ನವದೆಹಲಿ: ಚುನಾವಣಾ ಬಾಂಡ್ (ಈಗ ನಿಷೇಧಿತ)ಗಳ ಮಾರಾಟದ ಬಗ್ಗೆ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶರ ಮೂಲಕ ಎಸ್ ಐಟಿ (SIT) ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ (Supreme court) ಶುಕ್ರವಾರ (ಆ.02) ವಜಾಗೊಳಿಸಿದೆ.
ಸುಪ್ರೀಂಕೋರ್ಟ್ ನ ಚೀಫ್ ಜಸ್ಟೀಸ್ (CJI)ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಜಸ್ಟೀಸ್ ಜೆಬಿ ಪರ್ಡಿವಾಲಾ ಮತ್ತು ಜಸ್ಟೀಸ್ ಮನೋಜ್ ಮಿಶ್ರಾ ಅವರ ಪೀಠವು, ಚುನಾವಣಾ ಬಾಂಡ್ ಕುರಿತು ನಿವೃತ್ತ ಜಡ್ಜ್ ಅವರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಆದೇಶ ನೀಡುವುದು ಅಸಮರ್ಪಕ ಹಾಗೂ ಆತುರದ ನಿರ್ಧಾರವಾಗಲಿದೆ ಎಂದು ಹೇಳಿದೆ.
ಹಾಲಿ ಇರುವ ಕಾಯ್ದೆಯಲ್ಲಿಯೇ ನಿರ್ದಿಷ್ಟ ಆರೋಪದ ಕುರಿತು ತನಿಖೆ ನಡೆಸಲು ನಿರಾಕರಿಸುವ ಅವಕಾಶವೂ ಇದೆ ಎಂದು ಸುಪ್ರೀಂ ಪೀಠ ತಿಳಿಸಿದೆ. ಈ ಹಂತದಲ್ಲಿ ಒಂದು ವೇಳೆ ಸಾಮಾನ್ಯ ಪರಿಹಾರವು ಪರಿಣಾಮಕಾರಿಯಾಗುವುದಿಲ್ಲವೇ ಎಂದು ಕೋರ್ಟ್ ಹೇಳಲು ಸಾಧ್ಯವಿಲ್ಲ.
ಚುನಾವಣಾ ಬಾಂಡ್ ವಿಚಾರದಲ್ಲಿ ವಿಶೇಷ ತನಿಖೆ ನಡೆಸಬೇಕಾದ ಅಗತ್ಯವಿದೆ. ಯಾಕೆಂದರೆ ಇದರಲ್ಲಿ ಆಡಳಿತರೂಢ ಪಕ್ಷ, ಸರ್ಕಾರ ಹಾಗೂ ಪ್ರತಿಷ್ಠಿತ ಕಾರ್ಪೋರೇಟ್ ಕಂಪನಿಗಳು ಶಾಮೀಲಾಗಿರುವುದಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದರು.
ಇದೊಂದು 8,000 ಸಾವಿರ ಕೋಟಿಗೂ ಅಧಿಕ ಹಣದ ವಿಚಾರಣೆಯಾಗಿದೆ. ಇನ್ನು ಕೆಲವು ಪ್ರಕರಣಗಳಲ್ಲಿ ತಮಿಳುನಾಡಿನಲ್ಲಿ ಇ.ಡಿ. ದಾಳಿ ಎದುರಿಸಿದ್ದ IFB Agro ಬರೋಬ್ಬರಿ 40 ಕೋಟಿ ರೂಪಾಯಿ ಬಾಂಡ್ ಗಳನ್ನು ಖರೀದಿಸಿತ್ತು. ಇದು ಕೇವಲ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾದ ವಿಚಾರವಲ್ಲ ಎಂದು ಭೂಷಣ್ ಹೇಳಿದರು.
ಭಾರತದ ಇತಿಹಾಸದಲ್ಲಿ ನಡೆದ ಅತೀ ಕೆಟ್ಟ ಆರ್ಥಿಕ ಹಗರಣ ಇದಾಗಿದೆ. ಹೀಗಾಗಿ ಸುಪ್ರೀಂಕೋರ್ಟ್ ನ ನಿವೃತ್ತ ಜಸ್ಟೀಸ್ ಮೂಲಕ ತನಿಖೆ ನಡೆಸದಿದ್ದರೆ, ಯಾವ ಸತ್ಯವೂ ಹೊರಗೆ ಬರಲು ಸಾಧ್ಯವಿಲ್ಲ ಎಂದು ಭೂಷಣ್ ವಾದ ಮಂಡಿಸಿದ್ದರು.
“ನಾವು ಚುನಾವಣಾ ಬಾಂಡ್ ಅನ್ನೇ ರದ್ದುಪಡಿಸಿದ್ದೇವೆ. ಈಗ ಎಸ್ ಐಟಿ ಏನು ತನಿಖೆ ಮಾಡುತ್ತದೆ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದ್ದು, ಇದರಲ್ಲಿ ಯಾರು ಶಾಮೀಲಾಗಿದ್ದಾರೆ ಎಂಬುದು ತಿಳಿಯಬೇಕಿದೆ ಎಂದು ಭೂಷಣ್ ಪ್ರತಿಕ್ರಿಯೆ ನೀಡಿದ್ದರು. ಕಾನೂನಿನಲ್ಲಿ ಪರಿಹಾರ ಇರುವಾಗ ನಾವು ಎಸ್ ಐಟಿಯನ್ನು ನೇಮಕ ಮಾಡಬಹುದೇ ಎಂದು ಚೀಫ್ ಜಸ್ಟೀಸ್ ಪ್ರಶ್ನಿಸಿದ್ದರು.
ಆಗ ಮಧ್ಯಪ್ರವೇಶಿಸಿದ ಜಸ್ಟೀಸ್ ಪರ್ಡಿವಾಲಾ, ನೀವು (ಭೂಷಣ್) ಹೇಳುತ್ತೀರಿ ಇದರಲ್ಲಿ ನಕಲಿ ಕಂಪನಿಗಳು ಶಾಮೀಲಾಗಿವೆ ಎಂದು, ಹಾಗಾದರೆ ಎಸ್ ಐಟಿ ಏನು ಮಾಡುತ್ತದೆ, ನೀವು ಎಸ್ ಐಟಿಯಿಂದ ಏನು ನಿರೀಕ್ಷಿಸುತ್ತೀರಿ ಎಂದು ಪ್ರಶ್ನಿಸಿ, ತನಿಖಾ ತಂಡ ರಚಿಸಲು ನಿರಾಕರಿಸಿದೆ ಎಂದು ವರದಿ ತಿಳಿಸಿದೆ.
ಚುನಾವಣಾ ಬಾಂಡ್ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿತ್ತು. ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಈ ವಿವಾದ ಲೋಕಸಭಾ ಚುನಾವಣೆಗೆ ಕೆಲವು ವಾರಗಳು ಇರುವ ಮುನ್ನವೇ ಫೆಬ್ರವರಿಯಲ್ಲಿ ಚುನಾವಣಾ ಬಾಂಡ್ ಗಳನ್ನು ನಿಷೇಧಿಸಿ ತೀರ್ಪು ನೀಡಿತ್ತು.