಷಯದಲ್ಲಿ ಯಾರನ್ನಾದರೂ ವಿಚಾರಣೆಗೊಳಪಡಿಸಿದ್ದರೆ ಆ ಸಂದರ್ಭದಲ್ಲಿ ನಾವು ಮಧ್ಯಪ್ರವೇಶಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ಇದ್ಯಾವ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ? ಈಗ ಪ್ರತಿಯೊಬ್ಬರಿಗೂ ಇಂತಹ ವಿಷಯಗಳಲ್ಲಿ ಪಿಐಎಲ್ ಸಲ್ಲಿಸುವುದು ಒಂದು ಅಸ್ತ್ರವಾಗಿಬಿಟ್ಟಿದೆ ಎಂದು ಸುಪ್ರೀಂಕೋರ್ಟ್ ಅಸಮಧಾನವ್ಯಕ್ತಪಡಿಸಿದೆ.