ದೇಶದ ಸಂವಿಧಾನದ ಪ್ರಕಾರ ಕೆಲವು ನಿರ್ದಿಷ್ಟ ಪ್ರಕರಣಗಳನ್ನು ಹೊರತುಪಡಿಸಿದಂತೆ ಸಾರ್ವಜನಿಕರ ಹಿತದೃಷ್ಟಿಯ ಕಾರಣವನ್ನು ಮುಂದಿಟ್ಟು ಎಲ್ಲ ಖಾಸಗಿ ಸಂಪನ್ಮೂಲವನ್ನು ರಾಜ್ಯ ಸರಕಾರಗಳು ಸ್ವಾಧೀನಪಡಿಸಿ ಕೊಳ್ಳಲಾಗದು ಎಂದು ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪೊಂದನ್ನು ಮಂಗಳವಾರ ನೀಡಿದೆ.
ತನ್ಮೂಲಕ ಸುಪ್ರೀಂ ಕೋರ್ಟ್ 1978ರ ತನ್ನ ಐತಿಹಾಸಿಕ ತೀರ್ಪನ್ನು ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್ನ ಈ ಆದೇಶ ಅತ್ಯಂತ ಸಮಯೋಚಿತ ಮತ್ತು ಸಂತುಲಿತವಾದುದಾಗಿದ್ದು, ಖಾಸಗಿ ವಲಯದ ಹಿತರಕ್ಷಣೆಯ ಜತೆಜತೆಯಲ್ಲಿ ಎಲ್ಲ ಆಸ್ತಿ ಮತ್ತು ಸಂಪನ್ಮೂಲಗಳ ಮೇಲೆ ಹಕ್ಕು ಸ್ಥಾಪಿಸಲೆತ್ನಿಸುವ ವ್ಯಕ್ತಿಗಳಿಗೂ ತಮ್ಮ ಅಧಿಕಾರ ವ್ಯಾಪ್ತಿಯನ್ನು ನೆನಪಿಸಿಕೊಟ್ಟಿದೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನವ ಸದಸ್ಯರ ಸಾಂವಿಧಾನಿಕ ಪೀಠ 7:2 ರ ಬಹುಮತದ ತೀರ್ಪಿನಲ್ಲಿ ಖಾಸಗಿ ಆಸ್ತಿಯು ಸಮುದಾಯದ ಭೌತಿಕ ಸಂಪನ್ಮೂಲದ ಭಾಗವಾಗಿದೆಯಾದರೂ ಖಾಸಗಿ ವ್ಯಕ್ತಿಯ ಒಡೆತನದಲ್ಲಿರುವ ಎಲ್ಲ ಸಂಪನ್ಮೂಲವು ಸಮುದಾಯದ ಭೌತಿಕ ಸಂಪನ್ಮೂಲದ ಭಾಗವಾಗಬೇಕಿರುವುದು ಅನಿವಾರ್ಯವೇನಲ್ಲ ಎಂದು ಅಭಿಪ್ರಾಯಪಟ್ಟಿದೆ. ಸಾಂವಿಧಾನಿಕ ಪೀಠದ ಈ ಮಹತ್ತರ ತೀರ್ಪಿನಿಂದಾಗಿ ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಸಾರ್ವಜನಿಕ ಉದ್ದೇಶ ಮತ್ತು ಹಿತದೃಷ್ಟಿಯಿಂದ ಖಾಸಗಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರಕಾರಗಳಿಗೆ ಅಧಿಕಾರವಿದೆ ಎಂದು ಸಮಾಜವಾದ ಸಿದ್ಧಾಂತದ ಆಧಾರದ ಮೇಲೆ ನೀಡಿದ್ದ ಎಲ್ಲ ತೀರ್ಪುಗಳು ಕೂಡ ನಿರರ್ಥಕಗೊಂಡಂತಾಗಿದೆ.
ಖಾಸಗಿ ಆಸ್ತಿ, ಸಂಪನ್ಮೂಲದ ವಿಷಯವಾಗಿ ಕಳೆದ ಹಲವಾರು ದಶಕಗಳಿಂದ ಕಾನೂನು ಸಂಘರ್ಷ ನಡೆಯುತ್ತಲೇ ಬಂದಿತ್ತು. ಹೈಕೋರ್ಟ್, ಸುಪ್ರೀಂ ಕೋರ್ಟ್ಗಳಲ್ಲಿ ಈ ಸಂಬಂಧ ವಿವಿಧ ಅರ್ಜಿಗಳು ಸಲ್ಲಿಕೆಯಾಗಿದ್ದವು. 1978ರಲ್ಲಿ ನ್ಯಾ| ವಿ.ಎಸ್.ಕೃಷ್ಣ ಅಯ್ಯರ್ ಅವರು ನೀಡಿದ್ದ ತೀರ್ಪಿನ ಆಧಾರದಲ್ಲಿ ಬಹುತೇಕ ಸಂದರ್ಭಗಳಲ್ಲಿ ಖಾಸಗಿ ವ್ಯಕ್ತಿಗಳ ಒಡೆತನದಲ್ಲಿರುವ ಸಂಪನ್ಮೂಲವನ್ನು ಸಾರ್ವಜನಿಕ ಒಳಿತಿಗಾಗಿ ಬಳಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಸರಕಾರಗಳು ಸ್ವಾಧೀನಪಡಿಸಿಕೊಳ್ಳಬಹುದು ಎಂದು ಪುನುರುತ್ಛರಿಸುತ್ತಲೇ ಬರಲಾಗಿತ್ತು. ಈಗ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠ ಈ ಬಗೆಗಿನ ಎಲ್ಲ ಕಾನೂನು ಗೊಂದಲಗಳಿಗೆ ತೆರೆ ಎಳೆದಂತಾಗಿದೆ.
ಇದೇ ವೇಳೆ ನ್ಯಾಯಪೀಠ ತೀರ್ಪಿನಲ್ಲಿ ಹಾಲಿ ಪರಿಸ್ಥಿತಿಯತ್ತ ಬೆಳಕು ಚೆಲ್ಲಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಖಾಸಗಿ ವಲಯದ ಪ್ರಾಮುಖ್ಯದತ್ತಲೂ ಬೆಟ್ಟು ಮಾಡಿದೆ. ಖಾಸಗಿ ಕ್ಷೇತ್ರ ಕೂಡ ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತಿದೆ. ಸಂವಿಧಾನದ ಪರಿಚ್ಛೇದ 39(ಬಿ)ಯ ಪ್ರಕಾರವೂ ಖಾಸಗಿ ಒಡೆತನದಲ್ಲಿರುವ ಸಂಪನ್ಮೂಲದ ಭಾಗವಾಗಿ ಪರಿಗಣಿಸಲಾಗದು ಎಂದು ಉಲ್ಲೇಖೀಸುವ ಮೂಲಕ ಖಾಸಗಿ ವ್ಯಕ್ತಿಗಳ ಒಡೆತನದಲ್ಲಿರುವ ಸಂಪನ್ಮೂಲದ ಮೇಲಣ ಅವರ ಅಧಿಕಾರವನ್ನು ಕಬಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಇದರ ಜತೆಯಲ್ಲಿ ತನ್ನ ತೀರ್ಪಿನ ಆರಂಭದಲ್ಲಿಯೇ ಕೆಲವೊಂದು ಪ್ರಕರಣಗಳನ್ನು ಹೊರತುಪಡಿಸಿದಂತೆ ಎಂದು ಹೇಳುವ ಮೂಲಕ ತುರ್ತು ಸಂದರ್ಭಗಳಲ್ಲಿ ಖಾಸಗಿ ಆಸ್ತಿ ಅಥವಾ ಸಂಪನ್ಮೂಲವನ್ನು ಸರಕಾರಗಳು ಸ್ವಾಧೀನಪಡಿಸಿಕೊಳ್ಳುವ ಅಧಿಕಾರವನ್ನು ಹೊಂದಿವೆ ಎಂಬುದನ್ನು ಕೂಡ ಬೆಟ್ಟು ಮಾಡಿದೆ.
ಸುಪ್ರೀಕೋರ್ಟ್ನ ಈ ತೀರ್ಪು “ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ’ ಕಂಡುಬಂದರೂ ಸಂಪನ್ಮೂಲ ಅಥವಾ ಆಸ್ತಿ ಹಕ್ಕು ಯಾ ಅಧಿಕಾರದ ವಿಷಯದಲ್ಲಿ ಖಾಸಗಿಯವರಾಗಲೀ ಸರಕಾರವಾಗಲೀ ಆನೆ ನಡೆದದ್ದೇ ದಾರಿ ಎಂಬಂತೆ ನಡೆದುಕೊಳ್ಳಬಾರದು ಎಂಬುದನ್ನು ಸೂಚ್ಯವಾಗಿ ಹೇಳಿದೆ. ಆಸ್ತಿ ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಸರಕಾರ ಸಂವಿಧಾನ, ಸುಪ್ರೀಂನ ತೀರ್ಪನ್ನು ಮುಂದಿಟ್ಟು ಖಾಸಗಿ ವ್ಯಕ್ತಿಗಳ ಮೇಲೆ ಸವಾರಿ ಮಾಡುವಂತಿಲ್ಲ ಎನ್ನುತ್ತಲೇ ಒಡೆತನದ ಅಂಶವನ್ನು ಮುಂದಿರಿಸಿ ಸಾರ್ವಜನಿಕ ಹಿತಾಸಕ್ತಿಯ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿ ಉಂಟುಮಾಡುವಂತಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುವ ಮೂಲಕ ಜಟಿಲ ಕಾನೂನು ವಿವಾದಕ್ಕೆ ತೆರೆ ಎಳೆದಿದೆ.