ನವದೆಹಲಿ: ಕಾವೇರಿ ನದಿಯಿಂದ ಪ್ರತಿದಿನ 24 ಸಾವಿರ ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈ ಬಗ್ಗೆ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ.
ಇದನ್ನೂ ಓದಿ:Onion Issue: ಸೂರ್ಯನಲ್ಲಿಗೆ ನೌಕೆ ಕಳುಹಿಸುವ ಮೊದಲು ಈರುಳ್ಳಿ ಸಮಸ್ಯೆ ಬಗೆಹರಿಸಿ: ಶಿವಸೇನೆ
ಶುಕ್ರವಾರ (ಆಗಸ್ಟ್ 25) ಕಾವೇರಿ ನೀರು ಕುರಿತು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕಾವೇರಿ ನೀರು ಹರಿಸುವ ವಿಚಾರದಲ್ಲಿ ನ್ಯಾಯಾಲಯ ಯಾವುದೇ ಪರಿಣತಿ ಹೊಂದಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
ಅಲ್ಲದೇ ಕರ್ನಾಟಕ ಸರ್ಕಾರ ತಮಿಳುನಾಡಿಗೆ ಎಷ್ಟು ಪ್ರಮಾಣದಲ್ಲಿ ನೀರು ಬಿಡುತ್ತಿದೆ ಎಂಬ ಬಗ್ಗೆ ಕಾವೇರಿ ಜಲ ನಿರ್ವಹಣಾ ಮಂಡಳಿ ಸೆಪ್ಟೆಂಬರ್ 8ರೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸೋಮವಾರ (ಆಗಸ್ಟ್ 28) ಸಭೆ ನಿಗದಿಪಡಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಕೋರ್ಟ್ ಗೆ ಮಾಹಿತಿ ನೀಡಿದಾಗ, ಕರ್ನಾಟಕ ಸರ್ಕಾರ ಎಷ್ಟು ಪ್ರಮಾಣದಲ್ಲಿ ನೀರನ್ನು ಬಿಡುತ್ತಿದೆ ಎಂಬ ಬಗ್ಗೆ ವರದಿ ನೀಡುವಂತೆ ಸುಪ್ರೀಂಕೋರ್ಟ್ ನ ಜಸ್ಟೀಸ್ ಬಿಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
ಕರ್ನಾಟಕ ಸರ್ಕಾರ ನಿತ್ಯ 24 ಕ್ಯೂಸೆಕ್ ನೀರನ್ನು ಬಿಡುವಂತೆ ಕೋರಿ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿದ್ದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಕೂಡಾ ತಮಿಳುನಾಡಿನ ಅರ್ಜಿ ಪ್ರಶ್ನಿಸಿ 26 ಪುಟಗಳ ಅಫಿಡವಿಟ್ ಅನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿತ್ತು.