ನವದೆಹಲಿ: ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡಲು ವ್ಯಕ್ತಿಗಳಿಗೆ ಮತ್ತು ಉದ್ಯಮಿಗಳಿಗೆ ಅನುವು ಮಾಡಿಕೊಡುವ ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಸಂಪೂರ್ಣ ಅಂಕಿಅಂಶಗಳನ್ನು ಹಂಚಿಕೊಳ್ಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ (ಮಾರ್ಚ್ 15) ತರಾಟೆಗೆ ತೆಗೆದುಕೊಂಡಿದೆ.
ಇದನ್ನೂ ಓದಿ:ನಾನು ಸ್ವರ್ಗದಲ್ಲಿ ಸಂತೋಷವಾಗಿದ್ದೇನೆ… ಜೈಲಿನಲ್ಲಿದ್ದುಕೊಂಡೇ ಲೈವ್ ವಿಡಿಯೋ ಮಾಡಿದ ಆರೋಪಿ
ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್, ಕಳೆದ ಐದು ವರ್ಷಗಳ ದೇಣಿಗೆಯ ಎಲ್ಲಾ ವಿವರಗಳನ್ನು ನೀಡುವಂತೆ ಎಸ್ ಬಿಐಗೆ ನಿರ್ದೇಶನ ನೀಡಿದೆ.
ಚುನಾವಣಾ ಆಯೋಗದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಎಸ್ ಬಿಐ ಅಪೂರ್ಣವಾದ ಅಂಕಿಅಂಶವನ್ನು ನೀಡಿದೆ. ಚೀಫ್ ಜಸ್ಟೀಸ್ ಡಿವೈ ಚಂದ್ರಚೂಡ್ ನೇತೃತ್ವದ ಪಂಚಸದಸ್ಯ ಪೀಠ, ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಎಲ್ಲಾ ಅಂಕಿಅಂಶಗಳನ್ನು ಬಹಿರಂಗಗೊಳಿಸುವಂತೆ ಎಸ್ ಬಿಐಗೆ ನಿರ್ದೇಶನ ನೀಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪರವಾಗಿ ಯಾರು ಹಾಜರಾಗುತ್ತಿದ್ದಾರೆ? ಅವರು ಚುನಾವಣಾ ಬಾಂಡ್ ಗಳ ಸಂಖ್ಯೆಗಳನ್ನು ಬಹಿರಂಗಪಡಿಸಿಲ್ಲ. ಅದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಹಿರಂಗಪಡಿಸಬೇಕು ಎಂದು ಸಿಜೆಐ ಚಂದ್ರಚೂಡ್ ಹೇಳಿದರು.
ಚುನಾವಣಾ ಬಾಂಡ್ ಗಳ ಸಂಖ್ಯೆಯಿಂದ ದೇಣಿಗೆದಾರರು ಮತ್ತು ರಾಜಕೀಯ ಪಕ್ಷಗಳ ನಡುವಿನ ಸಂಬಂಧದ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ ಎಂದು ಸುಪ್ರೀಂಕೋರ್ಟ್, ಮಾರ್ಚ್ 18ರಂದು ನಡೆಯಲಿರುವ ಮುಂದಿನ ವಿಚಾರಣೆ ವೇಳೆ ಎಸ್ ಬಿಐ ಈ ಬೇಜವಾಬ್ದಾರಿ ಬಗ್ಗೆ ವಿವರಣೆ ನೀಡಬೇಕು ಎಂದು ತಾಕೀತು ಮಾಡಿದೆ.