ನವದೆಹಲಿ: ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ವಿವಾದಿತ ಪದ್ಮಾವತಿ ಸಿನಿಮಾ ನಿಷೇಧಿಸಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ, ಆಲ್ಲದೇ ಸಿನಿಮಾ ಪ್ರದರ್ಶನದ ಬಗ್ಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಪ್ರಮುಖ ಪಾತ್ರವಹಿಸಲಿದೆ, ಆ ಕೆಲಸವನ್ನು ಕೋರ್ಟ್ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಶಾಹಿದ್ ಕಪೂರ್ ಅಭಿನಯದ ಪದ್ಮಾವತಿ ಸಿನಿಮಾ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್ ಅನ್ನು ವಜಾಗೊಳಿಸಿದೆ. ಪದ್ಮಾವತಿ ಸಿನಿಮಾದ ಬಗ್ಗೆ ಸೆನ್ಸಾರ್ ಮಂಡಳಿ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದೆ.
ಸೆನ್ಸಾರ್ ಮಂಡಳಿ ನಿರ್ಧರಿಸದೇ ಇರುವಾಗ ಕೋರ್ಟ್ ಯಾಕೆ ಸಿನಿಮಾ ಬಿಡುಗಡೆ ಬಗ್ಗೆ ಮಧ್ಯಪ್ರವೇಶಿಸಬೇಕು ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ಪದ್ಮಾವತಿ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕೆಂಬ ಚಿತ್ರ ನಿರ್ಮಾಪಕರ ಮನವಿಯನ್ನು ಗೀತ ರಚನಕಾರ ಪ್ರಸೂನ್ ಜೋಷಿ ನೇತೃತ್ವದ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ತಿರಸ್ಕರಿಸಿದೆ.
ಸೆನ್ಸಾರ್ ಸರ್ಟಿಫಿಕೇಟ್ಗಾಗಿ ಸಲ್ಲಿಸಲಾಗಿರುವ ಅರ್ಜಿಗಳನ್ನು ದಿನಾಂಕದ ಅನುಕ್ರಮಣಿಕೆಯ ಪ್ರಕಾರ ಪರಾಮರ್ಶಿಸಿದ ಬಳಿಕವೇ ಸಂಜಯ್ ಲೀಲಾ ಭನ್ಸಾಲಿ ಅವರ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಲಾಗುವುದು ಎಂದು ಸಿಬಿಎಫ್ಸಿ ಹೇಳಿದೆ.