ನವದೆಹಲಿ: ರಫೇಲ್ ಯುದ್ಧ ವಿಮಾನಗಳ ಒಪ್ಪಂದಕ್ಕೆ ಸಂಬಂಧಿಸಿದಂತೆ ಅರ್ಜಿದಾರ ಪ್ರಶಾಂತ್ ಭೂಷಣ್ ಮತ್ತು ಇತರರು ಕದ್ದಿದ್ದರಿಂದ ಸೋರಿಕೆಯಾಗಿದ್ದು, ರಾಷ್ಟ್ರದ ಭದ್ರತೆಗೆ ಧಕ್ಕೆಯಾಗಿದೆ ಎಂದು ರಕ್ಷಣಾ ಇಲಾಖೆ, ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ರಕ್ಷಣಾ ಇಲಾಖೆ ಕಾರ್ಯದರ್ಶಿ ಸಂಜಯ್ ಮಿತ್ರ ಸುಪ್ರೀಂಕೋರ್ಟ್‌ಗೆ ಬುಧವಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಈ ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಮಾಜಿ ಸಚಿವರಾದ ಯಶವಂತ ಸಿನ್ಹಾ, ಅರುಣ್ ಶೌರಿ, ನ್ಯಾಯವಾದಿ ಪ್ರಶಾಂತ್ ಭೂಷಣ್ ಮಹತ್ವದ ದಾಖಲೆಗಳನ್ನು ಸೋರಿಕೆ ಮಾಡಿದ್ದಾರೆ. ಜತೆಗೆ ಅವರು ಸರ್ಕಾರದ ಅನುಮತಿ ಇಲ್ಲದೆ ಅವುಗಳನ್ನು ನಕಲು ಮಾಡಿದ್ದಾರೆ ಎಂದೂ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ದೂರಿದೆ. ಗುರುವಾರ ನಡೆಯಲಿರುವ ವಿಚಾರಣೆ ಮುನ್ನವೇ ಕೇಂದ್ರ ಸರ್ಕಾರ ಈ ಪ್ರಮಾಣ ಪತ್ರ ಸಲ್ಲಿಸಿದೆ.
ರಫೇಲ್ ಒಪ್ಪಂದದಲ್ಲಿ ಕೇಂದ್ರ ಸರ್ಕಾರಕ್ಕೆ ಕಳೆದ ವರ್ಷ ಕ್ಲೀನ್ ಚಿಟ್ ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪಿನ ಪುನರ್ ಪರಿಶೀಲನೆಗಾಗಿ ಅರುಣ್ ಶೌರಿ, ಯಶವಂತ್ ಸಿನ್ಹಾ ಹಾಗೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ರಕ್ಷಣಾ ಇಲಾಖೆಯ ವ್ಯಾಪ್ತಿಯಲ್ಲಿದ್ದ ರಫೇಲ್ ಒಪ್ಪಂದ ಸಂಬಂಧಿ ದಾಖಲೆಗಳ ನಕಲು ಪ್ರತಿಗಳನ್ನು ಅಡ್ಡದಾರಿಯಲ್ಲಿ ಸಂಪಾದಿಸಿ ಅವುಗಳನ್ನು ಅರ್ಜಿಯೊಂದಿಗೆ ಲಗತ್ತಿಸಲಾಗಿದೆ.
ಈ ದಾಖಲೆಗಳ ನಕಲು ಪ್ರತಿಗಳನ್ನಾಧರಿಸಿ ಕೆಲ ಮಾಧ್ಯಮಗಳೂ ರಫೇಲ್ ಒಪ್ಪಂದದ ಬಗ್ಗೆ ವರದಿ ಮಾಡಿದ್ದು, ಇದೆಲ್ಲದರಿಂದ ಭಾರತೀಯ ಸೇನಾ ಬಲದ ಬಗ್ಗೆ ಶತ್ರು ರಾಷ್ಟ್ರಗಳಿಗೆ ಮಾಹಿತಿ ನೀಡಿದಂತಾಗಿದ್ದು, ರಾಷ್ಟ್ರೀಯ ಭದ್ರತೆಗೆ, ಭಾವೈಕ್ಯತೆಗೆ ಹಾಗೂ ವಿದೇಶಗಳೊಂದಿಗೆ ಭಾರತ ಹೊಂದಿರುವ ಸೌಹಾರ್ದಯುತ ಬಾಂಧವ್ಯಕ್ಕೆ ಧಕ್ಕೆ ಉಂಟಾಗಿದೆ ಎಂದು ದೂರಿದೆ.